ಗುರುವಾರ , ಜನವರಿ 23, 2020
19 °C
ವಿಚಾರಸಂಕಿರಣದಲ್ಲಿ ಪ್ರತಿಪಾದನೆ; ತ್ರಿಪುರಾ ರಾಜ್ಯದ ಪ್ರಯೋಗ ಯಶಸ್ವಿ

‘ಆದಿವಾಸಿಗಳಿದ್ದರೆ ಅರಣ್ಯ ಸುರಕ್ಷಿತ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಆದಿವಾಸಿ ಜನ ಅರಣ್ಯದೊಳಗೆ ವಾಸವಿದ್ದರೆ ಮಾತ್ರ ಅರಣ್ಯ ಉಳಿಯಲು ಸಾಧ್ಯ. ಇಂತಹದೊಂದು ಪ್ರಯೋಗ ನಡೆಸಿರುವ ತ್ರಿಪುರಾ ರಾಜ್ಯ ಯಶಸ್ವಿಯಾಗಿದ್ದು, ಅಲ್ಲೀಗ ಪ್ರತಿವರ್ಷ ಅರಣ್ಯ ಪ್ರದೇಶ ಹೆಚ್ಚುತ್ತಿದೆ ಎಂದು ಆದಿವಾಸಿಗಳ ಚಿಂತಕ, ಮೈಸೂರಿನ ಯು. ಬಸವರಾಜು ಪ್ರತಿಪಾದಿಸಿದರು.ರಾಜ್ಯ ಆದಿವಾಸಿಗಳ ಸಮನ್ವಯ ಸಮಿತಿಯು ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಆದಿವಾಸಿಗಳ ಸ್ಥಿತಿ–ಗತಿ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.ತಲೆತಲಾಂತರದಿಂದ ಅರಣ್ಯದಲ್ಲಿ ವಾಸವಿರುವ ಆದಿವಾಸಿಗಳಿಗೆ ಅಲ್ಲಿಯೇ ಬದುಕಿಗೆ ಬೇಕಾದ ಮೂಲಸೌಕರ್ಯಗಳನ್ನು ನೀಡಲಾಗಿದೆ. ಸುಮಾರು 1.20 ಲಕ್ಷ ಕುಟುಂಬಗಳಿಗೆ 1.70 ಲಕ್ಷ ಹೆಕ್ಟೇರ್‌ ಪ್ರದೇಶದಷ್ಟು ಅರಣ್ಯವನ್ನು ಹಂಚಲಾಗಿದೆ (ರಾಜ್ಯದ ಒಟ್ಟು ಅರಣ್ಯ ಭಾಗದ ಶೇ 30ರಷ್ಟು ಪ್ರದೇಶ). ಅರಣ್ಯ ಆಧಾರಿತ ಕೃಷಿಗೆ ಪ್ರೋತ್ಸಾಹಿಸುವ ಕಾರ್ಯಕ್ರಮಗಳನ್ನು ಅಲ್ಲಿನ ಸರ್ಕಾರ ಹಮ್ಮಿಕೊಂಡಿದೆ. ಇದರ ಫಲವಾಗಿ ಇಂದು ಅಲ್ಲಿ ತೋಟಗಾರಿಕಾ ಬೆಳೆಗಳು ವಿಪುಲವಾಗಿ ಬೆಳೆಯುತ್ತಿವೆ. ಅದರೊಂದಿಗೆ ಅರಣ್ಯ ಕೂಡ ಸಂರಕ್ಷಣೆಯಾಗುತ್ತಿದೆ ಎಂದು ಅವರು ವಿವರಿಸಿದರು.ವಿಶಿಷ್ಟ ಜೀವ ವೈವಿಧ್ಯ ಹೊಂದಿರುವ ಪಶ್ಚಿಮ ಘಟ್ಟ ಪ್ರದೇಶವನ್ನು ಸಂರಕ್ಷಿಸಬೇಕಾದರೆ ಇಲ್ಲಿನ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಬೇಕೆಂದು ಕಸ್ತೂರಿ ರಂಗನ್‌ ಸಮಿತಿ ಶಿಫಾರಸು ಮಾಡಿರುವುದು ಅವೈಜ್ಞಾನಿಕ. ಮನುಷ್ಯ (ಆದಿವಾಸಿ) ಕೂಡ ಈ ಪರಿಸರ, ಪ್ರಕೃತಿಯ ಒಂದು ಭಾಗ. ಇವನನ್ನು ಹೊರಗಿಟ್ಟು ಅರಣ್ಯವನ್ನು ಕಾಪಾಡುತ್ತೇವೆ ಎನ್ನುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.ಇದಕ್ಕೂ ಮುಂಚೆ ಆದಿವಾಸಿಗಳನ್ನು ಕಾಡಿನಿಂದ ನಾಡಿಗೆ ಕರೆತರುವ ಪ್ರಯತ್ನಗಳನ್ನು ನಡೆಸಿದ್ದ ನಮ್ಮ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ನಾಡಿಗೆ ಬಂದ ಆದಿವಾಸಿಗಳು ಇಲ್ಲಿನ ಬದುಕಿಗೆ ಹೊಂದಿಕೊಳ್ಳಲಾಗದೇ ಕುಡಿತದ ದಾಸರಾಗಿ ಅಥವಾ ಜೀತದಾಳುಗಳಾಗಿ ಜೀವನ ಕಳೆಯುತ್ತಿದ್ದಾರೆ. ಪುನರ್‌ವಸತಿ ಯೋಜನೆಗಳು ಆದಿವಾಸಿ ಜನರನ್ನು ಜೀತದಾಳುಗಳನ್ನಾಗಿ ರೂಪಿಸುವ ಕಾರ್ಯಕ್ರಮವಾಗಿದೆ ಎಂದು ಅವರು ಹೇಳಿದರು.ನಗರ ಪ್ರದೇಶಗಳಲ್ಲಿ ಆದಿವಾಸಿ ಪುರುಷರು ಒಂದು ರೀತಿಯಲ್ಲಿ (ದುಡಿಮೆ ಹೆಸರಿನಲ್ಲಿ) ಶೋಷಣೆಗೆ ಒಳಗಾದರೆ, ಮಹಿಳೆಯರು ದುಡಿಮೆ ಹಾಗೂ ಲೈಂಗಿಕವಾಗಿಯೂ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಆದಿವಾಸಿಗಳಿಗೆ ಅರಣ್ಯಗಳಲ್ಲಿ ಬದುಕಲು ಹಕ್ಕು ನೀಡಬೇಕೆಂದು ದೇಶದಾದ್ಯಂತ ಹೋರಾಟ ಮಾಡಿದ್ದರ ಫಲವಾಗಿ ಕೇಂದ್ರ ಸರ್ಕಾರವು ಅರಣ್ಯ ಹಕ್ಕು ಕಾಯ್ದೆಯನ್ನು 2006ರಲ್ಲಿ ಜಾರಿಗೆ ತಂದಿತು. ಆದರೆ, ಇದುವರೆಗೆ ಅನುಷ್ಠಾನಗೊಂಡಿಲ್ಲ. ಅರಣ್ಯ ಅಕ್ರಮ ಪ್ರವೇಶವೆಂದು ಆದಿವಾಸಿಗಳ ಮೇಲೆ ಕ್ರಿಮಿನಲ್‌ ಮೊಕದ್ದಮೆ ಹೂಡಲಾಗುತ್ತಿದೆ ಎಂದರು.ಅರಣ್ಯವಾಸಿಗಳ ಪುನರ್‌ ವಸತಿ ಹೆಸರಿನಲ್ಲಿ ಇಂದು ಹಲವು ಎನ್‌ಜಿಒಗಳು ಕಾರ್ಯನಿರ್ವಹಿಸುತ್ತಿವೆ. ಇದಕ್ಕಾಗಿ ವಿದೇಶಗಳಿಂದ ಕೋಟ್ಯಂತರ ರೂಪಾಯಿ ದೇಣಿಗೆ ಪಡೆಯುತ್ತಿವೆ. ಆದರೆ, ಯಾವ ಆದಿವಾಸಿಗಳೂ ಉದ್ಧಾರವಾಗಿದ್ದನ್ನು ನಾವು ಕಂಡಿಲ್ಲ. ಎನ್‌ಜಿಒಗಳು ಮಾತ್ರ ಉದ್ಧಾರವಾಗುತ್ತಿವೆ ಎಂದು ಅವರು ಆರೋಪಿಸಿದರು.ವಿಚಾರ ಸಂಕಿರಣದಲ್ಲಿ ಸಮಿತಿಯ ಅಧ್ಯಕ್ಷ  ಬೇಬಿ ಮ್ಯಾಥ್ಯು, ಸದಸ್ಯರಾದ ವಕೀಲ ಕೆ.ಆರ್‌.  ವಿದ್ಯಾಧರ್‌, ಪಿ.ಆರ್‌. ಭರತ್‌, ಮಹದೇವ, ಕಿಶೋರ್‌ ಕುಟ್ಟಪ್ಪ ಇದ್ದರು.

ಪ್ರತಿಕ್ರಿಯಿಸಿ (+)