‘ಅಗರ್’ಗೀಗ ಅಗ್ರಸ್ಥಾನ

7

‘ಅಗರ್’ಗೀಗ ಅಗ್ರಸ್ಥಾನ

Published:
Updated:

ಮಲೆನಾಡಿನ ಬಹುತೇಕ ರೈತರ ತೋಟದಲ್ಲಿ ಕಾಫಿ ಕೈ ಕೊಟ್ಟಿದೆ. ಅಡಿಕೆ ಗತಿ ಎಂಥದ್ದೋ ಎಂಬ ಚಿಂತೆ ಕಾಡುತ್ತಿದೆ. ಕಾಳುಮೆಣಸು ಬೆಳೆಗಾರರಿಗೇ ಖಾರವಾಗುತ್ತಿವೆ. ಇದಕ್ಕಾಗಿ ಈ ಭಾಗದ ರೈತರೆಲ್ಲ ಈಗ ತೋಟಗಾರಿಕಾ ಬೆಳೆಯಾದ ‘ಅಗರ್’ ಮೊರೆ ಹೋಗಿದ್ದಾರೆ. ಪರಿಚಯವೇ ಇಲ್ಲದ ‘ಅಗರ್’ಗೆ ಈಗ ಅಗ್ರಸ್ಥಾನ ದೊರೆತಿದೆ.ಹೌದು. ಕೆಲ ವರ್ಷಗಳ ಹಿಂದೆ ‘ಅಗರ್’ ಈ ಭಾಗದ ರೈತರಿಗೆ ಅಪರಿಚಿತವಾಗಿತ್ತು. ಆದರೆ ಈಗ ಬೆಳೆಗಾರರೇ ಇದನ್ನು ಕೇಳಿ ಪಡೆಯು­ತ್ತಿ­ದ್ದಾರೆ. ಇದರ ಕೃಷಿ ಸುಲಭ. ಕಾಫೀ ತೋಟಗಳಲ್ಲಂತೂ ಹುಲುಸಾಗಿ ಬೆಳೆಯುತ್ತದೆ. ಅಷ್ಟೇ ಅಲ್ಲದೇ ಅಡಿಕೆ, ತೆಂಗು, ಕೋಕೋ, ರಬ್ಬರ್, ಏಲಕ್ಕಿ, ಟೀ ತೋಟಗಳಲ್ಲೂ ಇದು ಬೆಳೆಯುವುದು ಸುಲಭ. ಅದಕ್ಕಾಗಿ ಲಕ್ಷಾಂತರ ‘ಅಗರ್’ ಮರಗಳು ಈ ತೋಟಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ. ಪ್ರಸ್ತುತ ಕಾಫಿ ಬೆಳೆಗಾರರ ಆರ್ಥಿಕ ಸ್ಥಿರತೆ ಕಾಪಾಡುವಲ್ಲಿ ‘ಅಗರ್’ ಬೆಳೆ ಪರಿಣಾಮಕಾರಿಯಾಗಿದೆ. ಬೆಳೆಗಾರರು ತಮ್ಮ ತೋಟಗಳಲ್ಲಿ ‘ಅಗರ್’ ಬೆಳೆಸುವುದರಿಂದ ಯಾವುದೇ ತೊಂದರೆಯಾಗದು. ಉಪಬೆಳೆಯಾಗಿ ಮಾತ್ರ ಬೆಳೆಯದೆ ಪ್ರತ್ಯೇಕ ತೋಟಗಳನ್ನಾಗಿಯೂ ಬೆಳೆಯಬಹುದು ಎನ್ನುತ್ತಾರೆ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಡಾ ಪ್ರದೀಪ್.ಏನಿದು ‘ಅಗರ್’

ಅಕ್ವೆಲೇರಿಯಾ ಕ್ರಾಸಾನಾ ಕಾಸಿಯಾನ ಕುಟುಂಬಕ್ಕೆ ಸೇರಿರುವ ಈ ಮರವನ್ನು ಸ್ಥಳೀಯವಾಗಿ ‘ಅಗರ್’ ಎಂದು ಗುರುತಿಸಲಾಗಿದೆ. ಈ ಮರಗಳೆಲ್ಲವೂ ಶ್ರೀಗಂಧದಂತೆ ಸ್ವಾಭಾವಿಕ ಸುವಾಸನೆಯೊಂದಿಗೆ ಬೆಳೆಯಲಾರವು. ಕೃತಕವಾಗಿ ‘ಅಗರ್’ ಅಭಿವೃದ್ಧಿಪಡಿಸಬೇಕಾಗುತ್ತದೆ. ಈ ಕಾರ್ಯಕ್ಕೆ ಎಂಟರಿಂದ ಹತ್ತು ವರ್ಷ ವಯಸ್ಸಿನ 25-–30 ಇಂಚು ಸುತ್ತಳತೆ ಹೊಂದಿರುವ ‘ಅಗರ್’ ಮರಗಳನ್ನು ಆಯ್ಕೆ ಮಾಡಿಕೊಂಡು ಕಾಂಡ­ಗ­ಳಿಗೆ ಅಲ್ಲಲ್ಲಿ ರಂಧ್ರ ಕೊರೆದೋ, ಚುಚ್ಚು ಮದ್ದಿನ ಮೂಲಕವೋ ವಿವಿಧ ತಂತ್ರಜ್ಞಾನ ಬಳಸಬೇಕಾಗುತ್ತದೆ. ಅಭಿವೃದ್ಧಿಪಡಿಸಿದ ಶಿಲೀಂಧ್ರಿಯ­ಗಳನ್ನು ಕಾಂಡದೊಳಗೆ ತೂರಿಸಿ ರೆಸಿನ್ ಎಂಬ ಭಾಗ ಬೆಳೆಯಲು ಅನುಕೂಲ ಮಾಡಿಕೊಡ­ಲಾಗುತ್ತದೆ. ಈ ರೆಸಿನ್ ಅಭಿವೃದ್ಧಿ ಹೊಂದಲು 12ರಿಂದ -15 ತಿಂಗಳ ಕಾಲಾವಕಾಶ ಬೇಕು. ರೆಸಿನ್ ಅಭಿವೃದ್ಧಿ ಹೊಂದಿದೊಡನೆ ಮರದ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಒಣಗುವ ಹಂತ ತಲುಪಿದೊಡನೆ ಮರಗಳನ್ನು ಕಟಾವು ಮಾಡಬೇಕು. ಕಟಾವಾದ ಮರಗಳಿಂದ ದೊರೆಯುವ ಕಪ್ಪು ಬಣ್ಣದ ಭಾಗವೇ ‘ಅಗರ್’.ಮರಗಳಲ್ಲಿ ಅಭಿವೃದ್ಧಿ ಹೊಂದಿದ್ದ ಕಪ್ಪು ಬಣ್ಣದ ಭಾಗವನ್ನು ಬೇರ್ಪಡಿಸಿ ಚಕ್ಕೆ ರೂಪದ ಈ ‘ಅಗರ್’ ಅನ್ನು ಯಂತ್ರ ಬಳಸಿ ಪುಡಿಮಾಡಿ, 150 ಲೀಟರ್ ಗಾತ್ರದ ಡ್ರಮ್‌ಗಳಲ್ಲಿ ಪ್ರತೀ ಡ್ರಮ್‌ಗಳಿಗೆ ನೂರು ಲೀಟರ್ ಶುದ್ಧ ನೀರು ತುಂಬಿಸಿ ಅದರಲ್ಲಿ 15 ಕೆ.ಜಿ ಪ್ರಮಾಣದ ‘ಅಗರ್’ ಪುಡಿ ಬೆರೆಸಬೇಕು. ಈ ವಿಧಾನವನ್ನು ‘ಫರ್ಮನ್ಟೇಷನ್’ ಎನ್ನುತ್ತಾರೆ. ಈ ಮಿಶ್ರಣವನ್ನು ದಿನಕ್ಕೆರಡು ಬಾರಿ ಕದಡಲಾಗುತ್ತದೆ. ಈ ಕ್ರಿಯೆಯ ಹತ್ತು ದಿನಗಳ ನಂತರ ತಾಮ್ರ ಮತ್ತು ಸ್ಟೀಲ್ ಲೋಹದ ಜಾಡಿಗಳ ಮೂಲಕ ಬಟ್ಟಿ ಇಳಿಸುವ ತಂತ್ರಜ್ಞಾನ ಘಟಕಗಳಲ್ಲಿ ಹತ್ತು ದಿನಗಳ ಕಾಲ ಬೇಯಿಸಿ ‘ಅಗರ್’ ಎಣ್ಣೆಯನ್ನು ಹೊರತೆಗೆಯಲಾಗುತ್ತದೆ. ‘ಅಗರ್’ ತೈಲ ಅರಬ್ ದೇಶಗಳಲ್ಲಿ ಸೆಂಟಾಗಿ ಬಳಕೆಯಲ್ಲಿದೆ. ಅಂತೆಯೇ ಗುಟ್ಕಾದಂತಹ ವಸ್ತುಗಳಲ್ಲಿ ಹಾಗು ವಿವಿಧ ರೂಪದ ಪದಾರ್ಥಗಳಲ್ಲಿ ಅತಿ ಹೆಚ್ಚು ಬೇಡಿಕೆಯಲ್ಲಿದೆ.ಸಂಸ್ಥೆಯ ಶ್ರಮ

‘ಅಗರ್’ಮ ಅಭಿವೃದ್ಧಿಗೆ ವನದುರ್ಗಿ ‘ಅಗರ್’ ವುಡ್ ಸಂಸ್ಥೆಯ ಶ್ರಮ ಕಾರಣ. ‘ಅಗರ್’ ವಿದೇಶಿ ಮರವೇನಲ್ಲ. ಹಾಗೆಯೇ ಅಭಿವೃದ್ಧಿಪಡಿಸಿರುವ ಮರವೂ ಅಲ್ಲ. ಭಾರತದ ಈಶಾನ್ಯ ಭಾಗದ ಅಸ್ಸಾಂ, ಅರುಣಾಚಲ ಪ್ರದೇಶ್, ಸಿಕ್ಕಿಂ, ತ್ರಿಪುರಾ, ಮಿಜೋರಾಂ, ಮೇಘಾಲಯ, ಮಣಿಪುರ, ನಾಗಾಲ್ಯಾಂಡ್, ರಾಜ್ಯಗಳ ಅರಣ್ಯಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತಿದ್ದ ಈ ಮರ ತನ್ನ ಮೌಲ್ಯವನ್ನು ಗುಟ್ಟಾಗಿಸಿಕೊಂಡಿದ್ದವು. ಹಾಗಾಗಿ ಕಳ್ಳಕಾಕರ ಕೊಡಲಿಗೆ ಸಿಲುಕಿ ಅಳಿವಿನ ಅಂಚಿಗೂ ಜಾರಿದ್ದವು. ಅಮೆರಿಕ, ಥೈಲ್ಯಾಂಡ್, ಮಲೇಶಿಯಾ, ಸಿಂಗಪುರ, ಆಫ್ರಿಕಾ ಖಂಡಗಳಲ್ಲಿ ‘ಅಗರ್’ ದೊಡ್ಡ ಉದ್ಯಮವಾಗಿದೆ.ಈ ಬೆಳೆಯನ್ನು ಯಾರು ಬೇಕಾದರೂ ಬೆಳೆಯಬಹುದು. ಆದರೆ ಏಕಾಂಗಿಯಾಗಿ ಬೆಳೆದಲ್ಲಿ ಗುಣಮಟ್ಟದ ಸಸಿ ಪಡೆಯುವಿಕೆ, ನಾಟಿ ಹಾಗೂ ಆರೈಕೆ ಕ್ರಮ, ಕಟಾವು ಮತ್ತು ಮಾರುಕಟ್ಟೆ ಅಡಚಣೆ ಸಾಮಾನ್ಯ. ಅದಕ್ಕಾಗಿಯೇ ನಂಬಿಕೆಯುಳ್ಳ ಸಂಸ್ಥೆಗಳ ಮಾರ್ಗದರ್ಶನದೊಂದಿಗೆ ಹೆಜ್ಜೆ ಹಾಕಿದಲ್ಲಿ ಎಲ್ಲವೂ ಸುಗಮ ಎನ್ನುತ್ತಾರೆ ವನದುರ್ಗಿ ಸಂಸ್ಥೆಯ ಧರ್ಮೇಂದ್ರ ಕುಮಾರ್ ಹೆಗ್ಗಡೆ. ಇವರದ್ದೇ ಆದ ಮಾದರಿ ‘ಅಗರ್’ ತೋಟವನ್ನೇ ಮಾಡಿದ್ದು, ತೋಟದಲ್ಲಿ ‘ಅಗರ್’ ಕಟಾವಿಗೂ ಸಜ್ಜುಗೊಂಡಿದೆ.

ಸಂಪರ್ಕಕ್ಕೆ 080 25592426.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry