‘ಉ.ಕ. ಅಭಿವೃದ್ಧಿ ಕಾವಲು ಸಮಿತಿ ರಚನೆ ಶೀಘ್ರ’

ಬಾಗಲಕೋಟೆ: ಉತ್ತರ ಕರ್ನಾಟಕ ಅಭಿವೃದ್ಧಿ ಕಾವಲು ಸಮಿತಿಯನ್ನು ಶೀಘ್ರದಲ್ಲೇ ರಚಿಸಲಾಗುವುದು. ಜಿಲ್ಲಾ ಪ್ರವಾಸ ಕೈಗೊಂಡು ಕಾವಲು ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡ ಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ರಾಜ್ಯದ ಆದಾಯದಲ್ಲಿ ಸಮಪಾಲು ನೀಡಬೇಕು ಹಾಗೂ ನೀರಾವರಿಗೆ ಹೆಚ್ಚು ಆದ್ಯತೆ ನೀಡಬೇಕು ಈ ಬಗ್ಗೆ ವಿಧಾನ ಪರಿಷತ್ ಅಧಿವೇಶನದಲ್ಲಿ ಹೋರಾಟ ಮಾಡಲು ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದರು.
ಉತ್ತರ ಕರ್ನಾಟಕದ ನೀರಾವರಿ, ಕೃಷಿ, ಶಿಕ್ಷಣ, ರಸ್ತೆ ಸೇರಿದಂತೆ ವಿವಿಧ ಕ್ಷೇತ್ರಗಳ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.
ಉತ್ತರ ಕರ್ನಾಟಕದ ಪ್ರತಿಯೊಂದು ಜಿಲ್ಲೆಯಲ್ಲಿ ಡಾ.ಡಿ.ಎಂ. ನಂಜುಂಡಪ್ಪ ವರದಿ ಆಧಾರದಂತೆ ಯಾವ್ಯಾವ ಯೋಜನೆಗಳು ಜಾರಿ ಮಾಡಲಾಗಿದೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುವುದು ಎಂದು ಹೇಳಿದರು.
ಕೃಷಿ ಪ್ಯಾಕೇಜ್ ನೀಡುವಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಬಹುತೇಕ ಬರಗಾಲ ಪೀಡಿತ ಜಿಲ್ಲೆಗಳಗಳಾಗಿರುವ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯ ಒಂದೇ ಒಂದು ತಾಲ್ಲೂಕಿನಲ್ಲಿಯೂ ಕೃಷಿ ಪ್ಯಾಕೇಜ್ ಅನುದಾನ ನೀಡಿಲ್ಲ ಎಂದು ಆಕ್ಷೇಪಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಮುಳುಗಡೆಯಾಗುವ ರೈತರ ಜಮೀನುಗಳಿಗೆ ಪರಿಹಾರ ನೀಡುವಲ್ಲಿ ಗೊಂದಲ ಸೃಷ್ಟಿಸಬಾರದು. ಪ್ರತಿ ಎಕರೆಗೆ ₹ 25 ಲಕ್ಷ ಪರಿಹಾರ ಹಾಗೂ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಒತ್ತಾಯಿಸಿದರು.
ಬಜೆಟ್ದಲ್ಲಿ ಘೋಷಣೆಯಾದ ಬಳಿಕ ಏಪ್ರಿಲ್ 1ರಿಂದ ಯೋಜನೆಗಳು ಜಾರಿಯಾಗಬೇಕು. ವರ್ಷದ ಕೊನೆಯ ದಿನ ಮಾರ್ಚ್ 31 ರಾತ್ರಿ ಖರ್ಚು ಹಾಕಿ ಪಾಲು ಹಂಚಿಕೆ ಮಾಡುವ ಸಂಸ್ಕೃತಿ ದೂರವಾಗಬೇಕು ಎಂದರು.
ಚಿತ್ರಣ ಬದಲು: ಬರುವ 15 ದಿನಗಳಲ್ಲಿ ರಾಜ್ಯ ಬಿಜೆಪಿಯಲ್ಲಿ ಹೊಸ ವಾತಾವರಣ ಸೃಷ್ಟಿಯಾಗಲಿದೆ. ಈಗಿರುವ ಕೆಲವೊಂದು ನಾಯಕರು ಬಿಜೆಪಿ ನನ್ನ ಕೈಯಲ್ಲಿಯೇ ಇದೆ ಎಂದು ಭಾಷಣ ಮಾಡುತ್ತಿದ್ದಾರೆ. ಹತ್ತಾರು ವರ್ಷಗಳಿಂದ ಬಿಜೆಪಿಯನ್ನು ಕಟ್ಟಿದ ಕಾರ್ಯಕರ್ತರನ್ನು ನಿರ್ಲಕ್ಷ್ಯ ಮಾಡುವ ಮತ್ತು ಉಚ್ಚಾಟನೆ ಮಾಡುವ ಬೇಜವಾಬ್ದಾರಿ ಕೆಲಸ ಬಿಡಬೇಕು. ಸಂಬಂಧಿಕರಿಗೆ ಹಾಗೂ ಉಪ ಜಾತಿಯವರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡುವುದನ್ನು ಬಿಜೆಪಿ ಮುಖಂಡರು ಬಿಡಬೇಕು ಎಂದು ಸಲಹೆ ನೀಡಿದರು.
ಸದ್ಯಕ್ಕೆ ಪಕ್ಷೇತರನಾಗಿಯೇ ಮುಂದುವರೆಯುವೆ. ಮುಂದಿನ ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ. 2017ಕ್ಕೆ ನನ್ನ ಕೈಯಲ್ಲೇ ವಿಧಾನಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಹಂಚಿಕೆ ಮಾಡುವ ಕಾಲ ಸನ್ನಿಹಿತವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ನಾಯಕರು ಜಿ.ಎಸ್.ನ್ಯಾಮಗೌಡ ಅವರನ್ನು ಬಲಿ ಪಶು ಮಾಡಿದರು. ಬಿಜೆಪಿ ನಾಯಕರು ಹೊಂದಾಣಿಕೆ ಮಾಡಿಕೊಂಡಿದ್ದರಿಂದ ನ್ಯಾಮಗೌಡರು ಸೋಲು ಕಾಣಬೇಕಾಯಿತು ಎಂದರು.
ಕೃಷಿ, ಕಂದಾಯ ಸಚಿವರು, ಮುಖ್ಯಮಂತ್ರಿ, ವಿಧಾನಸೌಧದ ಹಿಂದೆ ಗಿರಕಿ ಹೊಡೆಯುವುದನ್ನು ಬಿಟ್ಟು, ಜಿಲ್ಲೆಗಳಿಗೆ ಭೇಟಿ ನೀಡಿ ನೈಜ ಸ್ಥಿತಿಯ ಬಗ್ಗೆ ಆಯಾ ಜಿಲ್ಲಾಮಟ್ಟದ ಅಧಿಕಾರಿಗಳ ಜತೆ ಸಭೆ ನಡೆಸಿ ಸ್ಥಿತಿಗತಿ ತಿಳಿದು ಕೊಳ್ಳಬೇಕು ಎಂದರು. ಮುಖಂಡರಾದ ಎಂ.ಎಸ್.ರುದ್ರಗೌಡರ, ಎಚ್.ಆರ್. ಹುಟಗಿ ಉಪಸ್ಥಿತರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.