‘ಇಲ್ಲಿನ ಊಟ ಬೊಂಬಾಟ್‌’

7
ಬೆಂಗಳೂರಿನ ಅತಿಥಿ

‘ಇಲ್ಲಿನ ಊಟ ಬೊಂಬಾಟ್‌’

Published:
Updated:

‘ಬೆಂಗಳೂರು ಸುಂದರ ನಗರಿ. ಇದು ಎಲ್ಲ ವರ್ಗದ ಜನರಿಗೆ ಆಶ್ರಯ ತಾಣ. ಆಕಾಶದಷ್ಟು ಅವಕಾಶಗಳನ್ನು ತನ್ನೊಳಗಿಟ್ಟುಕೊಂಡಿರುವ ಈ ಊರೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ’ ಎಂದು ನಗೆ ಬೀರಿದರು ದೀಪಕ್ ಪಾಂಡೆ.ಆಗಿಂದಾಗ್ಗೆ ಕೆಲಸದ ನಿಮಿತ್ತ ಇಲ್ಲಿಗೆ ಬಂದು ಹೋಗುವ ದೀಪಕ್ ಪಾಂಡೆ ವೊಡಾಫೋನ್ ಬಿಸಿನೆಸ್ ಸರ್ವಿಸ್ ಮುಖ್ಯ ನಿರ್ವಹಣಾಧಿಕಾರಿ ಹಾಗೂ ಉಪಾಧ್ಯಕ್ಷ. ವೊಡಾಫೋನ್ ಇತ್ತೀಚೆಗೆ ಗ್ರಾಹಕರಿಗೆಂದು ವಿಶೇಷ ಸೇವೆಗಳನ್ನು ನೀಡಿದ್ದು, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಬೆಂಬಲ ನೀಡುವ ಕಾರ್ಯವನ್ನು ನಗರದ ತಾಜ್ ವೆಸ್ಟೆಂಡ್‌ನಲ್ಲಿ ಹಮ್ಮಿಕೊಂಡಿತ್ತು. ವೊಡಾಫೋನ್‌ನ ‘ಡ್ರೈವ್ ಇನ್‌ಟುದಿ ಬಿಗ್ ಲೀಗ್ ಸೀಸನ್ ಥ್ರೀ’ ಪ್ರತಿನಿಧಿಯಾಗಿ ಮುಂಬೈನಿಂದ ಇಲ್ಲಿಗೆ ಬಂದಿದ್ದ ದೀಪಕ್, ತಮ್ಮ ಉದ್ದಿಮೆ ಹಾಗೂ ಉದ್ಯಾನನಗರಿಯ ಬಗ್ಗೆ ಅನಿಸಿಕೆಗಳನ್ನೂ ಹಂಚಿಕೊಂಡರು.ಸಣ್ಣ ಮತ್ತು ಮಧ್ಯಮ ಉದ್ದಿಮೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಬೆಂಗಳೂರು ಇದಕ್ಕೆ ಸೂಕ್ತ ಸ್ಥಳ ಎನ್ನುವುದು ದೀಪಕ್‌ ಅಭಿಪ್ರಾಯ. ವ್ಯಾಪಾರ, ವಾಣಿಜ್ಯ ಕ್ಷೇತ್ರದಲ್ಲಿ ಈ ನಗರ ಸಾಕಷ್ಟು ಬೆಳೆದಿದೆ, ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿದೆ ಎಂದೂ ಹೇಳಿದರು.‘ಬೆಂಗಳೂರು ನನ್ನಿಷ್ಟದ ಸ್ಥಳ. ಬಿಸಿನೆಸ್ ವಿಷಯಕ್ಕೆ ಮಾತ್ರವಲ್ಲ, ವೈಯಕ್ತಿಕವಾಗಿ ನನಗೆ ಈ ನಗರ ತುಂಬಾ ಖುಷಿ ನೀಡುತ್ತದೆ. ತಿಂಡಿ ತಿನಿಸಿರಲಿ, ವಾತಾವರಣವಿರಲಿ ಎಲ್ಲವೂ ಹಿತವಾಗಿದೆ’ ಎಂದು ನಗರವನ್ನು ಹಾಡಿ ಹೊಗಳಿದರು.ಇಲ್ಲಿ ದಿನೇದಿನೇ ಹೊಸ ಹೊಸ ಕಂಪೆನಿಗಳು ಹುಟ್ಟಿಕೊಳ್ಳುತ್ತಿರುವ ಕಾರಣ ನಗರ ಇನ್ನಷ್ಟು ಜನಪ್ರಿಯತೆ ಗಳಿಸುವುದರಲ್ಲಿ ಸಂಶಯವೇ ಇಲ್ಲ ಎಂದೂ ದೃಢವಾಗಿ ನುಡಿಯುತ್ತಾರೆ ಇವರು. ಹಿಂದೆ ಕೆಲಸ ಅರಸಿ ಬಂದ ದೀಪಕ್  ತಮಗೆ ಬೆಂಗಳೂರು ನೆಲೆ ನೀಡಿದ್ದನ್ನು ನೆನೆಯುತ್ತಾ ಭಾವುಕರಾಗುತ್ತಾರೆ. ‘ಬೆಂಗಳೂರು ಸಾಕಷ್ಟು ಬದಲಾವಣೆಗೆ ಒಗ್ಗಿಕೊಂಡಿದೆ. ಆಗಿಂದಾಗ್ಗೆ ಇಲ್ಲಿಗೆ ಬರುತ್ತಿರುತ್ತೇನೆ. ಒಂದೊಂದು ಬಾರಿ ಬಂದಾಗಲೂ ಒಂದೊಂದು ಬದಲಾವಣೆಯಾಗಿರುತ್ತದೆ. ಆದರೆ ಅವೆಲ್ಲವೂ ನಗರಕ್ಕೆ ಮೆರುಗು ನೀಡುತ್ತಿದೆ ಎಂಬುದೇ ಸಂತಸ’ ಎಂದು ನಗರದ ಚೆಲುವನ್ನು ವರ್ಣಿಸುತ್ತಾರೆ.ಇಲ್ಲಿ ಎಲ್ಲ ಸ್ಥಳಗಳೂ ಸುಂದರವಾಗಿವೆ ಎನ್ನುವ ದೀಪಕ್, ಬೆಂಗಳೂರಿಗೆ ಹೊರಡುವ ಅವಕಾಶ ಸಿಕ್ಕರೆ, ಹಿಂದೆ ಮುಂದೆ ಯೋಚಿಸದೆ, ತುದಿಗಾಲಲ್ಲಿ ಹೊರಟು ನಿಲ್ಲುತ್ತಾರಂತೆ. ಇಲ್ಲಿಗೆ ಭೇಟಿ ಕೊಡುವುದೇ ಅವರಿಗೆ ಖುಷಿಯ ವಿಷಯವಂತೆ. ಕೆಲಸದ ನಿಮಿತ್ತ ಬಂದರೂ ಒಂದು ಭಾವನಾತ್ಮಕ ನಂಟು ಮನಸ್ಸನ್ನು ಬೆಸೆದುಕೊಂಡಿದೆ ಎಂದು ಮುಕ್ತವಾಗಿ ಮಾತನಾಡುತ್ತಾರೆ. ಇನ್ನು ಊಟದ ವಿಷಯದಲ್ಲಿ ಬೆಂಗಳೂರು ನಂಬರ್ ಒನ್ ಎನ್ನುವುದು ಅವರ ಅಭಿಪ್ರಾಯ.‘ಬೆಂಗಳೂರಿಗೆ ಬಂದರೆ ಬೆಂಗಳೂರು ಶೈಲಿಯ ಆಂಧ್ರ ಊಟ ತಿನ್ನದೆ ಹೋಗುವುದೇ ಇಲ್ಲ. ಆಂಧ್ರ ಊಟವನ್ನು ಇಲ್ಲಿನವರು ವಿಭಿನ್ನವಾಗಿ ಮಾಡುತ್ತಾರೆ. ತುಂಬಾ ರುಚಿಕರವಾಗಿರುತ್ತದೆ. ನನ್ನ ಸ್ನೇಹಿತರನ್ನೂ ಕರೆದುಕೊಂಡು, ಅವರಿಗೂ ಈ ರುಚಿಯ ಪರಿಚಯ ಮಾಡುತ್ತೇನೆ’ ಎಂದು ಬಾಯಿ ಚಪ್ಪರಿಸಿದರು ದೀಪಕ್.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry