‘ಉನ್ನತ ಶಿಕ್ಷಣವೂ ಕನ್ನಡದಲ್ಲಿ ಸಿಗುವಂತಾಗಬೇಕು’

*ಸರ್ಕಾರಿ ಶಾಲೆಗಳಿಗೆ ಬರುವ ಮಕ್ಕಳ ಸಂಖ್ಯೆ ಯಾಕೆ ಕಡಿಮೆ ಆಗುತ್ತಿದೆ? ಆದರೆ ಸರ್ಕಾರದ್ದೇ ಆದ ಕೇಂದ್ರೀಯ ವಿದ್ಯಾಲಯ, ನವೋದಯ ವಿದ್ಯಾಲಯ, ಮೊರಾರ್ಜಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ಶಾಲೆಗಳ ಪ್ರವೇಶಕ್ಕೆ ಜನ ಮುಗಿಬೀಳುತ್ತಾರಲ್ಲವೆ?
ಕುಟುಂಬ ಕಲ್ಯಾಣ ಯೋಜನೆಯಿಂದ ಜನಸಂಖ್ಯೆ ಕಡಿಮೆ ಆಗಿರುವುದು ಮತ್ತು ಇಂಗ್ಲಿಷ್ ವ್ಯಾಮೋಹ ಇದಕ್ಕೆ ಕಾರಣ. ಇಂಗ್ಲಿಷ್ನಲ್ಲಿ ಓದಿದರೆ, ಮಾತನಾಡಿದರೆ ಭವಿಷ್ಯವಿದೆ ಎಂದು ಪೋಷಕರು ಭಾವಿಸುತ್ತಾರೆ. ಕೇಂದ್ರೀಯ, ನವೋದಯ ಶಾಲೆಗಳಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ ಬಿಇಡಿ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರು ಸೇರಿದಂತೆ ಎಲ್ಲ ರೀತಿಯ ಅನುಕೂಲಗಳಿವೆ. ಆದರೆ ನಮ್ಮಲ್ಲಿ ಆ ಮಟ್ಟದ ಸೌಲಭ್ಯಗಳು ಇಲ್ಲ.
*ಯಾಕೆ ಇಲ್ಲೂ ಆ ರೀತಿಯ ಸೌಲಭ್ಯಗಳನ್ನು ಕಲ್ಪಿಸಲು ಆಗುವುದಿಲ್ಲ?
ರಾಜ್ಯದಲ್ಲಿ 39 ಕೇಂದ್ರೀಯ, 27 ನವೋದಯ ಶಾಲೆಗಳಿವೆ. ಅವು ಸೀಮಿತ ಸಂಖ್ಯೆಯಲ್ಲಿ ಇರುವುದರಿಂದ ಉತ್ತಮ ಸೌಲಭ್ಯಗಳಿವೆ. ಜೊತೆಗೆ ಕೇಂದ್ರ ಸರ್ಕಾರದ ಶಾಲೆಗಳಾಗಿರುವುದರಿಂದ ಹೆಚ್ಚಿನ ಅನುದಾನವೂ ದೊರೆಯುತ್ತದೆ. ನಮ್ಮಲ್ಲಿ ಹಿರಿಯ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆವರೆಗೆ49,672 ಸರ್ಕಾರಿ ಹಾಗೂ 6,500ಕ್ಕೂ ಅಧಿಕ ಅನುದಾನಿತ ಶಾಲೆಗಳಿವೆ.
ದೊಡ್ಡ ಸಂಖ್ಯೆಯಲ್ಲಿ ಶಾಲೆಗಳು ಇರುವುದರಿಂದ ಒಮ್ಮೆಗೇ ಕೇಂದ್ರೀಯ ಶಾಲೆಗಳ ಮಟ್ಟಕ್ಕೆ ಇಲ್ಲಿ ಸೌಲಭ್ಯಗಳನ್ನು ಕಲ್ಪಿಸುವುದು ಕಷ್ಟ. ಕೇಂದ್ರೀಯ, ನವೋದಯ ಶಾಲೆಗಳು ಕೇವಲ ನಗರ ಪ್ರದೇಶಗಳಲ್ಲಿವೆ. ಅಲ್ಲಿ ವ್ಯಾಸಂಗ ಮಾಡುವ ಮಕ್ಕಳೇ ಬೇರೆ. ನಮ್ಮ ಶಾಲೆಗಳು ಗ್ರಾಮೀಣ ಪ್ರದೇಶದಲ್ಲಿದ್ದು, ಕೆಳ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಸೇರಿದ ಮಕ್ಕಳು ಹೆಚ್ಚಾಗಿ ಸರ್ಕಾರಿ ಶಾಲೆಗಳಿಗೆ ಬರುತ್ತಾರೆ.
ಕ್ರೈಸ್ತ ಮಿಷನರಿಗಳು ಸ್ವಾತಂತ್ರ್ಯಕ್ಕೂ ಮೊದಲೇ ಆಂಗ್ಲಮಾಧ್ಯಮ ಶಾಲೆಗಳನ್ನು ಶುರು ಮಾಡಿವೆ. ಆಗಿನಿಂದಲೂ ಇಂಗ್ಲಿಷ್ ಮಾಧ್ಯಮ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಿವೆ ಎಂಬ ಭಾವನೆ ಜನರಲ್ಲಿ ಬೇರೂರಿದೆ.
*ಅನ್ನ ನೀಡುವ ಭಾಷೆಯನ್ನಾಗಿ ಕನ್ನಡವನ್ನು ಬೆಳೆಸಲು ಸಾಧ್ಯವಿಲ್ಲವೆ?
ಕನ್ನಡ ಮಾಧ್ಯಮದಲ್ಲಿ ಕಲಿಯಲು ಹೈಸ್ಕೂಲ್ವರೆಗೆ ಅವಕಾಶವಿದೆ. ಉನ್ನತ ಶಿಕ್ಷಣ, ತಾಂತ್ರಿಕ, ವೈದ್ಯಕೀಯ ಶಿಕ್ಷಣವನ್ನು ಕನ್ನಡದಲ್ಲಿ ಕಲಿಯುವ ವ್ಯವಸ್ಥೆ ಇಲ್ಲ. ಹೀಗಾಗಿ ಇಂಗ್ಲಿಷ್ ವ್ಯಾಮೋಹ ಸಹಜವಾಗಿಯೇ ಹೆಚ್ಚಾಗುತ್ತಿದೆ. ಉನ್ನತ ಶಿಕ್ಷಣವನ್ನೂ ಕನ್ನಡದಲ್ಲಿ ಕಲಿಸುವ ವ್ಯವಸ್ಥೆ ಮಾಡಿದರೆ ಉತ್ತಮ ಭವಿಷ್ಯ ಇದೆ. ಜಪಾನ್, ಜರ್ಮನಿ, ಸ್ಪೇನ್ನಲ್ಲಿ ಮಾತೃಭಾಷೆಯಲ್ಲೇ ಉನ್ನತ ಶಿಕ್ಷಣ ವ್ಯಾಸಂಗಕ್ಕೆ ಅವಕಾಶ ಇದೆ. ಉನ್ನತ ಶಿಕ್ಷಣ ಇಲಾಖೆ ಈ ಬಗ್ಗೆ ಗಮನಹರಿಸಬೇಕು.
*ಯಾವ ಭಾಷಾ ಮಾಧ್ಯಮದಲ್ಲಿ ಕಲಿಸಬೇಕು ಎಂಬುದು ಪೋಷಕರಿಗೆ ಬಿಟ್ಟ ವಿಚಾರ ಎಂದು ಸುಪ್ರೀಂಕೋರ್ಟ್ ಹೇಳಿದೆ. ಇಷ್ಟಾದರೂ ಸರ್ಕಾರ ಯಾಕೆ ಮೂಗು ತೂರಿಸುತ್ತಿದೆ?
ಭಾಷೆ ಆಧಾರದ ಮೇಲೆ ಕರ್ನಾಟಕ, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳ ರಚನೆಯಾಗಿದೆ. ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿ. ಇದರಿಂದ ಭಾಷೆ, ಸಾಹಿತ್ಯಕ್ಕೆ ಉತ್ತೇಜನ ನೀಡಿದಂತೆ ಆಗುತ್ತದೆ.
*ಕನ್ನಡ ಭಾಷೆ ಬೆಳವಣಿಗೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದೆಯಲ್ಲವೆ? ಶಿಕ್ಷಣ ಇಲಾಖೆಗೆ ಯಾಕೆ ಆ ಉಸಾಬರಿ?
ಯಾವ ರೀತಿಯ ಪರಿಸರದಲ್ಲಿ ಮಕ್ಕಳು ಬೆಳೆಯುತ್ತಾರೊ, ಆ ಪರಿಸರಕ್ಕೆ ಹೊಂದಿಕೊಳ್ಳುತ್ತಾರೆ. ಶಾಲಾ ಹಂತದಲ್ಲೇ ನಮ್ಮ ಭಾಷೆ, ಸಂಸ್ಕೃತಿ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸದಿದ್ದರೆ ಮುಂದಿನ ದಿನಗಳಲ್ಲಿ ಭಾಷೆ, ಸಂಸ್ಕೃತಿ ಉಳಿಯುವುದಿಲ್ಲ. ಆಂಗ್ಲಭಾಷೆಯ ವ್ಯಾಮೋಹಕ್ಕೆ ಒಳಗಾದವರು ಸ್ಥಳೀಯ ಭಾಷೆಯಿಂದ ವಿಮುಖರಾಗುತ್ತಾರೆ. ಆದ್ದರಿಂದ ಶಾಲೆಯ ಪರಿಸರದಲ್ಲೇ ಮಕ್ಕಳಿಗೆ ಭಾಷೆಯ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು.
*ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭಿಸಲು ಎಷ್ಟು ಅರ್ಜಿಗಳು ಬಂದಿವೆ?
5ನೇ ತರಗತಿ ನಂತರ ಇಂಗ್ಲಿಷ್ ಮಾಧ್ಯಮ ಆರಂಭಿಸಲು ಬರುವ ಪ್ರಸ್ತಾವನೆಗಳಿಗೆ ಅನುಮೋದನೆ ನೀಡುತ್ತೇವೆ. ಸರ್ಕಾರ ನಿಗದಿಪಡಿಸಿರುವ ಮೂಲಸೌಕರ್ಯ ಹೊಂದಿದ್ದರೆ ಹಿರಿಯ ಪ್ರಾಥಮಿಕ ಶಾಲೆಗಳು ಇಂಗ್ಲಿಷ್ ಮಾಧ್ಯಮ ಆರಂಭಿಸಬಹುದು.
*ಈಗ ಅನುಮತಿ ಕೊಡುತ್ತಿದ್ದೀರಾ?
1ರಿಂದ 5ನೇ ತರಗತಿವರೆಗೆ ಆಂಗ್ಲಮಾಧ್ಯಮಕ್ಕೆ ಸದ್ಯ ಅವಕಾಶ ನೀಡುತ್ತಿಲ್ಲ. ಕನ್ನಡ ಮಾಧ್ಯಮ ಶಾಲೆಗೆ ಅನುಮತಿ ಪಡೆದು, ಇಂಗ್ಲಿಷ್ ಮಾಧ್ಯಮದಲ್ಲಿ ಬೋಧಿಸುತ್ತಿರುವ ಸುಮಾರು ಎರಡು ಸಾವಿರ ಶಾಲೆಗಳಿವೆ. ಅವುಗಳ ಮಾನ್ಯತೆ ರದ್ದುಪಡಿಸಲು ಕಾನೂನಿನ ತೊಡಕು ಇದೆ. ಅಕ್ರಮ–ಸಕ್ರಮ ಮಾದರಿಯಲ್ಲಿ ಅವುಗಳನ್ನು ಕಾನೂನುಬದ್ಧಗೊಳಿಸುವ ಬಗ್ಗೆ ಸಚಿವಾಲಯ ಮಟ್ಟದಲ್ಲಿ ತೀರ್ಮಾನ ಆಗಬೇಕು.
*ಬೇರೆ ಯಾವ ರಾಜ್ಯದಲ್ಲಾದರೂ ಭಾಷಾ ನೀತಿ ಇದೆಯೇ?
ತಮಿಳುನಾಡು, ಮಹಾರಾಷ್ಟ್ರದಲ್ಲಿ ತಮಿಳು, ಮರಾಠಿಯನ್ನು ಒಂದು ಭಾಷೆಯಾಗಿ ಕಲಿಸಲಾಗುತ್ತದೆ. ಯಾವ ಮಾಧ್ಯಮದಲ್ಲಿ ಬೇಕಾದರೂ ಕಲಿಯಬಹುದು. ಆಂಧ್ರಪ್ರದೇಶದಲ್ಲಿ ಮುಕ್ತ ಅವಕಾಶ ಇದೆ. ಕೇರಳದಲ್ಲಿ ಈಗ ಮಲಯಾಳಂ ಕಡ್ಡಾಯ ಮಾಡಲು ನಿರ್ಧರಿಸಲಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.