‘ಉತ್ತಮ ಜೊತೆಯಾಟ ಮೂಡಿಬರಲಿಲ್ಲ’

7

‘ಉತ್ತಮ ಜೊತೆಯಾಟ ಮೂಡಿಬರಲಿಲ್ಲ’

Published:
Updated:

ಬೆಂಗಳೂರು: ಉತ್ತಮ ಜೊತೆಯಾಟ ಮೂಡಿ ಬರದೇ ಇದ್ದುದು ಹಾಗೂ ವೆಸ್ಟ್‌ ಇಂಡೀಸ್‌ ತಂಡದ ಶಿಸ್ತಿನ ಬೌಲಿಂಗ್‌ ನಮ್ಮ ಸೋಲಿಗೆ ಕಾರಣವಾಯಿತು ಎಂದು ಭಾರತ ‘ಎ’ ತಂಡದ ನಾಯಕ ಯುವರಾಜ್‌ ಸಿಂಗ್‌ ಹೇಳಿದ್ದಾರೆ.ಮಂಗಳವಾರ ನಡೆದ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಂಡೀಸ್‌ ತಂಡದ ಎಲ್ಲ ಬೌಲರ್‌ಗಳೂ ತಮ್ಮ ಎಸೆತಗಳಲ್ಲಿ ನಿಖರತೆ ಕಾಪಾಡಿಕೊಳ್ಳಲು ಯಶಸ್ವಿಯಾದರು’ ಎಂದರು.‘280 ರನ್‌ಗಳ ಗುರಿ ಬೆನ್ನಟ್ಟುವ ವೇಳೆ ಒಂದೆರಡು ಉತ್ತಮ ಜೊತೆಯಾಟಗಳು ಮೂಡಿಬರಬೇಕಿದೆ. ಮಾತ್ರವಲ್ಲ, ಇನಿಂಗ್ಸ್‌ಗೆ ಉತ್ತಮ ಆರಂಭ ದೊರೆಯಬೇಕು. ಆದರೆ ನಮ್ಮ ಆರಂಭ ಉತ್ತಮವಾಗಿರಲಿಲ್ಲ. ಈ ಕಾರಣ ಒತ್ತಡದಲ್ಲೇ ಆಡಬೇಕಾಯಿತು’ ಎಂದು ತಿಳಿಸಿದರು.

ಭಾರತ ತಂಡದ ಯಾವುದೇ ಬ್ಯಾಟ್ಸ್‌ಮನ್‌ ಅರ್ಧಶತಕ ಗಳಿಸಲಿಲ್ಲ. ಮೊದಲ ಪಂದ್ಯದಲ್ಲಿ ಶತಕ ಗಳಿಸಿದ್ದ ಯುವರಾಜ್‌ (40) ಅವರೇ ಗರಿಷ್ಠ ರನ್‌ ಗಳಿಸಿದ ಆಟಗಾರ ಎನಿಸಿಕೊಂಡರು.‘ಕೆಲವು ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ಕೂಡಾ ಮುಳುವಾಗಿ ಪರಿಣಮಿಸಿತು. ಜೊನಾಥನ್‌ ಕಾರ್ಟರ್‌ ತಮಗೆ ದೊರೆತ ಜೀವದಾನದ ನೆರವಿನಿಂದ ದೊಡ್ಡ ಇನಿಂಗ್ಸ್‌ ಕಟ್ಟಿದರು. ಎದುರಾಳಿ ತಂಡವನ್ನು 260 ರನ್‌ಗಳ ಒಳಗೆ ನಿಯಂತ್ರಿಸಬೇಕಿತ್ತು’ ಎಂದು ಅವರು ತಿಳಿಸಿದರು. ಆರು ರನ್‌ ಗಳಿಸಿದ್ದ ವೇಳೆ ಕಾರ್ಟರ್‌ಗೆ ಜೀವದಾನ ಲಭಿಸಿತ್ತು.ಅದೇ ರೀತಿ ಭಾರತದ ಆಟಗಾರರು ಕ್ಷೇತ್ರರಕ್ಷಣೆಯಲ್ಲಿ ಚುರುಕು ತೋರದ ಕಾರಣ ಒಂದೆರಡು ಬೌಂಡರಿಗಳು ಎದುರಾಳಿ ತಂಡಕ್ಕೆ ‘ಉಡುಗೊರೆ’ಯಾಗಿ ಲಭಿಸಿತ್ತು.ವಿಂಡೀಸ್‌ ತಂಡದ ನಾಯಕ ಕೀರನ್‌ ಪೊವೆಲ್‌ ಅವರು ಜೊನಾಥನ್‌ ಕಾರ್ಟರ್‌ ಮತ್ತು ಲಿಯೊನ್‌ ಜಾನ್ಸನ್‌ ತೋರಿದ ಬ್ಯಾಟಿಂಗ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.‘ತಂಡದಲ್ಲಿರುವ ಎಲ್ಲರಿಗೂ ಆಡುವ ಅವಕಾಶ ಲಭಿಸುವುದಿಲ್ಲ. ಇವರಿಬ್ಬರಿಗೆ ಮೊದಲ ಪಂದ್ಯದಲ್ಲಿ ಹನ್ನೊಂದರ ಬಳಗದಲ್ಲಿ ಸ್ಥಾನ ಲಭಿಸಿರಲಿಲ್ಲ’ ಎಂದರು. ಇದೀಗ ತಮಗೆ ದೊರೆತ ಅವಕಾಶವನ್ನು ಇಬ್ಬರೂ ಸಮರ್ಥವಾಗಿ ಬಳಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry