‘ಅಭಿವೃದ್ಧಿ ಅವ್ಯವಹಾರ’ಗಳ ತನಿಖೆಯಾಗಲಿ: ಮುನಿಯಪ್ಪ

7

‘ಅಭಿವೃದ್ಧಿ ಅವ್ಯವಹಾರ’ಗಳ ತನಿಖೆಯಾಗಲಿ: ಮುನಿಯಪ್ಪ

Published:
Updated:

ಕೋಲಾರ: ಶಾಸಕ ಆರ್‍.ವರ್ತೂರು ಪ್ರಕಾಶ್‍ ಅವರು ಹಿಂದಿನ ಬಿಜೆಪಿ ಸರ್ಕಾರದಲ್ಲಿ ಜವಳಿ ಸಚಿವರಾಗಿದ್ದ ಅವಧಿಯಲ್ಲಿ ಜಿಲ್ಲೆಯಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳಲ್ಲಿನ ಅವ್ಯವಹಾರಗಳ ಕುರಿತು ತನಿಖೆ ನಡೆಸಿ, ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಆಗ್ರಹಿಸಿದರು.

ತಾಲ್ಲೂಕಿನ ವೇಮಗಲ್ಲಿನ ಕ್ರೀಡಾ ಮೈದಾನದಲ್ಲಿ ಬುಧವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡುವ ಕಾರ್ಯಕ್ರಮ­ದಲ್ಲಿ ತಮ್ಮ ವಿರುದ್ಧ ಟೀಕೆಗಳನ್ನು ಮಾಡಿದ ವರ್ತೂರು ಪ್ರಕಾಶ್ ಅವರಿಗೆ ಉತ್ತ­ರದ ರೂಪದಲ್ಲಿ ಮಾತನಾಡಿದ ಸಚಿವರು, ವರ್ತೂರು ಪ್ರಕಾಶ್ ಸಚಿವರಾಗಿದ್ದ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳ ಅವ್ಯವಹಾರಗಳ ಸಮಗ್ರ ತನಿಖೆಯಾಗಲಿ. ನಂತರ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಲಿ ಎಂದು ಆಗ್ರಹಿ­ಸಿದರು.ತಮ್ಮ ಬಗ್ಗೆ ಮಾತನಾಡಿದ ಶಾಸಕ ವರ್ತೂರು ಮಟ್ಟಕ್ಕೆ ಇಳಿದು ತಾವು ಮಾತನಾಡಲು ಸಾಧ್ಯವಾಗುವುದಿಲ್ಲ. ಅವರಿಗೆ ಉತ್ತರ ನೀಡಲು ಹೊರಟರೆ ದೊಡ್ಡ ವಿಷಯವಾಗುತ್ತದೆ. ಹೀಗಾಗಿ ಅವರು ಸಚಿವರಾಗಿದ್ದ ಅವಧಿಯಲ್ಲಿ ಏನೆಲ್ಲ ಕೆಲಸವಾಗಿದೆ, ಎಷ್ಟೆಲ್ಲ ಅವ್ಯವಹಾರವಾಗಿದೆ ಎಂಬುದರ ತನಿಖೆಯಾಗಲಿ ಎಂದು ಹೇಳಿದರು.ವರ್ತೂರು ಟೀಕೆ: ಸಚಿವರಿಗೂ ಮುನ್ನ ಮಾತನಾಡಿದ ವರ್ತೂರು, ಕೇಂದ್ರ ಸಚಿವರ ಮನೆಯಲ್ಲಿ ಕೆಲಸ ಮಾಡುವವರಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಏನು ಕೆಲಸ? ಸಮಾಜ ಕಲ್ಯಾಣ ಇಲಾಖೆಯಲ್ಲಿ ಯಾರು ಅವ್ಯವಹಾರ ಮಾಡುತ್ತಿ­ದ್ದಾರೆ ಎಂಬುದು ಸಚಿವರಿಗೆ ಗೊತ್ತಿದೆ. ಅದನ್ನು ಅವರೇ ಸರಿಪಡಿಸಬೇಕು. ಪರಿಶಿಷ್ಟ ಸಮುದಾಯದವರಿಗೆ ಅನುಕೂಲ ಕಲ್ಪಿಸಲು ಇರುವ ಇಲಾಖೆಯ ಅವ್ಯವಸ್ಥೆಯನ್ನು ಸರಿಪಡಿಸದಿದ್ದರೆ ಸಚಿವರು ತಾವು ಹುಟ್ಟಿದ ಸಮುದಾಯಕ್ಕೇ  ಅವಮಾನ ಮಾಡಿದಂತೆ ಎಂದು ಹೇಳಿದರು.ದಿನಗೂಲಿ ನೌಕರರನ್ನು ಇಲಾಖೆ ಹಾಸ್ಟಲ್ ಗಳ ಮೇಲ್ವಿಚಾರಕರ­ನ್ನಾಗಿಸ­ಲಾಗಿದೆ. ಅದಕ್ಕೆ ಜಿಲ್ಲಾ ಸಮಾಜ ಕಲ್ಯಣಾಧಿಕಾರಿ 2 ಲಕ್ಷ ರೂಪಾಯಿ ಲಂಚ ಪಡೆದಿದ್ದಾರೆ. ಕೇಂದ್ರ ಸಚಿವರ ಮಗ ಐಆರ್ಎಸ್‍ ಪರೀಕ್ಷೆ ಪಾಸು ಮಾಡಿದ್ದಾರೆ. ಆದರೆ ಪರಿಶಿಷ್ಟ ಸಮುದಾಯದ ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದು ಶಾಸಕರು ಆರೋಪಿಸಿದರು.ಅವ್ಯವಹಾರ ಮಾಡಿದ ಇಲಾಖೆ ಅಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಿ ಎಂದು ಆಯುಕ್ತರು ವರದಿ ನೀಡಿದರೆ, ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕಳಂಕಿತ ಅಧಿಕಾರಿಯಿಂದ 2 ಕೋಟಿ ಪಡೆದು ಅದೇ ಸ್ಥಾನದಲ್ಲಿ ಮುಂದುವರಿಸುವಂತೆ ಆದೇಶ ನೀಡಿದ್ದರು ಎಂದೂ ಶಾಸಕರು ಆರೋಪಿಸಿದರು.ಸಚಿವ ಮುನಿಯಪ್ಪ ಸೇರಿದಂತೆ ವೇದಿಕೆಯಲ್ಲಿರುವ ಎಲ್ಲ ಗಣ್ಯರೂ ಬೆಂಗಳೂರಿನಲ್ಲೇ ವಾಸವಿದ್ದಾರೆ. ಆದರೂ ಪ್ರತಿನಿಧಿಗಳಾಗಿ ಜಿಲ್ಲೆಯ ನೀರಿನ ಸಮಸ್ಯೆ ಬಗ್ಗೆ ಮಾತನಾಡಲೇಬೇಕಾಗುತ್ತದೆ. ಆದರೆ ಅವರಿಗೆ ಜಿಲ್ಲೆಯ ಜನರ ಸಮಸ್ಯೆಗಳ ಸ್ಪಷ್ಟ ಅರಿವಿಲ್ಲ ಎಂದೂ ದೂರಿದರು.ಪ್ರತಿಭಟನೆ ಬೇಡ: ಕೈಗಾರಿಕೆಗಳು ಜಿಲ್ಲೆಗೆ ಬರುತ್ತಿರುವ ಸಂದರ್ಭದಲ್ಲಿ ಸ್ಥಳೀಯರಿಗೆ ಉನ್ನತ ಮಟ್ಟದ ಉದ್ಯೋಗಗಳು ದೊರಕುತ್ತಿಲ್ಲ. ಅವುಗಳನ್ನು ನೀಡಿದರೆ ತೊಂದರೆಯಾಗಬಹುದು ಎಂದು ತಳಮಟ್ಟದ ಉದ್ಯೋಗಗಳನ್ನು ಮಾತ್ರ ನೀಡಲಾಗುತ್ತಿದೆ. ಅದನ್ನು ವಿರೋಧಿಸಿ ರೈತರು, ಸ್ಥಳೀಯರು ಕೈಗಾರಿಕೆಗಳ ಮುಂದೆ ಪ್ರತಿಭಟನೆ ಮಾಡಬಾರದು.ಅದರಿಂದ ಕೈಗಾರಿಕೆಗಳು ವಾಪಸು ಹೋದರೆ ಜಿಲ್ಲೆಗೆ ನಷ್ಟವಾಗುತ್ತದೆಯೇ ಹೊರತು ಕೈಗಾರಿಕೆಗಳ ಸ್ಥಾಪಕರಿಗಲ್ಲ. ಉತ್ತಮ ಉದ್ಯೋಗಗಳನ್ನು ನೀಡುವ ದೃಷ್ಟಿಯಿಂದ ವಿಶೇಷ ತಂಡವನ್ನು ರಚಿಸಬೇಕು. ಕೈಗಾರಿಕೆಗಳ ಜೊತೆ ಸಮಾಲೋಚನೆಯಿಂದ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry