ಶುಕ್ರವಾರ, ಜೂನ್ 18, 2021
20 °C
ಅಂಕಿ ಅಂಶದೊಂದಿಗೆ ಕರ್ನಾಟಕ–ಗುಜರಾತ್‌ ಅಭಿವೃದ್ಧಿ ಹೋಲಿಸಿದ ಸಿಎಂ

‘ಅಭಿವೃದ್ಧಿಯಲ್ಲಿ ಗುಜರಾತ್ ನಂ.1 ಅಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ‘ಅಭಿವೃದ್ಧಿ ವಿಚಾರದಲ್ಲಿ ಗುಜರಾತ್ ದೇಶದ ನಂಬರ್ ಒನ್ ರಾಜ್ಯ ಅಲ್ಲ. ಮೋದಿ ಢೋಂಗಿ ರಾಜಕಾರಣಿ ಆಗಿದ್ದು, ಸತ್ಯವನ್ನು ಮರೆಮಾಚಿ, ಗುಜರಾತ್‌ ಚಿತ್ರಣವನ್ನು ವೈಭವೀಕರಿಸಿ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ನಗರದ ಗಣೇಶ ಮೈದಾನದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ಅವರು, ‘ಗುಜರಾತ್ ಮಾದರಿ’ ಎನ್ನುವುದು ಸೋಗ­ಲಾಡಿತನದ ಮಾತು. ಗುಜರಾತ್ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 9 ಮತ್ತು ತಲಾ ಆದಾಯದಲ್ಲಿ 12ನೇ ಸ್ಥಾನದಲ್ಲಿದೆ ಎಂದರು.ಬಿಜೆಪಿ ಧರ್ಮ, ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಪಕ್ಷವಾಗಿದೆ. ದೇಶದ ಎಲ್ಲ  ವರ್ಗ, ಜಾತಿಯನ್ನು ಒಟ್ಟಿಗೆ ಒಯ್ಯುವ ಸಾಮರ್ಥ್ಯ ಇರುವುದು ಕಾಂಗ್ರೆಸ್‌ಗೆ ಮಾತ್ರ’ ಎಂದರು.ಗುಜರಾತಿನಲ್ಲಿ ಪ್ರತಿ ವರ್ಷ ಶಾಲೆ ತೊರೆಯುವ 1 ರಿಂದ 10 ತರಗತಿ ಒಳಗಿನ ಮಕ್ಕಳ ಸಂಖ್ಯೆ ಶೇ 6. ರಾಷ್ಟ್ರಮಟ್ಟದಲ್ಲಿ 30 ಮಕ್ಕಳಿಗೆ ಒಬ್ಬರು ಶಿಕ್ಷಕರಿದ್ದರೆ, ಅಲ್ಲಿ 54 ಮಕ್ಕಳಿಗೆ ಒಬ್ಬರು ಶಿಕ್ಷಕರಿದ್ದಾರೆ. ಕರ್ನಾಟಕ ತನ್ನ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಶೇ5 ರಷ್ಟು ಅನುದಾನ ಮೀಸಲಿಟ್ಟಿದ್ದರೆ, ಗುಜರಾತಿನಲ್ಲಿ ಈ ಪ್ರಮಾಣ ಶೇ3 ಮಾತ್ರ. ಗುಜರಾತಿ­ನಲ್ಲಿ ಶೇ 55.5 ಮಹಿಳೆಯರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಇಂಥ ರಾಜ್ಯ ದೇಶಕ್ಕೆ ಮಾದರಿಯೇ? ಎಂದು ಪ್ರಶ್ನಿಸಿದರು.ಮೋದಿ ಭ್ರಮೆ: ನರೇಂದ್ರ ಮೋದಿ ಅವರೀಗ ಪ್ರಧಾನಮಂತ್ರಿ ಆಗಿಯೇ ಬಿಟ್ಟಿದ್ದೇನೆ ಎಂಬ ಭ್ರಮೆಯಲ್ಲಿದ್ದಾರೆ. ಪ್ರಧಾನಿ ಆಗಬೇಕಾದರೆ 273 ಸ್ಥಾನಗಳನ್ನು ಗೆಲ್ಲಬೇಕು ಎಂದು ಲೇವಡಿ ಮಾಡಿದರು.ಮೋದಿ ಪ್ರಧಾನಿಯಾದರೆ ದೇಶ­ದಲ್ಲಿ ಅಲ್ಲೋಲ ಕಲ್ಲೋಲ ಆಗಲಿದೆ. ಶಾಂತಿಗೆ ಭಂಗ ಉಂಟಾಗಲಿದೆ. ಹೀಗಾಗಿ ಬಿಜೆಪಿ ಅಧಿಕಾರಕ್ಕೆ ಬರಬಾರದು. ಪಕ್ಷದ ಕಾರ್ಯಕರ್ತರು ಇದಕ್ಕಾಗಿ ಹೋರಾಟ ನಡೆಸಬೇಕು ಎಂದು ಹೇಳಿದರು.ಬಿಜೆಪಿಯವರ ಬಳಿ ತೋರಿಸಲು ಮುಖಗಳಿಲ್ಲ. ಹೀಗಾಗಿ ಮೋದಿಯನ್ನು ಮುಂದೆ ಮಾಡಿವೆ. ಜೈಲಿಗೆ ಹೋಗಿ ಬಂದಿರುವ ಬಿ.ಎಸ್. ಯಡಿಯೂರಪ್ಪ, ಹುಡ್ಕೊ ಹಗರಣದ ಆಪಾದನೆ ಹೊತ್ತ ಅನಂತಕುಮಾರ್, ಈಶ್ವರಪ್ಪ, ಕಟ್ಟಾ­ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯಶೆಟ್ಟಿ ಮತ್ತಿತರರು ಮುಖ ತೋರಿಸುವ ಹಾಗಿಲ್ಲ ಎಂದು ಕುಟುಕಿದರು.ವಿಧಾನಸಭೆಯಲ್ಲಿಯೇ ನೀಲಿ ಚಿತ್ರ ವೀಕ್ಷಣೆ ಪ್ರಕರಣ, ಮಾಜಿ ಸಚಿವ ಹರತಾಳು ಹಾಲಪ್ಪ ಪ್ರಕರಣ ಉಲ್ಲೇಖಿಸಿದ ಅವರು, ಬಿಜೆಪಿಯವರು ಭ್ರಷ್ಟರಷ್ಟೇ ಅಲ್ಲ, ಮಾನಗೆಟ್ಟವರೂ ಹೌದು. ವಿಧಾನಸೌಧದ ಮರ್ಯಾದೆ ಹರಾಜು ಮಾಡಿದ್ದಾರೆ. ಅಕ್ರಮ ಗಣಿಗಾರಿಕೆ ಮೂಲಕ ಕೋಟ್ಯಂತರ ರೂಪಾಯಿ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸಾಮಾಜಿಕ ನ್ಯಾಯದ ಪರ ಅಲ್ಲ. ಜಾತ್ಯತೀತ ಎನ್ನುವ ಹೆಸರಿನಲ್ಲಿ ಬಿಜೆಪಿ ಜೊತೆ ಕೈಜೋಡಿಸುತ್ತಾರೆ. ಹೀಗಾಗಿ ಮತದಾರರು ಗೌಡರ ಮಾತಿಗೆ ಮರಳಾಗಬಾರದು ಎಂದರು. ಜೆಡಿಎಸ್‌ಗೆ ಬೆಂಬಲ ನೀಡಿದರೆ ಅದು ಬಿಜೆಪಿಗೆ ಬೆಂಬಲ ನೀಡಿದಂತೆಯೇ ಎಂದು ವ್ಯಾಖ್ಯಾನಿಸಿದರು.ಬೆಳೆ ಹಾನಿ: ರೈತರಿಗೆ ಸಿಎಂ ಅಭಯ

ಬೀದರ್: ಆಲಿಕಲ್ಲು ಮಳೆಯಿಂದಾಗಿ ಬೆಳೆ ಹಾನಿಗೊಳಗಾದ ರೈತರ ನೆರವಿಗೆ ಸರ್ಕಾರ ಧಾವಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಯ ನೀಡಿದರು.ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಈ ಹಿನ್ನೆಲೆಯಲ್ಲಿ ಪರಿಹಾರ ಘೋಷಿಸಲು ಆಗುವುದಿಲ್ಲ. ಆದರೆ ಸರ್ಕಾರ ರೈತರ ಜೊತೆಗಿರಲಿದೆ ಎಂದು ಹೇಳಿದರು. ಸಹಕಾರ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರಿಗೆ ಹಣ ಕೊಡಿಸಲಾಗುವುದು. ಈ ಬಗ್ಗೆ ಯಾರೂ ಭಯಪಡಬಾರದು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.