‘ಅಹವಾಲು ಆಲಿಸದಿದ್ದರೆ ಆಂದೋಲನ’

7
ಇನ್‌ಕಾಮೆಕ್‌್ಸ–2013: ಸಣ್ಣ ಕೈಗಾರಿಕೋದ್ಯಮಿಗಳ ಅಳಲು

‘ಅಹವಾಲು ಆಲಿಸದಿದ್ದರೆ ಆಂದೋಲನ’

Published:
Updated:

ಹುಬ್ಬಳ್ಳಿ:‘ಸಣ್ಣ ಕೈಗಾರಿಕೆಗಳು ಸಂಕಷ್ಟ ಸ್ಥಿತಿಯಲ್ಲಿದ್ದು, ಸಮಸ್ಯೆಗಳಿಗೆ ಸಂಬಂಧಿಸಿದಂತೆ ಚರ್ಚಿಸಲು ಒಂದು ತಿಂಗಳ ಒಳಗೆ ರಾಜ್ಯ ಸರ್ಕಾರ ಉದ್ದಿಮೆದಾರರ ಸಭೆ ಕರೆಯದಿದ್ದರೆ ರಾಜ್ಯದಾದ್ಯಂತ ಆಂದೋಲನಕ್ಕೆ ಇಳಿಯಬೇಕಾದೀತು’ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಗಳ ಒಕ್ಕೂಟದ (ಎಫ್‌ಕೆಸಿಸಿಐ) ಮಾಜಿ ಅಧ್ಯಕ್ಷ ಜೆ. ಕ್ರಾಸ್ತ ಎಚ್ಚರಿಕೆ ನೀಡಿದರು.ಅಮರಗೋಳದಲ್ಲಿ ನಡೆಯುತ್ತಿರುವ ‘ಇನ್‌ಕಾಮೆಕ್‌ಸ–2013’ ಕೈಗಾರಿಕಾ ವಸ್ತುಪ್ರದರ್ಶನ ವೇದಿಕೆಯಲ್ಲಿ ಭಾನುವಾರ ಜರುಗಿದ ಭಾರತ ರತ್ನ ಸರ್‌ ಎಂ. ವಿಶ್ವೇಶ್ವರಯ್ಯ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.‘ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳು ಕಳೆದರೂ ಸಣ್ಣ ಕೈಗಾರಿಕೆಗಳ, ಉದ್ಯಮಿಗಳ ಸಮಸ್ಯೆ, ಅಹವಾಲು ಆಲಿಸುವ ಪ್ರಯತ್ನ ಆಗಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಉದ್ದಿಮೆದಾರರು ಬೀದಿಗಿಳಿದು ಹೋರಾಟಕ್ಕಿಳಿಯುವುದು ಅನಿವಾರ್ಯವಾಗಲಿದೆ’ ಎಂದರು.‘ವೀರಪ್ಪ ಮೊಯಿಲಿ ಕೈಗಾರಿಕಾ ಸಚಿವರಾಗಿದ್ದ ಸಂದರ್ಭದಲ್ಲಿ ಸಣ್ಣ ಉದ್ದಿಮೆಗಳಿಗೆ ಸಾಕಷ್ಟು ನೆರವು ನೀಡಿದ್ದರು. ಅವರ ನಂತರ ಬಂದ ಯಾವುದೇ ಸಚಿವರು ಸಣ್ಣ ಕೈಗಾರಿಕೆಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಿಲ್ಲ. ಸಣ್ಣ ಉದ್ದಿಮೆಗಳಿಗೆ ಉತ್ತೇಜನ ನೀಡದಿದ್ದರೆ ಉದ್ಯೋಗ ಸೃಷ್ಟಿ ಹೇಗೆ ಸಾಧ್ಯ’ ಎಂದು ಅವರು ಪ್ರಶ್ನಿಸಿದರು.‘ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಕೈಗಾರಿಕೋದ್ಯಮಿಗಳ ಅಹವಾಲು ಆಲಿಸಲು ಮುಖ್ಯಮಂತ್ರಿಗೆ ಸಮಯವಿಲ್ಲ. ಈಗಿನ ಸಣ್ಣ ಕೈಗಾರಿಕೆ ಸಚಿವರಿಗೆ ಈ ವಲಯದ ಬಗ್ಗೆ ಅರಿವು ಇಲ್ಲ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್‌ಎಂಇ) ಸಮಸ್ಯೆಗಳನ್ನು ಆಲಿಸಿ ಕುಂದುಕೊರತೆಗಳಿಗೆ ಪರಿಹಾರ ಒದಗಿಸುವ ಉದ್ದೇಶದಿಂದ ಎಂಎಸ್‌ಎಂಇಗೆ ಪ್ರತ್ಯೇಕವಾಗಿ ಸಂಪುಟ ದರ್ಜೆ ಸಚಿವ ಸ್ಥಾನ ಮತ್ತು ಮುಖ್ಯ ಕಾರ್ಯದರ್ಶಿ ಹುದ್ದೆ ಸೃಷ್ಟಿಸಬೇಕು’ ಎಂದು ಅವರು ಆಗ್ರಹಿಸಿದರು.‘ಪ್ರಸಕ್ತ ಆರ್ಥಿಕ ಪರಿಸ್ಥಿತಿಯಲ್ಲಿ ಸಣ್ಣ ಕೈಗಾರಿಕೆಗಳನ್ನು ನಡೆಸುವುದು ತ್ರಾಸದಾಯಕ. ಇಂತಹ ಕೈಗಾರಿಕೆಗಳನ್ನು ಉತ್ತೇಜಿಸುವ ಪ್ಯಾಕೇಜ್‌ನ್ನು 3 ತಿಂಗಳ ಒಳಗೆ ಪ್ರಕಟಿಸದಿದ್ದರೆ ಶೇ 80ರಷ್ಟು ಉದ್ದಿಮೆಗಳು ಮುಚ್ಚಿಕೊಳ್ಳಲಿವೆ. ರಾಜ್ಯದಲ್ಲಿ ಶೇಕಡಾ 14 ವ್ಯಾಟ್‌ ಇದ್ದರೆ, ಇತರ ರಾಜ್ಯಗಳಲ್ಲಿ ಶೇ 2ರಷ್ಟು ಮಾತ್ರ ಇದೆ. ಹೀಗಾಗಿ ಸಣ್ಣ ಉದ್ದಿಮೆಗಳನ್ನು ನಡೆಸುವುದು ಕಷ್ಟವಾಗುತ್ತಿದೆ. ನಮಗೆ ಸಬ್ಸಿಡಿ ಬೇಡ. ರೈತರಂತೆ ನಾವು ಸಾಲಮನ್ನಾ ಮಾಡಿ ಎಂದೂ ಕೇಳುವುದಿಲ್ಲ. ಆದರೆ ಕೈಗಾರಿಕೆಗಳನ್ನು ನಡೆಸಿಕೊಂಡು ಹೋಗಲು ಪೂರಕ ವಾತಾವರಣ ಮಾಡಿಕೊಡಿ ಎಂದಷ್ಟೇ ಕೇಳುತ್ತಿದ್ದೇವೆ’ ಎಂದು ಕೋರಿದರು.‘ಕಳೆದ ವರ್ಷ ರೋಗಗ್ರಸ್ಥ ಕೈಗಾರಿಕೆಗಳಿಗೆ ಕೇವಲ ರೂ 2 ಲಕ್ಷ ಅನುದಾನ ನೀಡಲಾಗಿದೆ. ಸಣ್ಣ ಉದ್ಯಮಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ಕೇವಲ 20 ಲಕ್ಷ ಮೀಸಲಿಡಲಾಗಿದೆ. ರಫ್ತಿನಲ್ಲಿ ಶೇ 40ರಷ್ಟು ಸಣ್ಣ ಕೈಗಾರಿಕೆಯ ಕೊಡುಗೆ. 45 ಲಕ್ಷ ಮಂದಿಗೆ ಉದ್ಯೋಗ ನೀಡುವ 20 ಲಕ್ಷ ಕುಟುಂಬಗಳು ಆಶ್ರಯಿಸಿರುವ ಸುಮಾರು 2.5 ಕೋಟಿ ಮತದಾರರಿರುವ ಸಣ್ಣ ಉದ್ದಿಮೆಗಳನ್ನು ನಿರ್ಲಕ್ಷಿಸಿದರೆ ಪರಿಣಾಮ ನೆಟ್ಟಗಿರದು. ನಮಗೆ ನೆರವಾಗುವವರಿಗೆ ಮಾತ್ರ ನಾವು ಮತ್ತು ನಮ್ಮ ಕಾರ್ಮಿಕರು ಮುಂದಿನ ದಿನಗಳಲ್ಲಿ ಮತ ನೀಡುತ್ತೇವೆ’ ಎಂದೂ ಅವರು ಎಚ್ಚರಿಕೆ ನೀಡಿದರು.ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಅಧ್ಯಕ್ಷ ಬಿ.ಪಿ. ಶಶಿಧರ ಮಾತನಾಡಿ, ‘ನಮ್ಮ ಸಮಸ್ಯೆಗಳ ಕುರಿತು ಈಗಾಗಲೇ  ಸರ್ಕಾರದ ಗಮನಕ್ಕೆ ತಂದಿದ್ದೇವೆ. ಮುಂದಿನ 15ರಿಂದ 20 ದಿನಗಳ ಒಳಗೆ ಪೂರಕ ಸ್ಪಂದನೆ ಸಿಗದಿದ್ದರೆ ಮುಂದಿನ ಹೆಜ್ಜೆ ತೆಗೆದುಕೊಳ್ಳಲಾಗುವುದು’ ಎಂದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾಜಿ ಬೃಹತ್‌ ಮತ್ತು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಮಾತನಾಡಿ, ‘ತಮ್ಮ ಬಳಿಯಲ್ಲಿರುವ ಕೈಗಾರಿಕೆ ಮತ್ತು ಇಂಧನ ಇಲಾಖೆಗಳ ಸಚಿವ ಸ್ಥಾನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಕ್ತ ಸಚಿವರಿಗೆ ಹಂಚಿಕೆ ಮಾಡಬೇಕು’ ಎಂದು ಆಗ್ರಹಿಸಿದರು.‘ರಾಜ್ಯ ಸರ್ಕಾರಕ್ಕೆ ಕೈಗಾರಿಕೆ ಮತ್ತು ಸೇವಾ ವಲಯದಿಂದ ರೂ 70 ಸಾವಿರ ಕೋಟಿ ಆದಾಯ ಬರುತ್ತಿದೆ. ಹೀಗಾಗಿ ಆ ವಲಯಗಳು ಸರ್ಕಾರದ ನೆರವು ಬಯಸುವುದರಲ್ಲಿ ತಪ್ಪೇನು’ ಎಂದು ಅವರು ಪ್ರಶ್ನಿಸಿದರು.‘ರಾಜಕೀಯ ಕಾರಣಗಳಿಂದಾಗ ಧಾರವಾಡಲ್ಲಿ ಟಾಟಾ ನ್ಯಾನೊ ಮತ್ತು ಗದಗದಲ್ಲಿ ಪೋಸ್ಕೊ ಸ್ಥಾಪನೆಗೆ ಅಗತ್ಯವಾದ ಭೂಮಿ ಸಿಗಲಿಲ್ಲ. ಈ ಎರಡೂ ಕಂಪೆನಿಗಳು ಸ್ಥಾಪನೆಯಾಗುತ್ತಿದ್ದರೆ ಈ ಭಾಗದ ಸಣ್ಣ ಕೈಗಾರಿಕೆಗಳಿಗೆ ಅನುಕೂಲವಾಗುತ್ತಿತ್ತು ಮತ್ತು ಸಾವಿರಾರು ಮಂದಿಗೆ ಉದ್ಯೋಗ ಸಿಗುತ್ತಿತ್ತು. ಕಳೆದ ಎರಡು ಜಾಗತಿಕ ಹೂಡಿಕೆದಾರರ ಮೇಳದ ಪರಿಣಾಮ ಉತ್ತರ ಕರ್ನಾಟಕ ಭಾಗದಲ್ಲಿ ಮುಂದಿನ 5 ವರ್ಷದಲ್ಲಿ 12 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಕೈಗಾರಿಕೆ ಮತ್ತು ಬಂಡವಾಳ ಹೂಡಿಕೆ ಸಂಬಂಧಿಸಿದ ವಿಷಯಗಳಲ್ಲಿ ಯಾರೂ ರಾಜಕೀಯ ಮಾಡಬಾರದು’ ಎಂದರು.‘ಈ ಹಿಂದೆ ಜಾಗತಿಕ ಹೂಡಿಕೆ ಮೇಳ ಆಯೋಜಿಸುವ ಉದ್ದೇಶದಿಂದ ವಿದೇಶ ಪ್ರಯಾಣಕ್ಕೆ ಹೊರಟಾಗ ಟೀಕಿಸಿದ್ದ ಸಿದ್ದರಾಮಯ್ಯ, ಇದೀಗ ಅದೇ ಉದ್ದೇಶದಿಂದ ಚೀನಾ ಪ್ರವಾಸ ಕೈಗೊಂಡಿದ್ದಾರೆ. ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಹೂಡಿಕೆದಾರರನ್ನು ಸೆಳೆಯುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರು ಇನ್ನಷ್ಟು ದೇಶಗಳಿಗೆ ಭೇಟಿ ನೀಡಬೇಕು’ ಎಂದು ನಿರಾಣಿ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಮುರುಗೇಶ ನಿರಾಣಿ, ಏರ್‌ಟೆಕ್‌ ಪ್ರೈ. ಸಂಸ್ಥೆಯ ಲಜಪತ್‌ ರಾಯ್‌, ಮೈಕ್ರೋಫಿನಿಶ್‌ ವಾಲ್ವ್ಸ ಪ್ರೈ. ಸಂಸ್ಥೆಯ ತಿಲಕ ವಿಕಮ್ಸಿ, ಸ್ಕೈ ಟೆಕ್‌ ಸಮೂಹ ಸಂಸ್ಥೆಯ ನಾಗರಾಜ ಯಲಿಗಾರ ಮತ್ತು ಉತ್ಸವ ರಾಕ್‌ ಗಾರ್ಡ್‌ನ್‌ನ ಪ್ರಕಾಶ ದಾಸನೂರ ಅವರನ್ನು ಸನ್ಮಾನಿಸಲಾಯಿತು. ಕೆಸಿಸಿಐ ಅಧ್ಯಕ್ಷ ಎನ್‌.ಪಿ. ಜವಳಿ. ವಸಂತ ಲದವಾ, ಅಂದಾನಪ್ಪ ಸಜ್ಜನರ ಮತ್ತಿತರರು ಈ ಸಂದರ್ಭದಲ್ಲಿ  ಹಾಜರಿದ್ದರು.

‘ಯಡಿಯೂರಪ್ಪ ಬಂದೇ ಬರ್ತಾರೆ’

ಹುಬ್ಬಳ್ಳಿ:
‘ಮಾಜಿ ಮುಖ್ಯಮಂತ್ರಿ ಬಿ.ಎಸ್‌.­ಯಡಿಯೂರಪ್ಪ ಬಿಜೆಪಿಗೆ ಮರಳಬೇಕು ಎನ್ನುವುದು ನಮ್ಮೆಲ್ಲರ ಅಪೇಕ್ಷೆ. ಅವರು ಬಂದೇ ಬರ್ತಾರೆ. ಬಿಜೆಪಿ ಬಿಟ್ಟು ಹೋಗಿರುವ ಎಲ್ಲ ನಾಯಕರನ್ನು ಪಕ್ಷಕ್ಕೆ ಮರಳಿ ಕರೆತರಲು ಪ್ರಯತ್ನ ನಡೆಯುತ್ತಿದೆ’ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ತಿಳಿಸಿದರು.ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ನಿರಾಣಿ, ‘ಯಡಿಯೂರಪ್ಪ ರಾಜ್ಯದಲ್ಲಿ ಬಿಜೆಪಿ ಕಟ್ಟಿದವರು. ಪಕ್ಷಕ್ಕೆ ಮರಳುವಂತೆ ನಾವು ಅವರನ್ನು ವಿನಂತಿಸಿದ್ದೇವೆ. ಈ ನಿಟ್ಟಿನಲ್ಲಿ ಪಕ್ಷದ ಕೇಂದ್ರ ನಾಯಕತ್ವ ಕೂಡಾ ಆಸಕ್ತಿ ಹೊಂದಿದೆ’ ಎಂದರು.‘ಸದ್ಯ ನಾನು ಬಾಗಲಕೋಟೆ ಜಿಲ್ಲೆಯಲ್ಲಿ ಕೈಗಾರಿಕೆ ಅಭಿವೃದ್ಧಿಗೆ ಗಮನಕೊಡುತ್ತಿದ್ದೇನೆ. ಸಕ್ಕರೆ, ಸಿಮೆಂಟ್‌ ಮತ್ತು ಡಿಸ್ಟಿಲರಿ ಉದ್ಯಮದಿಂದ ಕಳೆದ 5 ವರ್ಷದಲ್ಲಿ ರೂ 5000 ಕೋಟಿ ವ್ಯವಹಾರ ನಡೆಸಿದ್ದೇನೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಒಟ್ಟು 5 ಸಾವಿರ ಉದ್ಯೋಗ ಸೃಷ್ಟಿಯಾಗಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry