ಶುಕ್ರವಾರ, ಫೆಬ್ರವರಿ 26, 2021
20 °C
ಪ್ರತಿಧ್ವನಿಸಿದ ಜೈಕಾರ– ಗಮನಸೆಳೆದ ಕೇಸರಿ ರುಮಾಲು

‘ಅರವತ್ತು ತಿಂಗಳಲ್ಲಿ ಅಭಿವೃದ್ಧಿ ಭರವಸೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಅರವತ್ತು ತಿಂಗಳಲ್ಲಿ ಅಭಿವೃದ್ಧಿ ಭರವಸೆ’

ಹುಬ್ಬಳ್ಳಿ: ಕಾಂಗ್ರೆಸ್ ಆಳ್ವಿಕೆಯಲ್ಲಿ 60 ವರ್ಷಗಳಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳನ್ನು ತಮಗೆ ಅವಕಾಶ ನೀಡಿದಲ್ಲಿ ಅರವತ್ತು ತಿಂಗಳಲ್ಲಿಯೇ ಮಾಡಿ ತೋರಿಸುವುದಾಗಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಶುಕ್ರವಾರ ಇಲ್ಲಿ ಹೇಳಿದರು.ನಗರದ ಕುಸುಗಲ್‌ ರಸ್ತೆಯ ಮೈದಾನದಲ್ಲಿ ಬಿಜೆಪಿ ಆಯೋಜಿಸಿದ್ದ ‘ಭಾರತ ಗೆಲ್ಲಿಸಿ’ ರ್‍ಯಾಲಿಯಲ್ಲಿ ಅವರು ಮಾತನಾಡಿದರು.ಉರಿ ಬಿಸಿಲನ್ನೂ ಲೆಕ್ಕಿಸದೇ ಪಾಲ್ಗೊಂಡಿದ್ದ ಒಂದು ಲಕ್ಷಕ್ಕೂ ಅಧಿಕ ಜನರನ್ನು ಉದ್ದೇಶಿಸಿ 50 ನಿಮಿಷ ನಿರರ್ಗಳವಾಗಿ ಮಾತನಾಡಿದ ಮೋದಿ, ಕಾಂಗ್ರೆಸ್‌ನಿಂದ ದೇಶ ನಾಶವಾಗುತ್ತಿರುವುದನ್ನು ನೋಡಲಾಗದೇ ಜನ ಪರಿವರ್ತನೆ ಬಯಸಿದ್ದಾರೆ ಎಂದರು.‘ಸ್ವಾತಂತ್ರ್ಯಕ್ಕೆ ಮುನ್ನ ಇದ್ದ ನಾಯಕರು ಯಾರೂ ಈಗ ಕಾಂಗ್ರೆಸ್‌ನಲ್ಲಿ ಇಲ್ಲ. ಸ್ವಾತಂತ್ರ್ಯಾ ನಂತರ ಹುಟ್ಟಿದವರೇ ಈಗ ಆ ಪಕ್ಷದಲ್ಲಿ ನಾಯಕ­ರಾಗಿದ್ದಾರೆ. ಹಾಗಾಗಿ ಅವರಿಗೆ ಸ್ವಾತಂತ್ರ್ಯಕ್ಕಾಗಿ ಮಾಡಿದ ತ್ಯಾಗ–ಬಲಿದಾನದ ಬೆಲೆ ತಿಳಿದಿಲ್ಲ’ ಎಂದು ಪರೋಕ್ಷವಾಗಿ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.‘ಗುಜರಾತ್‌ನಲ್ಲಿ ಮಹಿಳೆಯರಿಗೆ ಹೆಚ್ಚಿನ ಸುರಕ್ಷತೆ ಕಲ್ಪಿಸಲಾಗಿದೆ. ದೇಶದ ಇತರೆಡೆಗೆ ಹೋಲಿಸಿದರೆ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇವೆ. ಏಷ್ಯಾದಲ್ಲಿಯೇ ಹುಲಿ ಮತ್ತು ಸಿಂಹಗಳ ಅತಿದೊಡ್ಡ ನೆಲೆಯಾದ ಗಿರ್‌ ಅರಣ್ಯ ಪ್ರದೇಶದ ಕಾವಲಿಗೆ ತರಬೇತಿ ಹೊಂದಿದ ಮಹಿಳೆಯರನ್ನೇ ನೇಮಕ ಮಾಡಲಾಗಿದೆ. ಶೈಕ್ಷಣಿಕ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಅವರಿಗೆ ಶೇ 50ರಷ್ಟು ಮೀಸಲಾತಿ ನೀಡಲಾಗಿದೆ. ಅಲ್ಲಿ ಅವರಿಗೆ ಸುರಕ್ಷೆಯ ಖಾತರಿ ನೀಡಿದ್ದೇನೆ’ ಎಂದರು.‘ಕಮಲದ ಹೂವು ಲಕ್ಷ್ಮಿಯ ಆವಾಸ ಸ್ಥಾನ. ನೀವು ಕಮಲ ಅರಳಿಸಿ, ಸದಾ ನಿಮ್ಮೊಡನೆ ಲಕ್ಷ್ಮಿ (ದುಡ್ಡು) ಇರುವಂತೆ ನಾನು ನೋಡಿಕೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.‘ರೈಲಿನ ಡಬ್ಬಿಯಲ್ಲಿ ಚಹಾ ಮಾರುತ್ತಾ ಬೆಳೆದವನಿಗೆ ಇಷ್ಟೊಂದು ಪ್ರಮಾಣದಲ್ಲಿ ಪ್ರೀತಿ ತೋರಿಸುತ್ತಿರುವುದಕ್ಕೆ ಋಣಿಯಾಗಿದ್ದೇನೆ’ ಎಂದು ಭಾವುಕರಾದ ಮೋದಿ. ರಾಜಕೀಯ ಪಂಡಿತರ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಹಿಡಿಯಲಿದೆ’ ಎಂದು ಭವಿಷ್ಯ ನುಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.