‘ಏಕರೂಪ ಶಿಕ್ಷಣ ನೀತಿ ಜಾರಿಯಾಗಲಿ’

7

‘ಏಕರೂಪ ಶಿಕ್ಷಣ ನೀತಿ ಜಾರಿಯಾಗಲಿ’

Published:
Updated:

ಉಡುಪಿ: ’ತಾರತಮ್ಯ ರಹಿತ ಸಮಾನ ಸಮಾಜ ನಿರ್ಮಾಣ ಮಾಡಲು ಸಮಾನ ಮತ್ತು ಏಕರೂಪ ಶಿಕ್ಷಣ ನೀತಿಯನ್ನು ಜಾರಿಗೊಳಿಸಬೇಕು’ ಎಂದು ಜಯ ಕರ್ನಾಟಕ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಬಿ.ಎನ್‌. ಜಗದೀಶ್‌ ಹೇಳಿದರು.ಏಕರೂಪ ಸಮಾನ ಶಿಕ್ಷಣ ನೀತಿ ಮತ್ತು ಸಮಾನ ಶಾಲೆಗಳ ಆರಂಭಕ್ಕೆ ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ಕೈಗೊಂಡಿರುವ ಜಾಗೃತಿ ಜನಾಂದೋಲನ ಯಾತ್ರೆ ಉಡುಪಿಗೆ ಆಗಮಿಸಿದ ನಂತರ ಕರಾವಳಿ ಜಂಕ್ಷನ್‌ನಲ್ಲಿ ನಡೆದ ಸಾರ್ವಜ­ನಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಬಡವರ ಮಕ್ಕಳಿಗೊಂದು ಶಾಲೆ– ಪಠ್ಯಕ್ರಮ ಮತ್ತು ಶ್ರೀಮಂತರ ಮಕ್ಕಳಿಗೆ ಇನ್ನೊಂದು ರೀತಿಯ ಪಠ್ಯಕ್ರಮ– ಶಾಲೆ ಇರುವುದು ಅಸಮಾನತೆಗೆ ಕಾರಣವಾಗುತ್ತಿದೆ. ಮುಂದುವರೆದ ರಾಷ್ಟ್ರಗಳಲ್ಲಿ  ಸಮಾನ ಶಿಕ್ಷಣ ಇದೆ. ಏಕರೂಪ ಶಿಕ್ಷಣದಿಂದಲೇ ಅಲ್ಲಿನ ಸಮಾಜ ಅಭಿವೃದ್ಧಿ ಆಗಿರುವುದನ್ನು ಗಮನಿಸಬಹುದು. ಆದ್ದರಿಂದ ಇಲ್ಲಿಯೂ ಸಮಾನ ಶಿಕ್ಷಣ ನೀತಿಯನ್ನು ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದರು.ರಾಜ್ಯದಾದ್ಯಂತ ನಾವು ಈ ಜಾಗೃತಿ ಯಾತ್ರೆ ನಡೆಸುತ್ತಿದ್ದೇವೆ. ಆದರೆ ಯಾವೊಬ್ಬ ಜನಪ್ರತಿನಿ­ಧಿಯೂ ಪ್ರತಿಕ್ರಿಯೆ ನೀಡಿಲ್ಲ. ಹೊಸ ಸರ್ಕಾರದ ಮೇಲೆ ಜನರು ಭರವಸೆ ಇಟ್ಟಿದ್ದಾರೆ. ಸರ್ಕಾರ ಜನರ ಭಾವನೆಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.ಈ ನಾಡಿನ ಋಣ ತೀರಿಸುವ ಸಲುವಾಗಿ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಅವರ ಸಲಹೆ­ಯಂತೆ ಯಾತ್ರೆ ಕೈಗೊಳ್ಳಲಾಗುತ್ತಿದೆ. ಇದರಲ್ಲಿ ಸ್ವಾರ್ಥ ಅಥವಾ ರಾಜಕೀಯ ಉದ್ದೇಶ ಇಲ್ಲ. ಅನ್ಯಾಯದ ವಿರುದ್ಧ ಸಂಘಟನೆ ಹೋರಾಟ ಮಾಡಿದೆ. ಭ್ರಷ್ಟಾಚಾರದ ವಿರುದ್ಧ ದನಿ ಎತ್­ತಿದ್ದೇವೆ. ಆರೋಗ್ಯ ಮತ್ತು ಪರಿಸರದ ಕಾಳಜಿಯ ಕಾರ್ಯಕ್ರಮವನ್ನೂ ಸಂಘಟನೆ ಹಮ್ಮಿಕೊಳ್ಳುತ್ತಿದೆ ಎಂದರು.ಯಾತ್ರೆಗೆ ನಗರದಲ್ಲಿ ಅದ್ಧೂರಿ ಸ್ವಾಗತ ಕೋರ­ಲಾ­ಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಸಂಘಟನೆ ಕಾರ್ಯಾ­ಧ್ಯಕ್ಷ ಮುಟ್ಲುಪಾಡಿ ಸತೀಶ್‌ ಶೆಟ್ಟಿ, ಉಪಾಧ್ಯಕ್ಷ  ಸುದೀಪ್‌ ಕುಮಾರ್‌, ರಾಮ­ಚಂದ್ರಯ್ಯ ಪ್ರಧಾನ ಕಾರ್ಯದರ್ಶಿ ದೀಪಕ್‌, ಉಡುಪಿ ಘಟಕದ ಅಧ್ಯಕ್ಷ ಜನನಿ ದಿವಾಕರ ಶೆಟ್ಟಿ, ಅಜಿತ್‌ ಪ್ರಸಾದ್‌ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry