ಮಂಗಳವಾರ, ಜೂನ್ 22, 2021
29 °C

‘ಆರೋಗ್ಯದ ಬಗ್ಗೆ ಅರಿವು ಅಗತ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಜನಸಾಮಾನ್ಯರಿಗೆ ಆರೋಗ್ಯದ ಬಗೆಗೆ ಅರಿವು ಮೂಡಿಸಬೇಕಾದ್ದು ಅಗತ್ಯ’ ಎಂದು ಸಾಹಿತಿ ಪ್ರೊ.ಎಂ.ಎಚ್‌.ಕೃಷ್ಣಯ್ಯ ಹೇಳಿದರು.ಭಾರತ ಯಾತ್ರಾ ಕೇಂದ್ರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಸ್ವಾತಂತ್ರ್ಯ ಉದ್ಯಾನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕಿ ಡಾ.ವಸುಂಧರಾ ಭೂಪತಿ ಅವರ ‘ಆರೋಗ್ಯ ಸಂಗಾತಿ’ ಕೃತಿಯ ಮೂರನೇ ಸಂಪುಟ ಬಿಡುಗಡೆ ಮಾಡಿ ಅವರು ಮಾತನಾಡಿದರು.‘ಸಾಮಾನ್ಯರಿಗೂ ಆರೋಗ್ಯದ ಬಗೆಗೆ ತಿಳಿವಳಿಕೆ ನೀಡುವ, ಅರ್ಥವಾಗುವಂತಹ ಕೃತಿಗಳನ್ನು ಡಾ.ವಸುಂಧರಾ ಭೂಪತಿ ಅವರು ಬರೆದಿದ್ದಾರೆ. ದೇಶೀಯ ವೈದ್ಯ ಪದ್ಧತಿಯ ಬಗೆಗೆ ಅಧ್ಯಯನ ನಡೆಸಿ, ಸೊಗಸಾಗಿ ಎಲ್ಲ ಮಾಹಿತಿಗಳನ್ನು ಬರವಣಿಗೆಯಲ್ಲಿ ದಾಖಲಿಸಿದ್ದಾರೆ. ಅವರು ವೃತ್ತಿ ಬದುಕಿನ ಜತೆಗೆ ಬರವಣಿಗೆಯನ್ನು ಸಹ ಬೆಳೆಸಿಕೊಂಡು ಬರುತ್ತಿದ್ದಾರೆ’ ಎಂದರು.‘ನಮ್ಮ ಮನೆಯಲ್ಲಿಯೇ ಇರುವ ಆಯುರ್ವೇದದ ಔಷಧಗಳನ್ನು ಬಳಸಿ, ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಕುರಿತು ಆಪ್ತವಾಗಿ ಬರೆದಿದ್ದಾರೆ. ಆಯುರ್ವೇದವೂ ಒಂದು ಸಂಪತ್ತು. ಅದನ್ನು ಬಳಸಿಕೊಳ್ಳುವುದು ಹೇಗೆ ಎಂಬುದನ್ನು ತಮ್ಮ ಬರವಣಿಗೆಯಲ್ಲಿ ತಿಳಿಸಿದ್ದಾರೆ’ ಎಂದು ಹೇಳಿದರು.‘ಸಾಹಿತ್ಯದಲ್ಲಿ ಸಮಗ್ರ ಸಾಹಿತ್ಯ, ಸಮಗ್ರ ಕಾವ್ಯ ಎಂಬ ಪರಿಕಲ್ಪನೆಯಿದೆ. ಹಾಗೆಯೇ ಆರೋಗ್ಯ ಸಂಬಂಧ ಕೃತಿಗಳನ್ನು ಸಮಗ್ರ ವೈದ್ಯ ಸಾಹಿತ್ಯ ಅಥವಾ ಸಮಗ್ರ ಆರೋಗ್ಯ ಸಾಹಿತ್ಯ ಎಂದು ಕರೆಯಬೇಕಾಗಿದೆ’ ಎಂದರು. ‘ವೈದ್ಯಲೋಕದ ಶ್ರೇಷ್ಠರ ಕುರಿತು ಅವರ ವ್ಯಕ್ತಿ ಚಿತ್ರಗಳ ಮಾಲೆಯನ್ನು ರಚಿಸಬೇಕು’ ಎಂದು ಸಲಹೆ ನೀಡಿದರು.ಮನೋವೈದ್ಯ ಸಿ.ಆರ್‌.ಚಂದ್ರಶೇಖರ್ ಮಾತ­ನಾಡಿ, ‘ವಸುಂಧರಾ ಭೂಪತಿ ಅವರು ನಿಪುಣ ವೈದ್ಯೆಯ ಜತೆಗೆ ಒಳ್ಳೆಯ ಬರಹಗಾರ್ತಿಯೂ ಹೌದು. ವೈದ್ಯ ಸಾಹಿತ್ಯವನ್ನು ಮತ್ತೆ ಮತ್ತೆ ಓದಬೇಕೆಂಬ ಆಸೆಯನ್ನು ಹುಟ್ಟಿಸುವ ಕೃತಿಗಳನ್ನು ರಚಿಸಿದ್ದಾರೆ’ ಎಂದು ಹೇಳಿದರು.‘ಆರೋಗ್ಯದ ಬಗ್ಗೆ ಜನಸಾಮಾನ್ಯರಲ್ಲಿ ಮಾಹಿತಿಯ ಕೊರತೆಯಿದೆ. ಹೀಗಾಗಿ ಆರೋಗ್ಯ ಸಂಬಂಧಿ ಬರವಣಿಗೆ ಹೆಚ್ಚಾಗಬೇಕು’ ಎಂದು ವಸುಂಧರಾ ಭೂಪತಿ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.