‘ಅನುವಾದಕರಿಗೆ ಹೆಚ್ಚಿದ ಪ್ರಾಶಸ್ತ್ಯ’

7
ಯುಜಿಸಿ ಪ್ರಾಯೋಜಿತ ರಾಷ್ಟ್ರಮಟ್ಟದ ವಿಚಾರ ಸಂಕಿರಣ

‘ಅನುವಾದಕರಿಗೆ ಹೆಚ್ಚಿದ ಪ್ರಾಶಸ್ತ್ಯ’

Published:
Updated:

ಧಾರವಾಡ: ‘ಒಂದು ಕಾಲಘಟ್ಟದಲ್ಲಿ ಅನುವಾದವನ್ನು ಮತ್ತು ಅನುವಾದಕರನ್ನು ನಾವು ನಿಷ್ಕ್ರಿಯರಂತೆ ಕಾಣುತ್ತಿದ್ದೆವು. ಈಗ ಕಾಲ ಬದಲಾಗಿದೆ. ಒಬ್ಬ ಲೇಖಕನಿಗೆ ನೀಡುವ ಸಂಭಾ­ವನೆಯ ಎರಡರಷ್ಟು ಒಬ್ಬ ಅನುವಾದಕನಿಗೆ ನೀಡುವ ಕಾಲ ಬಂದಿದೆ’ ಎಂದು ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಪ್ರಧಾನ ಗುರುದತ್ತ ಅಭಿಪ್ರಾಯಪಟ್ಟರು.ಇಲ್ಲಿಯ ಕೆ.ಎಸ್‌.ಜಿಗಳೂರು ಕಲಾ ಮತ್ತು ಡಾ.ಎಸ್‌.ಎಂ.ಶೇಷಗಿರಿ ವಾಣಿಜ್ಯ ಮಹಿಳಾ ಕಾಲೇಜಿನಲ್ಲಿ ಯುಜಿಸಿ ಪ್ರಾಯೋಜಕತ್ವದಲ್ಲಿ ಜಾಗತೀಕರಣದ ಸಂದರ್ಭದಲ್ಲಿ ಅನುವಾದದ ಕಾರ್ಯ ಎಂಬ ವಿಷಯದ ಮೇಲೆ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.‘ಅನುವಾದಕರನ್ನು ನಾವು ಎರಡನೇ ದರ್ಜೆ ಲೇಖಕರು ಎಂದು ಪರಿಗಣಿಸುತ್ತಿಲ್ಲ. ಅವರಿಗೆ, ಅನುವಾದ ಮಾಡಿ ಎಂದು ದಂಬಾಲು ಬೀಳುವ ಪರಿಸ್ಥಿತಿ ಬಂದಿದೆ. ಆಧುನಿಕ ಜಗತ್ತಿನಲ್ಲಿ, ಅದರಲ್ಲೂ ಜಾಗತೀಕರಣದ ಸಂದರ್ಭದಲ್ಲಿ ಭಾಷಾಂತರ ಎನ್ನುವುದು ತನ್ನದೇ ಆದ ಛಾಪು ಮೂಡಿಸಿರುವುದರಿಂದ ಅದು ಅನಿವಾರ್ಯವೂ ಹಾಗೂ ಅವಶ್ಯಕ ಸಾಧನವಾಗಿ ಮಾರ್ಪಟ್ಟಿದೆ. ಈ ಭಾಷಾಂತರ ಅಥವಾ ಅನುವಾದವನ್ನು ನಾವು ಗುರುತಿಸಿದರೆ ವಿಜ್ಞಾನ ಹಾಗೂ ತಂತ್ರ­ಜ್ಞಾನವನ್ನು ಇನ್ನಷ್ಟು ನಮ್ಮ ಹತ್ತಿರಕ್ಕೆ ಬರ ಮಾಡಿಕೊಳ್ಳಬಹುದು’ ಎಂದು ತಿಳಿಸಿದರು.‘ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದ ಮಾಡುವುದರಿಂದ ನಮ್ಮ ಜ್ಞಾನ ವಿನಿಯಮವಾಗುತ್ತದೆ. ಪ್ರಾಚೀನ ಸಾಹಿತ್ಯ, ರಾಮಾಯಣ ಹಾಗೂ ಮಹಾಭಾರತಗಳು ಇನ್ನೂ ಭಾಷಾಂತರಗೊಳ್ಳುತ್ತಲೇ ನಮ್ಮ ಹತ್ತಿರಕ್ಕೆ ಬರುತ್ತಿವೆ. ನಮ್ಮ ಸಂಸ್ಕೃತಿ ಮತ್ತು ಸಮಾಜದ ಪುನರ್‌ ವಿಮರ್ಶೆಗೆ ಭಾಷಾಂತರ ಅತೀ ಅವಶ್ಯವಾಗಿದೆ. ಅನುವಾದಕ್ಕೆ ಎಷ್ಟರ ಮಟ್ಟಿಗೆ ಪ್ರಾಶಸ್ತ್ಯ ದೊರಕಬೇಕಿದೆಯೋ ಅಷ್ಟರಮಟ್ಟಿಗೆ ಪ್ರಾಶಸ್ತ್ಯ ದೊರಕುತ್ತಿದೆ. ಅನುವಾದಕರು ತಾವು ಕೆಳಮಟ್ಟದ ಲೇಖಕರು ಎಂದು ಅಂದುಕೊಳ್ಳುವ ಅಗತ್ಯವೇ ಇಲ್ಲ. ಈ ನಿಟ್ಟಿನಲ್ಲಿ ಅನುವಾದಕರು ಸಮಾಜಕ್ಕೆ ಒಳ್ಳೆಯ ಭಾಷಾಂತರ ರೂಪದ ಬರವಣಿಗೆಗಳನ್ನು ನೀಡಬೇಕು’ ಎಂದರು.ಇಂಧೋರ್‌ನ ದೇವಿ ಅಹಲ್ಯಾ ಕಾಲೇಜಿನ ಕಲಾ, ವಿಜ್ಞಾನ ಹಾಗೂ ಕಾನೂನು ವಿಭಾಗದ ಡೀನ್‌ ಪ್ರೊ.ಬಿ.ವೈ.ಲಲಿತಾಂಬಾ ಮಾತನಾಡಿ, ‘ಭಾಷೆ ಎಂಬುದು ಯಾರ ಸ್ವತ್ತೂ ಅಲ್ಲ. ನಮ್ಮ ನಮ್ಮ ಮಧ್ಯೆ ಸಂಬಂಧವನ್ನು ಬೆಳೆಸಿಕೊಳ್ಳಲು ಅದೊಂದು ಉತ್ತಮ ಸಾಧನ. ವಿಜ್ಞಾನ ಮತ್ತು ತಂತ್ರಜ್ಞಾನಗಳು ಬೆಳವಣಿಗೆ ಹೊಂದಿ ಎಲೆಕ್ಟ್ರಾನಿಕ್‌ ಮಾಧ್ಯಮಗಳು ಇಂದು ಹೆಚ್ಚಾಗಿರುವುದರಿಂದ ಅನುವಾದ ಎಂಬುದು ಅನಿವಾರ್ಯವೇ ಆಗಿದೆ. ಈ ನಿಟ್ಟಿನಲ್ಲಿ ಈ ಎರಡು ದಿನದ ಸಂವಾದದಲ್ಲಿ ಎಲ್ಲ ಭಾಷೆಗಳ ಬಗ್ಗೆಯೂ ಚರ್ಚೆ ಮಾಡುವುದು ಅನಿವಾರ್ಯ­ವಾಗಿದೆ’ ಎಂದರು.ಹುರಕಡ್ಲಿ ಅಜ್ಜ ಶಿಕ್ಷಣ ಸಮಿತಿ ಖಜಾಂಚಿ ಎಸ್‌.ಜಿ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಉಷಾದೇವಿ ಕೋಹಳ್ಳಿ ಸ್ವಾಗತಿಸಿದರು. ಡಾ.ಆರ್‌.ಲಕ್ಷ್ಮೀ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry