ಮಂಗಳವಾರ, ಜೂನ್ 22, 2021
28 °C

‘ಆರೋಗ್ಯದಿಂದ ಸಂಪನ್ಮೂಲ ವೃದ್ಧಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಶಿಕ್ಷಣ ಮತ್ತು ಆರೋಗ್ಯ ಸ್ಥಿತಿ ಸುಧಾರಣೆಗೊಂಡಾಗ ಮಾತ್ರ ದೇಶದ ಸಂಪನ್ಮೂಲ ವೃದ್ಧಿಗೆ ಸಹಕಾರಿ­ಯಾಗಲಿದೆ. ಈ ಹಿನ್ನೆಲೆಯಲ್ಲಿ ನಗರ­ದಲ್ಲಿ ಹಂತ ಹಂತವಾಗಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದು ಶಾಸಕ ಡಾ.ಎ.ಬಿ.ಮಾಲಕರಡ್ಡಿ ಹೇಳಿದರು.ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ ಮಂಜೂರಾಗಿರುವ ಸುಮಾರು ₨10 ಕೋಟಿ ವೆಚ್ಚದ 60 ಹಾಸಿಗೆಯುಳ್ಳ ತಾಯಿ ಮತ್ತು ಮಕ್ಕಳ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಇಲ್ಲಿಯ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಭಾನುವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.ವೈದ್ಯರು ಮುಂದಿನ ದಿನಗಳಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು. ತಮ್ಮ ಮತ್ತು ಆರೋಗ್ಯ ಸಿಬ್ಬಂದಿ ಆರೋಗ್ಯವನ್ನು ಕಾಪಾಡಿಕೊಂಡು ಸಾರ್ವ­ಜನಿಕರಿಗೂ ಉತ್ತಮ ಆರೋಗ್ಯ ಸೇವೆ ಕಲ್ಪಿಸಬೇಕು. ಆಸ್ಪತ್ರೆಯಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ಯಾದಗಿರಿ ಜಿಲ್ಲೆಯಾಗಿ ಘೋಷಣೆ ಆದಾಗಿನಿಂದ ಜಿಲ್ಲಾ ಆಸ್ಪತ್ರೆಯು ತಾಲ್ಲೂಕು ಮಟ್ಟದ ಆಸ್ಪತ್ರೆಯಂತಿತ್ತು. ಹೆಚ್ಚುವರಿ ಅನುದಾನದ ಕೊರತೆ ಮತ್ತು ಆಸ್ಪತ್ರೆಯಲ್ಲಿ ಹೆಚ್ಚಿನ ಹಾಸಿಗೆಗಳ ಕೊರತೆ ಇತ್ತು. ಇದನ್ನು ಮನಗಂಡು ಸತತ ಪ್ರಯತ್ನದ ಫಲವಾಗಿ ತಾಯಿ ಮತ್ತು ಮಕ್ಕಳ ಆರೋಗ್ಯ ಸುಧಾರಣೆಗಾಗಿ ಈಗ ಭಾರತ ಸರ್ಕಾರದಿಂದ ಈ ಆಸ್ಪತ್ರೆಯಲ್ಲಿ 60 ಹಾಸಿಗೆಯುಳ್ಳ ತಾಯಿ ಮತ್ತು ಮಕ್ಕಳ ಆರೋಗ್ಯ ಕಟ್ಟಡ ನಿರ್ಮಾಣಕ್ಕೆ ₨ 10 ಕೋಟಿ ಮಂಜೂರು ಮಾಡಲಾಗಿದ್ದು, ಉತ್ತಮ ಆರೋಗ್ಯ ಸೌಲಭ್ಯ ದೊರೆಯಲಿದೆ ಎಂದು ಹೇಳಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಭಗವಂತ ಅನವಾರ್‌, ಜಿಲ್ಲಾ ಆಸ್ಪತ್ರೆಯನ್ನು ಈಗಾಗಲೇ 100 ಹಾಸಿಗೆಯುಳ್ಳ ಆಸ್ಪತ್ರೆಯಾಗಿ ಮೇಲ್ದರ್ಗೆ ಏರಿಸಲಾಗಿದೆ. ಅದರಂತೆ ಈಗ ಮೊದಲನೇ ಮಹಡಿಯಲ್ಲಿ 60 ಹಾಸಿಗೆಯುಳ್ಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ನಿರ್ಮಾಣ ಆಗಲಿದೆ. ವೈದ್ಯಾಧಿಕಾರಿಗಳು ಮತ್ತು ಗ್ರೂಪ್‌ ಡಿ ನೌಕರರಿಗೆ ತಲಾ 4 ವಸತಿ ಗೃಹಗಳು ಮತ್ತು ಸ್ಟಾಫ್ ನರ್ಸ್‌ಗಳಿಗೆ 6 ವಸತಿ ಗೃಹಗಳು, ಔಷಧಿ ಕೋಣೆ, ಉಗ್ರಾಣ, ಸುರಕ್ಷತಾ ಕೋಣೆ, ಆಸ್ಪತ್ರೆ ನವೀಕರಣ ಸೇರಿದಂತೆ ಹಲವು ಸೌಲಭ್ಯಗಳಿಗೆ ಈ ಅನುದಾನ ಬಳಕೆ ಆಗಲಿದೆ ಎಂದರು.ನೂತನ ವೈದ್ಯಕೀಯ ಕಾಲೇಜಿಗಾಗಿ 29.29 ಎಕರೆ ಜಮೀನು ಖರೀದಿಗೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸ­ಲಾಗಿದೆ. ಅಲ್ಲಿ 250 ಹಾಸಿಗೆಯುಳ್ಳ ಆಸ್ಪತ್ರೆಯು ಸಹ ನಿರ್ಮಾಣ ಆಗಲಿದೆ ಎಂದು ಹೇಳಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಲ್ಲಿಕಾ­ರ್ಜುನ ಮುಕ್ಕಾ, ತಾಲ್ಲೂಕು ಆರೋ­ಗ್ಯಾ­ಧಿಕಾರಿ ಡಾ.ಚಂದ್ರಕಾಂತ್ ನರ­ಬೋಳಿ, ನಿವೃತ್ತ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಪಿ.ವಿಜಯಕುಮಾರ, ರೆಡ್‌ಕ್ರಾಸ್‌ ಸಂಸ್ಥೆ ಜಿಲ್ಲಾ ಘಟಕದ ಅಧ್ಯಕ್ಷ ರಘುನಾಥರಡ್ಡಿ ಪಾಟೀಲ, ಡಾ.ನಾರಾ­ಯಣ­ರಾವ್‌, ನಗರಸಭೆ ಸದಸ್ಯರಾದ ಸ್ಯಾಮಸನ್‌ ಮಾಳಿಕೇರಿ, ಶಿವಕುಮಾರ ದೊಡಮನಿ, ಮಲ್ಲಣ್ಣ ದಾಸನಕೇರಿ, ನಿವೃತ್ತ ಪ್ರಾಚಾರ್ಯ ಸಿದ್ದಲಿಂಗಪ್ಪ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.