ಮಂಗಳವಾರ, ಡಿಸೆಂಬರ್ 10, 2019
26 °C

‘ಅನುವಾದವೆಂದರೆ ಪರದೆಯ ಚುಂಬನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಅನುವಾದವೆಂದರೆ ಪರದೆಯ ಚುಂಬನ’

ಬೆಂಗಳೂರು: ‘ಮಹಾಕಾವ್ಯವನ್ನು ಅನುವಾದ ಮಾಡುವುದೆಂದರೆ ನಲ್ಲೆ ಯನ್ನು ಪರದೆ ಮೂಲಕ ಚುಂಬಿಸಿ ದಂತೆ. ಮೂಲ ಕಾವ್ಯದ ಛಂದಸ್ಸು ಮತ್ತು ಲಯವನ್ನು ಯಥಾವತ್ತಾಗಿ ಇನ್ನೊಂದು ಭಾಷೆಗೆ ತರುವುದು ಬಲು ಕಷ್ಟದ ಕೆಲಸ’ ಎಂದು ಹಿರಿಯ ವಿದ್ವಾಂಸ ಪ್ರೊ. ಲಕ್ಷ್ಮೀನಾರಾಯಣ ಅರೋರ ಅಭಿಪ್ರಾಯಪಟ್ಟರು.ನಗರದಲ್ಲಿ ಭಾನುವಾರ ನಡೆದ ಪ್ರೊ. ಹಂಪ ನಾಗರಾಜಯ್ಯ (ಹಂಪನಾ) ಅವರ ‘ಚಾರು ವಸಂತ’ ಮಹಾಕಾವ್ಯದ ಹಿಂದಿ ಅನುವಾದದ ಕೃತಿ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.‘ಚಾರುದತ್ತ ಒಬ್ಬ ವರ್ತಕ. ವಸಂತ ಸೇನೆ ವೇಶ್ಯೆ ಯಾದರೂ ತನ್ನ ವ್ಯಕ್ತಿತ್ವ ದಿಂದ ವೃತ್ತಿ ಹಿನ್ನೆಲೆಯನ್ನೇ ಮೀರಿದ ಅಸಾಮಾನ್ಯ ನಗರ ವಧು. ಅವರಿಬ್ಬರ ಪ್ರೇಮ ಪ್ರಸಂಗವೇ ‘ಚಾರು ವಸಂತ’ ಕಾವ್ಯ. ಚಾರುದತ್ತನ ಹೆಂಡತಿಯೇ ಮುಂದೆ ನಿಂತು ಆತನಿಗೂ ವಸಂತಳಿಗೂ  ಮದುವೆ ಮಾಡಿಸುತ್ತಾಳೆ. ಆದರೆ, ಅಂತಹ ನಡೆಯನ್ನು ಇಂದಿನ ದಿನಗಳಲ್ಲಿ ಅಪೇಕ್ಷಿಸುವುದು ತಪ್ಪಾಗುತ್ತದೆ’ ಎಂದು ಚಟಾಕಿ ಹಾರಿಸಿದರು.ಕೃತಿ ಬಿಡುಗಡೆ ಮಾಡಿದ ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಪೂರ್ಣಚಂದ್ ಟಂಡನ್‌, ‘ಅನುವಾದ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಸಂಬಂಧ ಬೆಸೆಯುವ ಸೇತು. ಭಾಷೆಯೊಂದರ ಜ್ಞಾನದ ಹರವನ್ನು ವಿಸ್ತರಿಸಲೂ ಅದು ಸಹಕಾರಿ’ ಎಂದು ಅಭಿಪ್ರಾಯಪಟ್ಟರು.ಕೃತಿಯನ್ನು ಹಿಂದಿಗೆ ಭಾಷಾಂತರಿಸಿದ ದೂರದರ್ಶನ ಕೇಂದ್ರದ ವಿಶ್ರಾಂತ ನಿರ್ದೇಶಕ ಎಚ್‌.ವಿ. ರಾಮಚಂದ್ರ ರಾವ್‌, ‘ಕಾವ್ಯದ ಶಬ್ದಶಃ ಅನುವಾದಕ್ಕೆ ಹೋಗದೆ ಭಾವವನ್ನು ಹಿಡಿದಿಡಲು ಯತ್ನಿಸಿದ್ದೇನೆ’ ಎಂದರು.ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಚಂದ್ರಕಾಂತ ಕುಸ ನೂರ, ‘ಚಾರು ವಸಂತ’ ಕೃತಿ ಮನೋಜ್ಞವಾಗಿ ಮೂಡಿ ಬಂದಿದೆ’ ಎಂದರು.‘ಮೂಲ ಅರ್ಥಕ್ಕೆ ಚ್ಯುತಿ ಬಾರದಂತೆ ಲಾಲಿತ್ಯ­ಪೂರ್ಣವಾಗಿ ರಾಮಚಂದ್ರರಾವ್‌ ಕೃತಿಯನ್ನು ಹಿಂದಿಗೆ ಅನುವಾದಿಸಿದ್ದಾರೆ’ ಎಂದು ಕೃತಿ ಕರ್ತೃ ಹಂಪನಾ ಹೇಳಿದರು. ಪ್ರೊ. ಕಮಲಾ ಹಂಪನಾ, ಪ್ರೊ.ಬಿ.ವೈ. ಲಲಿತಾಂಬ, ಪ್ರೊ.ಜಿ. ಅಶ್ವತ್ಥನಾರಾಯಣ ಹಾಜರಿದ್ದರು.ಪುಸ್ತಕದ ಬೆಲೆ: ₨ 250, ಪುಟಗಳು: 340

ಪ್ರತಿಕ್ರಿಯಿಸಿ (+)