‘ಅನುದಾನ ವಾಪಸ್ಸಾದರೆ ಅಧಿಕಾರಿಗಳೇ ಹೊಣೆ’

6

‘ಅನುದಾನ ವಾಪಸ್ಸಾದರೆ ಅಧಿಕಾರಿಗಳೇ ಹೊಣೆ’

Published:
Updated:

ಶಿರಸಿ: ‘ಲೋಕಸಭೆ ಚುನಾವಣೆ ಮಾರ್ಚ್‌ ತಿಂಗಳಲ್ಲಿ ಘೋಷಣೆಯಾಗುವ ಸಾಧ್ಯತೆ ಇದ್ದು, ಎಲ್ಲ ಇಲಾಖೆಗಳು ಫೆಬ್ರುವರಿ ಅಂತ್ಯದೊಳಗೆ ಕ್ರಿಯಾಯೋಜನೆಯ ಗುರಿ ತಲುಪಬೇಕು. ಮಂಜೂರು ಆಗಿರುವ ಅನುದಾನ ಸರ್ಕಾರಕ್ಕೆ ವಾಪಸ್ಸಾದರೆ ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆ’ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಗುರುಪಾದ ಹೆಗಡೆ ಹೇಳಿದರು.ಸೋಮವಾರ ಇಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು. ಇದೇ 19ಕ್ಕೆ ಮಕ್ಕಳಿಗೆ ಪಲ್ಸ್ ಪೋಲಿಯೊ ಹನಿ ಹಾಕುವ ಕಾರ್ಯಕ್ರಮವಿದೆ. ಇದೇ ಹೊತ್ತಿಗೆ ಕದಂಬೋತ್ಸವ ಇರುವುದರಿಂದ ಖಾಸಗಿ ವಾಹನ ಬಾಡಿಗೆಗೆ ಪಡೆಯಲಾಗುವುದು. 20 ಹಾಗೂ 21ರಂದು ಮನೆಗೆ ಭೇಟಿ ನೀಡಿ ತಪ್ಪಿಹೋಗಿರುವ ಮಕ್ಕಳಿಗೆ ಪೋಲಿಯೊ ಹನಿ ಹಾಕಲಾಗುವುದು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಹಾಬಲೇಶ್ವರ ಹೆಗಡೆ ಹೇಳಿದರು.ಅತಿಕ್ರಮಣ ತೆರವು:‘ಇಟಗುಳಿ ಗ್ರಾಮ ಪಂಚಾಯ್ತಿಯ ರಾಘವೇಂದ್ರ ಮುಕ್ರಿ ಎಂಬುವರ 2 ಗುಂಟೆ ಜಾಗದಲ್ಲಿರುವ ಮನೆ, ಹಿತ್ತಲನ್ನು ಅರಣ್ಯ ಇಲಾಖೆ ಅಧಿಕಾರಿಗಳು ತೆರವು ಮಾಡಿದ್ದಾರೆ. ಇದರಿಂದ ಈ ಕುಟುಂಬದವರು ನಿರಾಶ್ರಿತರಾಗುವಂತಾಗಿದೆ. 1986ರಲ್ಲಿ ಮಾಡಿದ ಅತಿಕ್ರಮಣ ಇದಾಗಿದ್ದು, 20 ವರ್ಷದ ತೆಂಗಿನಮರಗಳು ಇಲ್ಲಿವೆ. ಆದರೂ ಅತಿಕ್ರಮಣ ತೆರವು ಮಾಡಲಾಗಿದೆ’ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯೆ ಶೋಭಾ ನಾಯ್ಕ ದೂರಿದರು.‘ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಂದೇ ದಿನದಲ್ಲಿ ಏಳು ಶಸ್ತ್ರಚಿಕಿತ್ಸೆ ಸಹಿತ ಹೆರಿಗೆ ಮಾಡಿಸಲಾಗಿದೆ. ಇದರಿಂದ ಆಸ್ಪತ್ರೆಯ ಬಗ್ಗೆ ಜನರಿಗೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಆಸ್ಪತ್ರೆಯಲ್ಲಿ ಎಲ್ಲ ಕಡೆ ಹಣಕಾಸಿನ ಮೂಲಕವೇ ವ್ಯವಹರಿಸುವಂತಾಗಿದ್ದು, ಬಡವರು ಹೇಳಿಕೊಳ್ಳು ಹೆದರುತ್ತಾರೆ’ ಎಂದು ಸದಸ್ಯ ಸುನೀಲ್‌ ನಾಯ್ಕ ಆರೋಪಿಸಿದರು.‘ಹಿಂದಿನ ಸರ್ಕಾರ ಜಾರಿಗೊಳಿಸಿರುವ ನಗು–ಮಗು ಅಂಬ್ಯುಲೆನ್ಸ್‌ ಸೇವೆ ಸಿದ್ದಾಪುರದಲ್ಲಿ ಪ್ರಾರಂಭವಾಗಿದ್ದರೂ ಶಿರಸಿಯಲ್ಲಿ ವಿಳಂಬವಾಗುತ್ತಿದೆ’ ಎಂದು ಶೋಭಾ ನಾಯ್ಕ ಆರೋಪಿಸಿದರು.ಬದಲಾಗುತ್ತಿರುವ ನಿಯಮಾವಳಿಯ ಬಗ್ಗೆ ಹಿರಿಯ ಅಧಿಕಾರಿಗಳಿಂದ ಬರುವ ಮೌಖಿಕ ಆದೇಶ ಅನುಷ್ಠಾನ ಮಾಡುವ ಭರದಲ್ಲಿ ಅಧಿಕಾರಿಗಳು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದರಿಂದ ಕಾಮಗಾರಿ ಹಿನ್ನಡೆಯಾಗಿದೆ ಎಂದು ಉಪಾಧ್ಯಕ್ಷ ಸಂತೋಷ ಗೌಡರ್‌, ಅಧ್ಯಕ್ಷ ಗುರುಪಾದ ಹೆಗಡೆ ಆರೋಪಿಸಿದರು.

‘2012–13ನೇ ಸಾಲಿನಲ್ಲಿ ತಾಲ್ಲೂಕಿಗೆ ರೂ 10.14ಕೋಟಿ ಗುರಿ ನಿಗದಿಪಡಿಸಿದ್ದು, ರೂ 3.54 ಕೋಟಿ ಕಾಮಗಾರಿ ನಡೆಸಲು ಮಾತ್ರ ಸಾಧ್ಯವಾಗಿತ್ತು. ಆದರೂ ಶಿರಸಿ ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿತ್ತು. ಈ ಬಾರಿ ಕಾಮಗಾರಿಯ ಪ್ರಗತಿ ಕುಂಠಿತವಾಗಿದೆ’ ಎಂದು ಸಂತೋಷ ಗೌಡರ್‌ ಆಕ್ಷೇಪಿಸಿದರು.‘ಯೋಜನೆ ಅನುಷ್ಠಾನದಲ್ಲಿ ಕೆಲ ಅಧಿಕಾರಿಗಳ ಮೇಲೆ ಭ್ರಷ್ಟಚಾರದ ಆರೋಪ ಬರುತ್ತಿದೆ. ಗ್ರಾಮ ಪಂಚಾಯ್ತಿ ಗಳಲ್ಲಿ ಅಭಿವೃದ್ಧಿ ಅಧಿಕಾರಿಗಳ ದರ್ಬಾರ್‌ ಜೋರಾಗಿದೆ. ಸಂಬಂಧಿತ ಅಧಿಕಾರಿಗಳು ಎಚ್ಚೆತ್ತು ಸಮರ್ಪಕ ವಾಗಿ ಕೆಲಸ ನಿರ್ವಹಿಸಬೇಕು. ಇಲ್ಲವಾದಲ್ಲಿ ಕಾನೂನು ಕೈಗೆತ್ತಿಕೊಳ್ಳಲಾಗುವುದು’ ಎಂದು ಗುರುಪಾದ ಹೆಗಡೆ ಎಚ್ಚರಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯೆ ಉಷಾ ಹೆಗಡೆ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry