‘ಅಧಿಕ ಅಶ್ವಶಕ್ತಿ ಎಂಜಿನ್‌ ದೋಣಿ ನಿರ್ಬಂಧಿಸಿ’

7

‘ಅಧಿಕ ಅಶ್ವಶಕ್ತಿ ಎಂಜಿನ್‌ ದೋಣಿ ನಿರ್ಬಂಧಿಸಿ’

Published:
Updated:

ಕಾರವಾರ:‘ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮೀನುಗಾರರು ಜಿಲ್ಲೆಯ ಕರಾವಳಿ ತೀರದಲ್ಲಿ ಮೀನುಗಾರಿಕೆ ನಡೆಸುವುದನ್ನು ನಿರ್ಬಂಧಿಸಬೇಕು’ ಎಂದು ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಅಧ್ಯಕ್ಷ ಗಣಪತಿ ಮಾಂಗ್ರೆ ಇತ್ತೀಚೆಗೆ ಇಲ್ಲಿ ಆಗ್ರಹಿಸಿದರು.‘ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಮೀನುಗಾರರು ದೋಣಿಗಳಿಗೆ 350 ಅಶ್ವಶಕ್ತಿಯುಳ್ಳ ಎಂಜಿನ್‌ಗಳನ್ನು ಬಳಸುತ್ತಿದ್ದಾರೆ. ಈ ದೋಣಿಗಳು ಗಂಟೆಗೆ 30 ರಿಂದ 40 ಕಿಲೋ ಮೀಟರ್‌ ವೇಗದಲ್ಲಿ ಚಲಿಸುತ್ತದೆ. ಈ ಮೀನುಗಾರಿಕೆ ಅವೈಜ್ಞಾನಿಕವಾಗಿದ್ದು, ಇದರಿಂದ ಮೀನುಗಳ ಸಂತಾನೋತ್ಪತ್ತಿಗೆ ಅಡ್ಡಿಯಾಗುತ್ತಿದೆ. ಮೀನುಗಳ ಮೊಟ್ಟೆಗಳು ಜೀವ ಪಡೆಯುವ ಮೊದಲೇ ಕರಗಿ ಹೋಗುತ್ತಿವೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.‘ರಾಜ್ಯದಲ್ಲಿ ಯಾಂತ್ರಿಕೃತ ದೋಣಿಗಳಿಗೆ 250 ಅಶ್ವಶಕ್ತಿಗಿಂತ ಹೆಚ್ಚಿನ ಸಾಮರ್ಥ್ಯದ ಎಂಜಿನ್‌ ಬಳಸುವುದನ್ನು ನಿಷೇಧಿಸಲಾಗಿದೆ. ಆದರೆ ಮೀನುಗಾರಿಕೆಯನ್ನೇ ಉದ್ಯಮವನ್ನಾಗಿಸಿಕೊಂಡ ಕೆಲವರು ಸರ್ಕಾರ ಮಟ್ಟದಲ್ಲಿ ಲಾಬಿ ನಡೆಸಿ ದೋಣಿಗಳಲ್ಲಿ 350 ಅಶ್ವಶಕ್ತಿ ಸಾಮರ್ಥ್ಯದ ಎಂಜಿನ್‌ ಬಳಸುತ್ತಿದ್ದಾರೆ. ಇದು ಹೀಗೇ ಮುಂದುವರಿದರೆ ಸಮುದ್ರದಲ್ಲಿ ಮೀನಿನ ಸಂತತಿಯೇ ನಾಶವಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.‘ಅತಿ ವೇಗದ ಈ ದೋಣಿಗಳು ಆಳ ಸಮುದ್ರದಲ್ಲಿ ಮಾತ್ರ ಮೀನುಗಾರಿಕೆ ನಡೆಸಬೇಕು. ಆದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ದೋಣಿಗಳು ಜಿಲ್ಲೆಯಲ್ಲಿ ತೀರಕ್ಕೆ ಬಂದು ಹಗಲು, ರಾತ್ರಿ ಎನ್ನದೇ ಮೀನುಗಾರಿಕೆ ನಡೆಸುತ್ತಿದೆ. ಇದರಿಂದ ಜಿಲ್ಲೆಯ ನಾಡ ದೋಣಿಗಳಿಗೂ ಮೀನುಗಳು ಸಿಗದಂತಾಗಿದೆ.ಗೋವಾ ರಾಜ್ಯದಲ್ಲಿ ಆಳ ಸಮುದ್ರದ ದೋಣಿಗಳು 30ರಿಂದ 40 ನಾಟಿಕಲ್‌ ಮೈಲಿಗಿಂತ ಕಡಿಮೆ ಅಂತರದಲ್ಲಿ ಮೀನುಗಾರಿಕೆ ನಡೆಸುವುದನ್ನು ನಿಷೇಧಿಸಲಾಗಿದೆ. ಆದರೆ ಜಿಲ್ಲೆಯಲ್ಲಿ ಮಾತ್ರ ಇದಕ್ಕೆ ಯಾವುದೇ ನಿರ್ಬಂಧ ಇಲ್ಲ. ಹೀಗಾಗಿ ಎಲ್ಲ ದೋಣಿಗಳು ಜಿಲ್ಲೆಯ ತೀರಕ್ಕೆ ಬಂದು ಮೀನು ಸಂಪತ್ತನ್ನು ದೋಚುತ್ತಿವೆ. ಇದರಿಂದ ಇಲ್ಲಿನ ಮೀನುಗಾರರು ಜೀವನ ನಡೆಸುವುದು ಕಷ್ಟಕರವಾಗಿದೆ. ಹೀಗಾಗಿ ಕರಾವಳಿಯ ಮೂರು ಶಾಸಕರೊಂದಿಗೆ ಸಭೆ ನಡೆಸಿ, ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ದೇಶಪಾಂಡೆ  ಒಳಗೊಂಡ ನಿಯೋಗದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಮಸ್ಯೆ ಬಗ್ಗೆ ಮನವರಿಕೆ ಮಾಡಲಾಗುವುದು’ ಎಂದರು.ಮೀನುಗಾರ ಮುಖಂಡ ಕೆ.ಟಿ. ತಾಂಡೇಲ್‌, ಕಾರವಾರದ ಟ್ರಾಲರ್‌ ಬೋಟ್‌ ಯೂನಿಯನ್‌ ಅಧ್ಯಕ್ಷ ವೆಂಕಟೇಶ ತಾಂಡೇಲ್‌, ಪರ್ಸೀನ್‌ ಬೋಟ್‌ ಯೂನಿಯನ್‌ ಅಧ್ಯಕ್ಷ ಮೋಹನ ಬೋಳ್ಸೇಕರ್‌, ಟ್ರಾಲರ್‌ ಬೋಟ್‌ ಮೀನುಗಾರ ಸಹಕಾರಿ ಸಂಘದ ಅಧ್ಯಕ್ಷ ಸುರೇಶ ತಾಂಡೇಲ್‌,  ಪ್ರಮೋದ ಬಾನಾವಳಿ   ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry