ಭಾನುವಾರ, ಜನವರಿ 19, 2020
20 °C

‘ಅನ್ನಭಾಗ್ಯ’ ಕನ್ನ ತಡೆಗೆ ‘ಆನ್‌ಲೈನ್‌’ ಕಣ್ಣು

ರಾಜೇಶ್‌ ರೈ ಚಟ್ಲ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ಅನ್ನಭಾಗ್ಯ’ಕ್ಕೆ ಕನ್ನ ಹಾಕು­ವವ­ರ ಮೇಲೆ ಹದ್ದಿನ ಕಣ್ಣಿಡಲು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ನಿರ್ಧರಿಸಿದೆ.ಆಹಾರಧಾನ್ಯಗಳ ಕಳ್ಳ ಸಾಗಣೆ ಮತ್ತು ನಕಲಿ ಕಾರ್ಡ್‌ಗಳ ಪತ್ತೆಗೆ ಅನುಕೂಲ­ವಾಗುವಂತೆ ತಂತ್ರಜ್ಞಾನ (ಆನ್‌ಲೈನ್‌) ವ್ಯವಸ್ಥೆ ಅಳವಡಿಸಿ­ಕೊಳ್ಳಲು ಇಲಾಖೆ ಮುಂದಾಗಿದೆ.ಪ್ರತಿ ನ್ಯಾಯಬೆಲೆ ಅಂಗಡಿಯಲ್ಲಿ­ರುವ, ಆಹಾರಧಾನ್ಯ ಪಡೆಯಲು ಅರ್ಹ­ವಾದ ಪಡಿತರ ಚೀಟಿಗಳ ಪ್ರತ್ಯೇಕ ಪಟ್ಟಿ ತಯಾರಿಸಿ ಇನ್ನು ಮುಂದೆ ಆನ್‌ಲೈನ್‌ ಮೂಲಕ ಕೇಂದ್ರ ಕಚೇರಿಯಿಂದಲೇ ಕಾರ್ಡ್‌ವಾರು ಆಹಾರಧಾನ್ಯ ಬಿಡುಗಡೆ ಮಾಡಲು ಇಲಾಖೆ ಕ್ರಮ ಕೈಗೊಂಡಿದೆ.ಮುಂದಿನ ತಿಂಗಳಿನಿಂದ ಅಗತ್ಯ ಪ್ರಮಾಣದ ಆಹಾರಧಾನ್ಯವನ್ನು ಮಾತ್ರ ನ್ಯಾಯಬೆಲೆ ಅಂಗಡಿಗಳಿಗೆ ಪೂರೈಕೆ ಮಾಡುವ ಉದ್ದೇಶದಿಂದ ಕಳೆದ ಮೂರು ತಿಂಗಳಿನಲ್ಲಿ (ಸೆಪ್ಟೆಂಬರ್‌, ಅಕ್ಟೋಬರ್‌, ನವೆಂಬರ್‌) ಯಾವುದೇ ಆಹಾರಧಾನ್ಯವನ್ನು ಪಡೆಯದ ಮತ್ತು ಭಾಗಶಃ ಪಡೆದ ಪಡಿತರ ಚೀಟಿಗಳ ಸಂಪೂರ್ಣ ಮಾಹಿತಿಯನ್ನು ಹತ್ತು ದಿನ­ಗಳ ಒಳಗೆ ಪ್ರತಿ ನ್ಯಾಯಬೆಲೆ ಅಂಗಡಿ­ಗಳಿಂದ ಪಡೆದು, ಕೇಂದ್ರ ಕಚೇರಿಗೆ ಸಲ್ಲಿಸುವಂತೆ ಎಲ್ಲ ಜಿಲ್ಲೆಗಳ ಉಪ ನಿರ್ದೇಶಕರಿಗೆ ಇಲಾಖೆಯ ಆಯುಕ್ತ ಹರ್ಷ ಗುಪ್ತಾ ಆದೇಶ ನೀಡಿದ್ದಾರೆ.ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಹರ್ಷ ಗುಪ್ತಾ, ‘ನ್ಯಾಯಬೆಲೆ ಅಂಗಡಿ­ಗಳಿಗೆ ಪೂರೈಕೆಯಾಗುವ ಆಹಾರ­­ಧಾನ್ಯಗಳ ಕಳ್ಳಸಾಗಣೆ ತಡೆ­ಯುವ ಉದ್ದೇಶದಿಂದ ಕೆಲವು ಕ್ರಮ­ಗಳನ್ನು ತೆಗೆದುಕೊಳ್ಳಲು ಇಲಾಖೆ ಮುಂದಾ­ಗಿದೆ. ನ್ಯಾಯಬೆಲೆ ಅಂಗಡಿ­ಯಲ್ಲಿ ಪಡಿತರದ ಸಮಗ್ರ ಮಾಹಿತಿ ಆಯಾ ಜಿಲ್ಲೆಯ ಉಪ ನಿರ್ದೇಶಕರ ಬಳಿ ಲಭ್ಯವಿರಬೇಕು ಎಂದು ನಿರ್ದೇಶನ ನೀಡಲಾಗಿದೆ’ ಎಂದರು.‘ಕಳೆದ 3 ತಿಂಗಳಿನಲ್ಲಿ ಪಡಿತರ ಪಡೆ­ಯದ ಕಾರ್ಡ್‌ಗಳನ್ನು ಪರಿಶೀಲನೆಗೆ ಒಳ­ಪಡಿಸ­ಲಾಗುವುದು. ಅಸ್ತಿತ್ವದಲ್ಲಿ ಇಲ್ಲದ ಕಾರ್ಡ್‌ಗಳನ್ನು ತಕ್ಷಣವೇ ರದ್ದುಪಡಿಸ­ಲಾಗುವುದು. ಇಲಾಖೆ  ಬಳಿ ಸಮರ್ಪಕ ಅಂಕಿಅಂಶಗಳಿದ್ದರೆ ನ್ಯಾಯ­ಬೆಲೆ ಅಂಗಡಿ­ದಾರರೂ ಎಚ್ಚರಿಕೆ­ಯಿಂದಿ ಇರುತ್ತಾರೆ. ಈವರೆಗೆ ನ್ಯಾಯಬೆಲೆ ಅಂಗಡಿಯಲ್ಲಿ ಈ ಹಿಂದಿನ ತಿಂಗಳಲ್ಲಿ ಒಟ್ಟು ಬಾಕಿ ಉಳಿದ (ಕ್ಲೋಸಿಂಗ್‌ ಬ್ಯಾಲನ್‌್ಸ) ಆಹಾರಧಾನ್ಯ ನೋಡಿ­ಕೊಂಡು ನಂತರ ತಿಂಗಳ ಆಹಾರ­ಧಾನ್ಯ ಬಿಡುಗಡೆ ಮಾಡಲಾಗುತ್ತಿತ್ತು. ಇನ್ನು ಮುಂದೆ ಬಳಕೆಯಲ್ಲಿರುವ ಕಾರ್ಡ್‌­­ಗಳಿಗೆ ವಿತರಣೆಯಾಗುವ ಆಹಾರ­­ಧಾನ್ಯದ ಪ್ರಮಾಣ ಲೆಕ್ಕಹಾಕಿ, ಅಷ್ಟನ್ನು ಮಾತ್ರ ಬಿಡುಗಡೆ ಮಾಡಲಾಗುವುದು’ ಎಂದರು.‘ಶೇ 30ರಷ್ಟು ನಕಲಿ ಕಾರ್ಡ್’: ‘ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ನಕಲಿ ಕಾರ್ಡ್‌­ಗಳಿವೆ. ಅದರಲ್ಲೂ ನಗರ ಪ್ರದೇಶ­ದಲ್ಲಿ ಜಾಸ್ತಿ ಇದೆ. ಕೆಲವೆಡೆಶೇ 30ರಷ್ಟು ನಕಲಿ ಕಾರ್ಡ್‌ಗಳಿರುವುದು ಗಮನಕ್ಕೆ ಬಂದಿದೆ. ರಾಜ್ಯದಲ್ಲಿ ಒಂದು ಕೋಟಿ ಪಡಿತರಚೀಟಿ, 20 ಸಾವಿರ ನ್ಯಾಯಬೆಲೆ ಅಂಗಡಿಗಳಿದ್ದು, ಹೊಸ ತಂತ್ರಜ್ಞಾನ ವ್ಯವಸ್ಥೆಯಿಂದ ನಕಲಿ ಕಾರ್ಡ್‌ಗಳ ಪತ್ತೆ ಸಾಧ್ಯವಾಗಲಿದೆ. ಗೋದಾಮುಗಳಿಂದ ಕಳ್ಳ ಸಾಗಣೆ ತಡೆಯಲು ಆನ್‌ಲೈನ್ ತಂತ್ರಜ್ಞಾನ ಅಳವಡಿಸಲಾಗುವುದು’ ಎಂದು ಹರ್ಷ ಗುಪ್ತಾ ವಿವರಿಸಿದರು.ಪಡಿತರಚೀಟಿಗೆ ಅರ್ಜಿ: ಎಪಿಕ್‌ ಲಿಂಕ್‌

‘ಹೊಸ ಪಡಿತರ ಚೀಟಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಇನ್ನು ಮುಂದೆ ‘ಪರಿಚಯಿಸುವವರು’  ಬೇಕಿಲ್ಲ. ಅದರ ಬದಲು ಚುನಾವಣಾ ಭಾವಚಿತ್ರ ಇರುವ ಗುರುತಿನ ಚೀಟಿ (ಎಪಿಕ್‌) ಇದ್ದರೆ ಸಾಕು. ಅದಕ್ಕೆ ಪೂರಕವಾಗಿ ಎನ್‌ಐಸಿ (ನ್ಯಾಷನಲ್‌ ಇನ್‌ಫಾರ್ಮೆಟಿಕ್ ಸೆಂಟರ್‌) ಅಂತರ್ಜಾಲ ತಾಣದಲ್ಲಿ ಬದಲಾವಣೆ ಮಾಡಲಾಗುವುದು. ಕೆಲವೇ ದಿನಗಳಲ್ಲಿ ಈ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ’ ಎಂದು ಹರ್ಷ ಗುಪ್ತಾ ತಿಳಿಸಿದರು.

‘ಹೊಸ ಪಡಿತರಚೀಟಿಗಾಗಿ ಅರ್ಜಿ ಸಲ್ಲಿಸಿದವನ (ಕುಟುಂಬ ಸದಸ್ಯರ ಪೈಕಿ ಒಬ್ಬರ ಹೆಸರಿನಲ್ಲಿ ಎಪಿಕ್‌ ಇರಬೇಕು) ಎಪಿಕ್‌ ಸಂಖ್ಯೆಯನ್ನು ಆನ್‌ಲೈನ್‌ನಲ್ಲಿ ಅರ್ಜಿಗೆ ಭರ್ತಿ ಮಾಡಿದ ತಕ್ಷಣ, ಚುನಾವಣಾ ಆಯೋಗದ ವೆಬ್‌ಸೈಟ್‌ ಜೊತೆ ಎನ್‌ಐಸಿ ಲಿಂಕ್ ಪಡೆದು­ಕೊಳ್ಳುತ್ತದೆ. ಆಯೋಗದ ವೆಬ್‌ಸೈಟ್‌­ನಿಂದಲೇ ಅರ್ಜಿದಾರನ ಭಾವಚಿತ್ರ ಮತ್ತು ಇತರ ಮಾಹಿತಿ ಪಡೆಯ­ಲಾಗುವುದು. ಎಪಿಕ್‌ ಇಲ್ಲದವರಿಗೆ ‘ಪರಿಚಯಿಸುವವರು’ ವ್ಯವಸ್ಥೆ ಮುಂದುವರಿಯಲಿದೆ’ ಎಂದರು.

ಪ್ರತಿಕ್ರಿಯಿಸಿ (+)