ಗುರುವಾರ , ಜೂನ್ 24, 2021
23 °C
‘ಬುಡಕಟ್ಟು ಉಳಿವಿಗಾಗಿ ನಮ್ಮ ನಡೆ’ಯಲ್ಲಿ ಕೇಳಿದ ಒಕ್ಕೊರಲ ಧ್ವನಿ

‘ಆಶ್ರಮ ಶಾಲೆ’ ಹೆಸರು ಬದಲಿಸಿ, ದುಸ್ಥಿತಿ ಸರಿಪಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಆಶ್ರಮ ಶಾಲೆ’ ಎನ್ನುವ ಹೆಸರು ಗತಿ ಇಲ್ಲದ ಮಕ್ಕಳು, ಆಶ್ರಯ ಕೇಳುವ ಮಕ್ಕಳು ಎಂಬುದನ್ನು ಸೂಚಿಸುತ್ತದೆ. ಆದ್ದರಿಂದ ಆ ಹೆಸರನ್ನು ಬದಲಾಯಿಸಬೇಕು. ರಾಜ್ಯದಲ್ಲಿರುವ ೧೧೮ ಆಶ್ರಮ ಶಾಲೆಗಳಲ್ಲಿರುವ ದುಸ್ಥಿತಿಯನ್ನು ಸರಿಪಡಿಸಿ ಸುಧಾರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಕೂಗು ಆಶ್ರಮ ಶಾಲೆಯ ಮಕ್ಕಳ ಪೋಷಕರು, ಸಮುದಾಯ ಪ್ರತಿನಿಧಿಗಳು, ಶಿಕ್ಷಕರಿಂದ ವ್ಯಕ್ತವಾಯಿತು.ಕರ್ನಾಟಕ ಅರಣ್ಯಮೂಲ ಬುಡಕಟ್ಟುಗಳ ಒಕ್ಕೂಟ ವತಿಯಿಂದ ‘ಬುಡಕಟ್ಟು ಉಳಿವಿಗಾಗಿ ನಮ್ಮ ನಡೆ’ ಆಂದೋಲನದ ಅಂಗವಾಗಿ ಕಲಾ­ಮಂದಿರದ ಮನೆಯಂಗಳಲ್ಲಿ ಗುರುವಾರ ನಡೆದ ‘ಬುಡಕಟ್ಟು ಆಶ್ರಮ ಶಾಲೆಗಳ ಸ್ಥಿತಿಗತಿಗಳ ಕುರಿತು ಸಾರ್ವಜನಿಕ ಅಹವಾಲು’ ಕಾರ್ಯಕ್ರಮ­ದಲ್ಲಿ ಆಶ್ರಮ ಶಾಲೆಗಳ ಸ್ಥಿತಿಗತಿ, ಸುಧಾರಣೆ ಕೈಗೊಳ್ಳಬೇಕಾದ ಅಂಶಗಳ ಬಗ್ಗೆ ಅಹವಾಲು ಸಲ್ಲಿಸಲಾಯಿತು.ಬುಡಕಟ್ಟು ಸಂಶೋಧಕ ಮನೋಜ್ ಮಾತನಾಡಿ, ‘ಕೊಡಗು ಜಿಲ್ಲೆಯಲ್ಲಿ ೧೨ ಆಶ್ರಮ ಶಾಲೆಗಳಿವೆ. ಕ್ಷೇತ್ರ ಕಾರ್ಯ ಮಾಡುವ ಸಂದರ್ಭದಲ್ಲಿ ಬಹುಪಾಲು ಶಾಲೆಗಳಲ್ಲಿ ಅವ್ಯವಸ್ಥೆ ಕುರಿತು ಮನವರಿಕೆಯಾಯಿತು. ಮಕ್ಕಳಿಗೆ ಸರಿಯಾಗಿ ಪಾಠ ಮಾಡುವುದಿಲ್ಲ, ಪೌಷ್ಟಿಕ ಆಹಾರ ನೀಡುತ್ತಿಲ್ಲ, ಮಕ್ಕಳ ಬೌದ್ಧಿಕ ಮಟ್ಟ ಕಡಿಮೆ ಇರುತ್ತದೆ. ಪ್ರಾಥಮಿಕ ಚಿಕಿತ್ಸೆಗೂ ವ್ಯವಸ್ಥೆ ಇರುವುದಿಲ್ಲ. ಹಂಗಾಮಿ ಮತ್ತು ದಿನಗೂಲಿ ಲೆಕ್ಕದ ಮೇಲೆ ಶಿಕ್ಷಕರು ಹಾಗೂ ಅಡುಗೆಯವರನ್ನು ನೇಮಕ ಮಾಡಿ­ಕೊಳ್ಳ­­ಲಾ­ಗಿದೆ. ಈ ಎಲ್ಲ ಅಂಶಗಳಿಂದಾಗಿ ಆಶ್ರಮ ಶಾಲೆಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸಮುದಾಯ ಪ್ರತಿನಿಧಿ ಭೂರಾಜ್ ಮಾತನಾಡಿ, ‘ಹಾಸನ ಜಿಲ್ಲೆಯ ಹಗರೆ ಆಶ್ರಮ ಶಾಲೆಯಲ್ಲಿ ಹಕ್ಕಿಪಿಕ್ಕಿ ಸಮುದಾಯದ ಮಕ್ಕಳು ಅಧ್ಯಯನ ನಡೆಸುತ್ತಿದ್ದಾರೆ. ೧೮ ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಆದರೆ, ಶಾಲೆಗೆ ಒಂದು ಸ್ವಂತ ಕಟ್ಟಡವಿರಲಿಲ್ಲ. ಇದಕ್ಕಾಗಿ ಪ್ರತಿಭಟನೆ, ‘ಕಾಲ್ನಡಿಗೆ ಜಾಥಾ’ ಫಲವಾಗಿ ಸರ್ಕಾರ ರೂ ೧.೨೬ ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೆತ್ತಿ­ಕೊಂಡಿತು. ಆದರೆ, ೯ ವರ್ಷಗಳೇ ಕಳೆದಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಹಣವನ್ನು ನುಂಗಿ ನೀರು ಕುಡಿಯಲಾಗಿದೆ. ಈ ಸ್ಥಳ ವ್ಯಭಿಚಾರ, ಜೂಜು ಅಡ್ಡೆಯಾಗಿ ಮಾರ್ಪಟ್ಟಿದೆ. ಆದರೆ, ಶಾಲೆಗೆ ಮಾತ್ರ ಸ್ವಂತ ಕಟ್ಟಡ ನಿರ್ಮಾಣದ ಕನಸು ನನಸಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.ಎಚ್.ಡಿ. ಕೋಟೆ ತಾಲ್ಲೂಕಿನ ಜಕ್ಕಹಳ್ಳಿ ಗಿರಿಜನರ ಆಶ್ರಮ ಶಾಲೆಯ ಸಮುದಾಯ ಶಿಕ್ಷಕ ಸಿ. ರಾಜು ಮಾತನಾಡಿ, ‘ಶಾಲೆಗೆ ೬ ಹಾಡಿ ಯಿಂದ ಹಾಗೂ ೩ ಗ್ರಾಮಗಳಿಂದ ಒಟ್ಟು ೧೨೦ ಮಕ್ಕಳು ಬರುತ್ತಾರೆ. ಆದರೆ, ಜೂನ್‌ ತರಗತಿ ಪ್ರಾರಂಭವಾದರೆ ಆಗಸ್ಟ್‌ನಲ್ಲಿ ಪಠ್ಯಪುಸ್ತಕಗಳು ಬರುತ್ತವೆ. ಮಕ್ಕಳಿಗೆ ಎರಡು ವರ್ಷದಿಂದ ಸಮವಸ್ತ್ರ ನೀಡಿಲ್ಲ. ಪ್ರಗತಿ, ಆರೋಗ್ಯ ಕಾರ್ಡ್, ಸೂಕ್ತ ಕಲಿಕಾ ಸಾಮಗ್ರಿಗಳು, ಪೀಠೋಪಕರಣ ಗಳಿಲ್ಲ. ಶಿಕ್ಷಕರಿಗೆ ಬೇಕಾದ ತರಬೇತಿ ನೀಡಿಲ್ಲ. ಪಠ್ಯದ ಹೊರತಾಗಿ ಕ್ರೀಡೆ, ಚಿತ್ರಕಲೆ, ಸಂಗೀತ ಯಾವುದನ್ನೂ ಕಲಿಸುವುದಿಲ್ಲ. ಮಕ್ಕಳಿಗೆ ಪೌಷ್ಟಿಕಾಂಶ ಆಹಾರ ನೀಡುತ್ತಿಲ್ಲ. ೧೨೦ ಮಕ್ಕಳಿದ್ದರೆ ೧೫೦ ಮಕ್ಕಳಿಗೆ ಆಹಾರ ನೀಡಲಾಗಿದೆ ಎಂದು ವಾರ್ಡನ್ ಲೆಕ್ಕ ತೋರಿಸುತ್ತಾರೆ’ ಎಂದು ದೂರಿದರು.ಚಾಮರಾಜನಗರ ಜಿಲ್ಲೆಯ ಜೀರಿಗೆ ಗದ್ದೆಯ ಗಿರಿಜನ ಆಶ್ರಮ ಶಾಲೆಯ ಶಿಕ್ಷಕರಾಗಿದ್ದ ಮುತ್ತಯ್ಯ ಆಶ್ರಮ ಶಾಲೆಗಳ ದುಃಸ್ಥಿತಿ ಕುರಿತು ಮಾಹಿತಿ ನೀಡಿದರು.ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ, ಬುಡಕಟ್ಟು ಶಿಕ್ಷಣ ತಜ್ಞೆ ಪ್ರೊ.ಎ.ಆರ್. ವಾಸವಿ, ಎಚ್.ಡಿ. ಕೋಟೆ ತಾಲ್ಲೂಕು ಬಸವನಗಿರಿ ಆಶ್ರಮ ಶಾಲೆಯ ಶಿಕ್ಷಕ ಮಾರ ಜೇನುಕುರುಬ, ಸುಶೀಲ ಕೊರಗನಾಡ, ಧನಂಜಯ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.