ಸೋಮವಾರ, ಜನವರಿ 27, 2020
17 °C

‘ಎಚ್‌ಐವಿ ಸೋಂಕಿತರಿಗೆ ಭಯ ಬೇಡ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಎಚ್ಐವಿ ಸೋಂಕಿ­ತರು, ಏಡ್ಸ್ ಬಾಧಿತರು ಕೆಲ ವರ್ಷ­ಗಳ ಹಿಂದಿನಂತೆ ಈಗ ಭಯ ಪಡುವ ಅವಶ್ಯಕತೆ ಇಲ್ಲ. ಈಗ ಮಾರ್ಗದರ್ಶನ ವ್ಯವಸ್ಥೆ ಇದೆ. ಸಾಮಾನ್ಯ ವ್ಯಕ್ತಿಗಳಂತೆ ಭರವಸೆಯ ಜೀವನ ನಡೆಸಲು ಸಾಧ್ಯವಿದೆ. ಆದರೆ,  ಇಂಥ ಸೋಂಕಿಗೆ ಬಲಿಯಾಗದಂತೆ ಜನತೆಯೇ ಸ್ವಯಂ ಪ್ರೇರಣೆಯಿಂದ ಅಂತರ ಕಾಪಾಡಿ­ಕೊಳ್ಳಬೇಕು ಎಂದು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಸಿ.ಎನ್ ಕುಲಕರ್ಣಿ ಹೇಳಿದರು.ಅಸುರಕ್ಷಿತ ಲೈಂಗಿಕತೆ, ಶಸ್ತ್ರಚಿಕಿತ್ಸೆ, ಅಪಘಾತ ಸಂದರ್ಭದಲ್ಲಿ ಎಚ್ಚರಿಕೆ ವಹಿಸದೇ ಎಚ್ಐವಿ ಸೋಂಕುಯುಕ್ತ ರಕ್ತ ಪಡೆಯುವುದರಿಂದ, ತಾಯಿ­ಯಿಂದ ಮಗುವಿಗೆ, ಹಾಗೂ ಚುಚ್ಚು­ಮದ್ದಿನಿಂದ ಎಚ್‌ಐವಿ ಸೋಂಕು ಹರಡುತ್ತಿದೆ ಎಂದು ವೈದ್ಯಕೀಯ ತಜ್ಞರು ಗುರುತಿಸಿದ್ದಾರೆ. ಈ ಬಗ್ಗೆ ಜನತೆ ಎಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದರು.ಸುರಕ್ಷಿತ ಲೈಂಗಿಕತೆ, ವಿವಾಹ­ಪೂರ್ವ ಲೈಂಗಿಕ ಸಂಪರ್ಕ ನಿಷೇಧ ಕ್ರಮ ಪಾಲನೆ, ದಂಪತಿ ನಡುವೆ ಪರಸ್ಪರ ಹೊಂದಾಣಿಕೆ ಬದುಕು, ಕಾಂಡೋಮ್ ಬಳಕೆ, ರಕ್ತ ಭಂಡಾರದಿಂದ ರಕ್ತ ಪಡೆಯುವಾಗ ಎಚ್ಚರಿಕೆ ವಹಿಸುವ ಕ್ರಮಗಳ ಪಾಲನೆ ಅವಶ್ಯ ಎಂದು ಹೇಳಿದರು.ಈ ಹಿಂದೆ ರಕ್ತ ಭಂಡಾರದಿಂದ ಪಡೆದ ರಕ್ತದಿಂದಲೇ ಶೇ 12ರಷ್ಟು ಜನ ಎಚ್ಐವಿ ಸೋಂಕಿಗೆ ಜನ ಒಳಗಾಗುತ್ತಿದ್ದರು. ಈಗ ಕಟ್ಟುನಿಟ್ಟಿನ ಕ್ರಮಗಳಿಂದ ಅದು ಶೇ 2ರಷ್ಟಕ್ಕೆ ತಗ್ಗಿದೆ ಎಂದು ತಿಳಿಸಿದರು. ಮಲ್ಲಯ್ಯ ಮಠಪತಿ ಸ್ವಾಗತಿಸಿದರು. ಪವಾಡೆಪ್ಪ ನಿರೂಪಿಸಿದರು.

ಪ್ರತಿಕ್ರಿಯಿಸಿ (+)