ಶುಕ್ರವಾರ, ಜೂನ್ 18, 2021
22 °C

‘ಅಕ್ರಮ ಮದ್ಯ, -ಹಣದ ಮೇಲೆ ನಿಗಾವಹಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಲೋಕಸಭಾ ಚುನಾವ­ಣೆಯ ಸಂದರ್ಭದಲ್ಲಿ ಅಕ್ರಮ ಮದ್ಯ ವಹಿವಾಟನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ವೆಚ್ಚ ವೀಕ್ಷಕ ತಮೀಝ್‌ ವೆಂಡಾನ್‌ ಹೇಳಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಸಭಾಭವನದಲ್ಲಿ ಬುಧವಾರ ನಡೆದ ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ವೆಚ್ಚ ನಿರ್ವಹಣೆ ಕುರಿತು ರಚಿಸಲಾಗಿರುವ ವಿವಿಧ ಸಮಿತಿಗಳ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.‘ನೆರೆಯ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಜಿಲ್ಲೆಗೆ ಅಕ್ರಮ ಮದ್ಯ ವಹಿವಾಟು ನಡೆಯುವ ಸಾಧ್ಯತೆಗಳು ಹೆಚ್ಚಿವೆ. ಈ ನಿಟ್ಟಿನಲ್ಲಿ ಸೂಕ್ಷ್ಮ ಸ್ಥಳಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಬೇಕು. ಅಲ್ಲಿ ಅಬಕಾರಿ ಇಲಾ­ಖೆಯ ಸಿಬ್ಬಂದಿ ಜೊತೆಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು’ ಎಂದು ಸೂಚಿಸಿದರು.‘ಜಿಲ್ಲೆಯ ಪ್ರತಿಯೊಂದು ಮದ್ಯದ ಅಂಗಡಿಗಳಿಂದ ಮದ್ಯದ ವಹಿವಾಟು ಹಾಗೂ ಮಾರಾಟದ ಕುರಿತು ಸಮಗ್ರ  ವಿವರ ಪಡೆಯಬೇಕು. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಈ ಅಂಗಡಿಗಳಲ್ಲಿ ಖರೀದಿ ಮತ್ತು ಮಾರಾಟ ಹೆಚ್ಚಳವಾದರೆ, ಕೂಡಲೇ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದರು.‘ಜಿಲ್ಲೆಯಲ್ಲಿ ಮದ್ಯ ಸಂಗ್ರಹದ ಗೋದಾಮುಗಳಲ್ಲಿ ಸಹ 27x7 ವಿಡಿಯೋ ಚಿತ್ರೀಕರಣದ ವ್ಯವಸ್ಥೆ ಮಾಡಬೇಕು. ಪ್ರತಿಯೊಂದು ಡಿಸ್ಟಿಲರಿಗಳ ಉತ್ಪಾದನೆ ಹಾಗೂ ವಿತರಣೆಯ ಮೇಲೆ ನಿಗಾ ಇಡಬೇಕು. ಬೆಳಗಾವಿ ಜಿಲ್ಲೆಯ ಅಬಕಾರಿ ಅಧಿಕಾರಿಗಳು ನೆರೆಯ ಗೋವಾ ಹಾಗೂ ಮಹಾರಾಷ್ಟ್ರದ ಅಬಕಾರಿ ಅಧಿಕಾರಿಗಳೊಂದಿಗೆ ಸಮನ್ವಯತೆ ಹೊಂದಿರಬೇಕು’ ಎಂದರು.ಜಿಲ್ಲಾ ಚುನಾವಣಾಧಿಕಾರಿ ಎನ್.ಜಯರಾಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್‌ ಉಪಸ್ಥಿತರಿದ್ದರು.ಕೆಪಿಟಿಸಿಎಲ್ ಎಂಜಿನಿಯರ್‌ ಅಮಾನತು

ಬೆಳಗಾವಿ
: ಲೋಕಸಭಾ ಚುನಾವಣೆಯ ಕೆಲಸದಲ್ಲಿ ನಿರ್ಲಕ್ಷ್ಯ ತೋರಿದ ಕೆಪಿಟಿಸಿಎಲ್ ಚಿಕ್ಕೋಡಿ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಎಸ್.ಎಸ್. ಕುಸನಾಳೆ ಅವರನ್ನು ಅಮಾನತುಗೊಳಸಿ ಜಿಲ್ಲಾ ಚುನಾವಣಾಧಿಕಾರಿ ಎನ್. ಜಯರಾಂ ಆದೇಶ ಹೊರಡಿಸಿದ್ದಾರೆ.

ಕೆಪಿಟಿಸಿಎಲ್ ಸಹಾಯಕ ಎಂಜಿನಿಯರ್‌ ಬಿ.ವಿ.ಗಸ್ತಿ ಅವರಿಗೆ ಚುನಾವಣಾ ಕೆಲಸದಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕೆ ಜಯರಾಮ್‌ ನೋಟಿಸ್‌ ಜಾರಿಗೊಳಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.ಅಭ್ಯರ್ಥಿಗಳು ಪ್ರತಿಜ್ಞಾ ಪತ್ರ ಸಲ್ಲಿಕೆ ಕಡ್ಡಾಯ

ಬೆಳಗಾವಿ:
ಏಪ್ರಿಲ್‌. 17ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರದೊಂದಿಗೆ ನಮೂನೆ-26ರಲ್ಲಿ ಪ್ರತಿಜ್ಞಾ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಭಾರತ ಚುನಾವಣಾ ಆಯೋಗವು ತಿಳಿಸಿದೆ.

ಪ್ರತಿಜ್ಞಾ ಪತ್ರದಲ್ಲಿ ಸರಿಯಾದ ಮಾಹಿತಿಯೊಂದಿಗೆ ಎಲ್ಲ ಅಂಕಣಗಳನ್ನು ತುಂಬಬೇಕು. ಯಾವುದೇ ಅಂಕಣವನ್ನು ಖಾಲಿ ಬಿಡಲು ಅಥವಾ ಅಡ್ಡಗೆರೆ ಹಾಕಲು ಅವಕಾಶ ಇಲ್ಲ. ನಮೂನೆ-26ರಲ್ಲಿ ನಿರ್ದಿಷ್ಟ ಅಂಕಣಗಳು ಅಭ್ಯರ್ಥಿಗೆ ಅನ್ವಯವಾಗದೇ ಇದ್ದರೆ ‘Nil’ ಅಥವಾ ‘Not Applicable’ ಎಂದು ಸ್ಪಷ್ಟವಾಗಿ ನಮೂದಿಸಬೇಕು.ನಮೂನೆ-26 ಅನ್ನು ಭರ್ತಿ ಮಾಡದೇ ಸಲ್ಲಿಸಿದ ಅರ್ಜಿಗಳು ಚುನಾವಣಾಧಿಕಾಗಳಿಂದ ತಿರಸ್ಕರಿಸಲ್ಪಡುತ್ತವೆ. ಆದ್ದರಿಂದ ಎಲ್ಲ ಅಭ್ಯರ್ಥಿಗಳು ನಮೂನೆ-26 ಅನ್ನು ಸರಿಯಾಗಿ ಭರ್ತಿ ಮಾಡಿ ನಾಮಪತ್ರ ಸಲ್ಲಿಸಬೇಕು ಎಂದು ಚುನಾವಣಾ ಆಯೋಗವು ಪ್ರಕಟಣೆಯಲ್ಲಿ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.