ಸೋಮವಾರ, ಜನವರಿ 20, 2020
22 °C
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್

‘ಎಂಡೋ ಸಂತ್ರಸ್ತರ ಮಾಸಾಶನ ಹೆಚ್ಚಳ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುವರ್ಣಸೌಧ (ಬೆಳಗಾವಿ): ಎಂಡೋಸಲ್ಫಾನ್‌ನಿಂದ ಹಾನಿಗೆ ಒಳಗಾಗಿರುವ ಮಕ್ಕಳ ಪೋಷಕರಿಗೆ ನೀಡುತ್ತಿರುವ ಮಾಸಾಶನವನ್ನು ಹೆಚ್ಚಳ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದರು.ವಿಧಾನ ಪರಿಷತ್‌ನಲ್ಲಿ ಸೋಮವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಗಣೇಶ್ ಕಾರ್ಣಿಕ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಎಂಡೋಸಲ್ಫಾನ್‌ನಿಂದ ಹಾನಿಗೆ ಒಳಗಾಗಿರುವ ಮಕ್ಕಳ ಪೋಷಕರಿಗೆ ಮಾಸಿಕ ₨ 1,000 ಮಾಸಾಶನ ನೀಡಲಾಗುತ್ತಿದೆ. ಅದನ್ನು ಹೆಚ್ಚಿಸಿದರೆ ಆ ಪೋಷಕರು ಜೀವನೋಪಾಯಕ್ಕಾಗಿ ಬೇರೆ ಕೆಲಸವನ್ನು ನೆಚ್ಚಿಕೊಳ್ಳುವುದು ತಪ್ಪುತ್ತದೆ. ಆಗ ಅಂತಹ ಮಕ್ಕಳ ಆರೈಕೆಗೆ ಅನುಕೂಲ ಆಗುತ್ತದೆ’ ಎಂದರು.ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಎಂಡೋ­ಸಲ್ಫಾನ್‌ ಸಂತ್ರಸ್ತ ಜನರು ಇದ್ದಾರೆ. ಅವರಿಗಾಗಿ ವಿಶೇಷ ಪ್ಯಾಕೇಜ್‌ ಸಿದ್ಧ­ವಾಗುತ್ತಿದೆ. ಎಂಡೋಸಲ್ಫಾನ್ ಸಂತ್ರಸ್ತ ಮಕ್ಕಳ ಪೋಷಕರ ಮಾಸಾಶನ ಹೆಚ್ಚಿಸುವ ನಿರ್ಧಾರವನ್ನೂ ಪ್ರಕಟಿಸಲಾ­ಗು­­ವುದು ಎಂದು ತಿಳಿಸಿದರು.ಸಂತ್ರಸ್ತರ ಆರೋಗ್ಯ ಸುಧಾರಣೆಗಾಗಿ ಎರಡು ಪಾಲನಾ ಕೇಂದ್ರಗಳನ್ನು ತೆರೆಯಲಾಗಿದೆ. ಆ ಕೇಂದ್ರಗಳಿಗೆ ತಲಾ ₨ 25 ಲಕ್ಷ ಅನುದಾನ ನೀಡಲಾಗುತ್ತಿತ್ತು. ಈ ಮೊತ್ತವನ್ನು ತಲಾ ₨ 50 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಪಾಲನಾ ಕೇಂದ್ರಗಳಲ್ಲಿ ಫಿಸಿಯೋಥೆರಪಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.ಹೆಚ್ಚಿನ ಚಿಕಿತ್ಸೆ ನೀಡುವುದಕ್ಕಾಗಿ ಅತ್ಯಾಧುನಿಕ ಸೌಲಭ್ಯಗಳಿರುವ ಆಸ್ಪತ್ರೆಯೊಂದರ ಜೊತೆ ಒಪ್ಪಂದ ಮಾಡಿಕೊಳ್ಳಲಾಗುವುದು. ದೈಹಿಕವಾಗಿ ಹೆಚ್ಚು ಸಮಸ್ಯೆ ಇರುವವರ ಮನೆಗಳಿಗೆ ಹೋಗಿ ಚಿಕಿತ್ಸೆ ನೀಡುವುದಕ್ಕಾಗಿ ಎರಡು ಸಂಚಾರಿ ಚಿಕಿತ್ಸಾಲಯಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ವಿವರ ನೀಡಿದರು.ಎಂಡೋಸಲ್ಫಾನ್‌ ಸಂತ್ರಸ್ತರ ಪುನರ್ವಸತಿಗಾಗಿ ಈಗಾಗಲೇ ₨ 5 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ವಿಶೇಷ ಪ್ಯಾಕೇಜ್‌ ಸಿದ್ಧವಾಗುತ್ತಿದ್ದು, ಶೀಘ್ರದಲ್ಲಿ ಆದೇಶ ಪ್ರಕಟವಾಗಲಿದೆ ಎಂದರು.ಮೂರು ಜಿಲ್ಲೆಗಳಲ್ಲಿ ಇರುವ ಖಾಸಗಿ ವೈದ್ಯಕೀಯ ಕಾಲೇಜುಗಳ ಜೊತೆ ಸರ್ಕಾರ ಮಾತುಕತೆ ನಡೆಸಬೇಕು. ಎಂಡೋಸಲ್ಫಾನ್ ಸಂತ್ರಸ್ತರ ಪರಿಹಾರ ಮತ್ತು ಪುನರ್ವಸತಿ ಕಾರ್ಯದಲ್ಲಿ ಭಾಗಿಯಾಗುವಂತೆ ಮನವಿ ಮಾಡಬೇಕು ಎಂದು ಕಾರ್ಣಿಕ್‌ ಸಲಹೆ ಮಾಡಿದರು. ಶೀಘ್ರದಲ್ಲಿ ಈ ಸಂಬಂಧ ಸಭೆ ನಡೆಸುವುದಾಗಿ ಸಚಿವರು ಭರವಸೆ ನೀಡಿದರು.

ಪ್ರತಿಕ್ರಿಯಿಸಿ (+)