ಶುಕ್ರವಾರ, ಜೂನ್ 25, 2021
27 °C

‘ಅರ್ಹತಾ ಪತ್ರ’ ವಿತರಣೆ ತ್ವರಿತಗೊಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ರಾಜ್ಯದ ವಿವಿಧ ಇಲಾಖೆಗಳಲ್ಲಿ ನೇಮಕಾತಿ ಪ್ರಕ್ರಿಯೆ ಚುರುಕಾಗಿದೆ. ಹೀಗಾಗಿ ಹೈದರಾಬಾದ್‌ ಕರ್ನಾಟಕ ಭಾಗದ ನಿರುದ್ಯೋಗಿ ಗಳು ಅದರ ಲಾಭ ಪಡೆದುಕೊಳ್ಳಬೇಕಾದರೆ ಅರ್ಹತಾ ಪ್ರಮಾಣಪತ್ರ ವಿತರಿಸುವ ಕೆಲಸವನ್ನು ಜಿಲ್ಲಾಡಳಿತಗಳು ತ್ವರಿತಗೊಳಿಸಬೇಕು ಎಂದು ಹೈದರಾಬಾದ್‌ ಕರ್ನಾಟಕ ಹೊರಾಟ ಸಮಿತಿ ಅಧ್ಯಕ್ಷ ವೈಜನಾಥ ಪಾಟೀಲ ಆಗ್ರಹಿಸಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅರ್ಹತಾ ಪ್ರಮಾಣಪತ್ರ ನೀಡುವ ಜವಾಬ್ದಾರಿಯನ್ನು ಸಹಾಯಕ ಆಯುಕ್ತ (ಎಸಿ)ರಿಗೆ ವಹಿಸಿ ರಾಜ್ಯ ಸರ್ಕಾರ ಜನವರಿ 7, 2014ರಂದು ಗೆಜೆಟ್‌ನಲ್ಲಿ ಪ್ರಕಟಿಸಿದೆ. ಇದನ್ನು ಅರ್ಥೈಸಿಕೊಳ್ಳದೆ, ಅಧಿಕಾರಿಗಳು ಗೊಂದಲದಲ್ಲಿ ಮುಳುಗಿದ್ದಾರೆ. ಜನರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ವಿನಾಕಾ ರಣ ಅರ್ಹತಾ ಪ್ರಮಾಣಪತ್ರಕ್ಕಾಗಿ ಜನರು ಪರದಾಡುವುದನ್ನು ತಪ್ಪಿಸಬೇಕು’ ಎಂದು ಹೇಳಿದರು.ಅರ್ಹತಾ ಪತ್ರ ಪಡೆಯುವ ಕುರಿತು ಜನರ ಗೊಂದಲವನ್ನು ಅಧಿಕಾರಿಗಳು ಪರಿಹರಿಸಬೇಕು. ಸರ್ಕಾರ ಗೆಜೆಟ್‌ನಲ್ಲಿ ತಿಳಿಸಿರುವ ದಾಖಲೆಗಳನ್ನು ಮಾತ್ರ ಅಧಿಕಾರಿಗಳು ಕೇಳಬೇಕು. ಅನಗತ್ಯ ದಾಖಲೆ ಗಳನ್ನು ಕೇಳಿ ಜನರ ಸಮಯ ಹಾಳು ಮಾಡಬಾ ರದು. ಹಿಂದುಳಿದ ಪ್ರದೇಶದಲ್ಲಿ ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶಕ್ಕಾಗಿ ಮೀಸಲಾತಿ ಜಾರಿಗೊಳಿಸಿದೆ. ಜನರು ಸೌಲಭ್ಯ ಪಡೆಯುವುದನ್ನು ಕಗ್ಗಂಟುಗೊಳಿಸಬಾರದು ಎಂದು ತಿಳಿಸಿದರು.ಹೈದರಾಬಾದ್‌ ಕರ್ನಾಟಕಕ್ಕೆ ವಿಶೇಷ ಮೀಸಲಾತಿ ಕಲ್ಪಿಸಿ ಸರ್ಕಾರ ಆದೇಶ ಹೊರಡಿಸಿದ ಮುಂಚಿನ ದಿನಾಂಕ ಪ್ರಕಟಿಸಿ ಕೆಲವು ಇಲಾಖೆಗಳು ಹಾಗೂ ಸಂಸ್ಥೆಗಳು ಈಗ ಜಾಹೀರಾತು ನೀಡಿ ಕಣ್ಣಿಗೆ ಮಣ್ಣೆರಚಿ ನೇಮಕಾತಿ ಪ್ರಕ್ರಿಯೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಸರ್ಕಾರಕ್ಕೆ ದೂರು ಸಲ್ಲಿಸಲಾಗುವುದು. ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸಲಾಗಿದೆ. ಆದರೆ, ಅರ್ಜಿ ಸಲ್ಲಿಸಿರುವ ಸ್ಥಳೀಯ ರಿಗೆ ಇನ್ನೂ ಅರ್ಹತಾ ಪ್ರಮಾಣಪತ್ರ ಲಭಿಸಿಲ್ಲ. ಈ ಬಗ್ಗೆ ಸ್ಥಳೀಯ ಅಭ್ಯರ್ಥಿಗಳಲ್ಲಿ ಗೊಂದಲ ಏರ್ಪಟ್ಟಿದೆ.ಜಿಲ್ಲಾಧಿಕಾರಿಗಳು ಇದಕ್ಕೆ ಪರಿಹಾರ ಕಲ್ಪಿಸಬೇಕು. ಇಲ್ಲದಿದ್ದರೆ ನೇಮಕಾತಿ ಪ್ರಕ್ರಿಯೆ ತಡೆಯುವಂತೆ ರಾಜ್ಯ ಸರ್ಕಾರಕ್ಕೆ ಕೋರಲಾಗುವುದು ಎಂದರು.ಈಶಾನ್ಯ ವಲಯದ ಶಿಕ್ಷಕರ ವೇದಿಕೆ ಅಧ್ಯಕ್ಷ ಎಂ.ಬಿ. ಅಂಬಲಗಿ, ಚಂದ್ರಶೇಖರ ಹರಸೂರ, ಕುಪೇಂದ್ರ ರಾವ್‌ ಇತರರು ಇದ್ದರು.‘ಚುನಾವಣೆಯಲ್ಲಿ ಗೆಲ್ಲುವ ಭರವಸೆ ಇಲ್ಲ’

ಗುಲ್ಬರ್ಗ
: ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳಿಗೆ ಸ್ಪರ್ಧಿಸಿ ಅತಿ ಹೆಚ್ಚು ಬಾರಿ ಸೋತಿದ್ದೇನೆ. ಈ ಬಾರಿ ಗೆಲ್ಲುತ್ತೇನೆ ಎನ್ನುವ ಭರವಸೆ ಸ್ವತಃ ನನ್ನಲ್ಲೆ ಇಲ್ಲ ಎಂದು ಹಿರಿಯ ಹೋರಾಟಗಾರ ವೈಜನಾಥ ಪಾಟೀಲ ಹೇಳಿದರು.

ದೊಡ್ಡಸ್ತಿಕೆ ಪ್ರದರ್ಶಿಸಿ ಚುನಾವಣೆಗೆ ಸ್ಪರ್ಧಿಸುವ ಆಸಕ್ತಿ ನನಗಿಲ್ಲ. ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷ ಬೆಂಬಲಿಸಬೇಕು ಎನ್ನುವ ಬಗ್ಗೆ ಪರಾಮರ್ಶೆ ಮಾಡು ತ್ತಿದ್ದೇನೆ. 371(ಜೆ) ಜಾರಿಗೊಳಿಸಲು ಕಾಂಗ್ರೆಸ್‌ ಪಕ್ಷದವರು ಸ್ಪಂದಿಸಿದ್ದಾರೆ. ಬಿಜೆಪಿಯ ವರು ವಿಶೇಷ ಸ್ಥಾನಮಾನದ ಪ್ರಸ್ತಾವ ವಾಪಸ್‌ ಪಡೆಯಲು ಕಾರಣರಾಗಿದ್ದರು. ಈ ಎರಡು ಅಂಶ ಲೋಕಸಭೆ ಕಾರ್ಯಕಲಾಪದಲ್ಲಿ ದಾಖಲಾಗಿದೆ ಎಂದರು.1975ರಲ್ಲಿ 18 ತಿಂಗಳು ತುರ್ತು ಪರಿಸ್ಥಿತಿ ಹೇರಿರುವುದನ್ನು ಹೊರತುಪಡಿಸಿ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಕಾಪಾಡಿಕೊಂಡು ಬಂದಿರುವುದು ಕಾಂಗ್ರೆಸ್‌ ಪಕ್ಷ ಮಾತ್ರ. ಬಿಜೆಪಿ ನಾಯಕರು ಹೇಳುವಂತೆ, ದೇಶದಲ್ಲಿ ಒಂದೇ ರೀತಿಯ ಕಾನೂನು ಇರಬೇಕು. ಜಮ್ಮು–ಕಾಶ್ಮೀರಕ್ಕೆ ಯಾವುದೇ ವಿಶೇಷ ಸವಲತ್ತು ಕೊಡಬಾರದು ಎನ್ನುವುದಾದರೆ, ಹೈದರಾಬಾದ್‌ ಕರ್ನಾಟಕದ ಮೀಸಲಾತಿಯನ್ನು ಅವರು ಕಿತ್ತು ಹಾಕಲು ಹಿಂದೆ ಬೀಳುವುದಿಲ್ಲ. ಹೀಗಾಗಿ ಹೈದರಾಬಾದ್‌ ಕರ್ನಾಟಕ ಭಾಗದ ಜನರ ಹಿತಾಸಕ್ತಿ ಉಳಿಯಲು ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ನೀಡುವುದೇ ಒಳ್ಳೆಯದಾಗಿ ಕಾಣುತ್ತಿದೆ. ಬೆಂಬಲಿಗರ ಸಭೆಯ ನಂತರ ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.