‘ಅಕ್ರಮ ರಿಯಲ್ ಎಸ್ಟೇಟ್ ದಂಧೆಗೆ ಕಡಿವಾಣ’

7

‘ಅಕ್ರಮ ರಿಯಲ್ ಎಸ್ಟೇಟ್ ದಂಧೆಗೆ ಕಡಿವಾಣ’

Published:
Updated:

ಮಾನ್ವಿ: ಸ್ಥಳೀಯ ಪುರಸಭೆಯ ಅನುಮತಿ ಇಲ್ಲದೆ ಮಾನ್ವಿ ಪಟ್ಟಣದ ಸೀಮೆಯಲ್ಲಿರುವ ಜಮೀನುಗಳನ್ನು ಕಾನೂನು ಬಾಹಿರವಾಗಿ ನಿವೇಶನಗ­ಳನ್ನಾಗಿ ಪರಿವರ್ತಿಸಿ ರಿಯಲ್ ಎಸ್ಟೇಟ್ ದಂಧೆ ನಡೆಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಅಕ್ರಮಕ್ಕೆ ಕಡಿವಾಣ ಹಾಕುವುದಾಗಿ ಪುರಸಭೆಯ ಅಧ್ಯಕ್ಷ ಸೈಯದ್ ನಜೀರುದ್ದೀನ್ ಖಾದ್ರಿ  ಎಚ್ಚರಿಕೆ ನೀಡಿದ್ದಾರೆ.ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಗುರುವಾರ ಅವರು ಪುರಸಭೆ ಕಚೇರಿಯಲ್ಲಿ ಉಪಾಧ್ಯಕ್ಷ ದೊಡ್ಡಬಸಪ್ಪ ವಕೀಲ್ ಜತೆಗೆ ಮೊದಲ ಬಾರಿಗೆ ಪತ್ರಿಕಾಗೋಷ್ಠಿ ನಡೆಸಿದರು. ಹೊಸದಾಗಿ ಲೇಔಟ್‌ಗಳ ನಿರ್ಮಾ­ಣಕ್ಕೆ ಸಂಬಂಧಿಸಿದಂತೆ ಪುರ­ಸಭೆಯ ಅನು­ಮತಿಯಿಲ್ಲದೆ ಸಂಗಾಪುರ ಮತ್ತಿ­ತರ ಗ್ರಾಮ ಪಂಚಾಯಿತಿಗಳಲ್ಲಿ ಭೂಮಿ ವರ್ಗಾವಣೆ ಹಾಗೂ ನಿವೇಶನಗಳನ್ನು ನೋಂದಾಯಿಸಿ ಸಾರ್ವ­ಜನಿಕ ಹಾಗೂ ಪುರಸಭೆಯನ್ನು ವಂಚಿಸಲಾಗುತ್ತಿದೆ. ಈ ಕುರಿತು ಉಪನೋಂದಾಣಾಧಿಕಾರಿ ಗಮನಕ್ಕೆ ತರಲಾಗಿದ್ದು, ನಿವೇಶನಗಳನೋಂದಣಿಗೆ ಪುರಸಭೆಯ ಅನುಮತಿ ಕಡ್ಡಾಯಗೊಳಿಸಲಾಗುವುದು ಎಂದು ತಿಳಿಸಿದರು. ಪಟ್ಟಣದ ಜನತೆಗೆ ಸಮರ್ಪಕ ವಿದ್ಯುತ್ ಹಾಗೂ ಶುದ್ಧ ಕುಡಿಯುವ ನೀರಿನ ಪೂರೈಕೆ, ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಗೆ ಕಾಮಗಾರಿಯ ಅಂದಾಜು ವೆಚ್ಚವನ್ನು ಈಗಿನ ದರಕ್ಕೆ ಅನುಗುಣವಾಗಿ 41.85ಕೋಟಿಗೆ ಪರಿಷ್ಕರಿಸಲಾಗಿದ್ದು, ಕೆರೆ ನಿರ್ಮಾಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಮುಗಿದಿದೆ. ಭೂಮಿ ಕಳೆದು­ಕೊಂಡವರಿಗೆ ಪರಿಹಾರ ನೀಡುವ ಸಂಬಂಧ ಹಣದ ಕೊರತೆ ಇದೆ. 5.86ಕೋಟಿ ರೂಪಾಯಿ ಸಂಪೂರ್ಣ ಪರಿಹಾರ ಧನ ನೀಡಿದ ನಂತರ ಕೆರೆಗೆ ಮೀಸಲಾದ ಜಮೀನನ್ನು ಪುರಸಭೆ ಹೆಸರಿನಲ್ಲಿ ನೋಂದಣಿ ಪ್ರಕ್ರಿಯೆ ಮುಗಿಸಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.ಬಸ್ ನಿಲ್ದಾಣದ ಹತ್ತಿರ ಪುರಸಭೆ ಮಳಿಗೆಗಳಲ್ಲಿ ನಡೆಯುವ  ತರಕಾರಿ ಮಾರಾಟವನ್ನು ಸಂತೆ ಮಾರುಕಟ್ಟೆ ಪ್ರದೇಶಕ್ಕೆ 15ದಿನಗಳ ಒಳಗೆ ಸ್ಥಳಾಂತರಿಸಲಾಗುವುದು. ಪೌರ­ಕಾರ್ಮಿ­­ಕರಿಗೆ ನಿವೇಶನ ಸೌಲಭ್ಯ, ವಾರ್ಡ್‌ ನಂ. 14ರಲ್ಲಿ ವಾಲ್ಮೀಕಿ ಭವನ ನಿರ್ಮಾಣ , ವಾರ್ಡ್‌ ನಂ.20ರಲ್ಲಿ ಮಹಿಳೆಯರಿಗೆ ಶೌಚಾಲಯ ನಿರ್ಮಾಣ, ಜೈ ಭೀಮನಗರ ಹಾಗೂ ಬಾಬಾ ನಾಯ್ಕ ಕಾಲೊನಿಗಳಲ್ಲಿರುವ ಉದ್ಯಾನಗಳ ಅಭಿವೃದ್ಧಿ, ವಿದ್ಯಾರ್ಥಿ­ನಿಲಯಗಳು ಹಾಗೂ ಸಮುದಾಯ ಭವನಗಳ ನವೀಕರಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.ಉಪಾಧ್ಯಕ್ಷ ದೊಡ್ಡಬಸಪ್ಪ ವಕೀಲ ಮಾತನಾಡಿದರು. ಪುರಸಭೆ ಮುಖ್ಯಾಧಿ­­ಕಾರಿ ವೆಂಕಟೇಶ, ಖಾಲೀದ್ ಖಾದ್ರಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry