‘ಒಒಡಿ ದುರುಪಯೋಗವಾದರೆ ಕ್ರಮ’

7

‘ಒಒಡಿ ದುರುಪಯೋಗವಾದರೆ ಕ್ರಮ’

Published:
Updated:

ಮಡಿಕೇರಿ: ‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವ ಸರ್ಕಾರಿ ಅಧಿಕಾರಿಗಳಿಗೆ ನೀಡಲಾಗುವ ಹಾಜರಾತಿ ದೃಢೀಕರಣ ಪತ್ರ (ಒಒಡಿ) ದುರುಪಯೋಗವಾದರೆ, ಇದರ ನೀಡಿಕೆಯ ಬಗ್ಗೆ ಮರುಚಿಂತನೆ ಮಾಡಲಾಗುವುದು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಎಚ್ಚರಿಕೆ ನೀಡಿದರು.ನಗರದ ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ ಕಾಲೇಜಿನ ಆವರಣದಲ್ಲಿ ನಿರ್ಮಿಸಲಾಗಿದ್ದ ಭಾರತೀಸುತ ವೇದಿಕೆಯಲ್ಲಿ ಗುರುವಾರ ನಡೆದ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಮಡಿಕೇರಿ ಹಾಗೂ ವಿಜಾಪುರದಲ್ಲಿ ನಡೆದ ಸಮ್ಮೇಳನದಲ್ಲಿ ಒಒಡಿ ಸಮಸ್ಯೆ ಉಂಟಾಗಿದ್ದು, ಉದ್ಘಾಟನೆಗೂ ಮುನ್ನವೇ ಈ ಪತ್ರ ಪಡೆಯಲು ಅನ್ಯಮಾರ್ಗಗಳನ್ನು ಅನುಸರಿಸುವುದು ಸೂಕ್ತವಲ್ಲ ಎಂದರು.ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಸಾಹಿತ್ಯಾಸಕ್ತ ಸರ್ಕಾರಿ ನೌಕರರಿಗೆ ಮೂರು ದಿನಗಳ ಕಾಲ ಈ ಸೌಲಭ್ಯ ಒದಗಿಸಲು ಸರ್ಕಾರದ ಮಟ್ಟದಲ್ಲಿ ಕಸಾಪ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಒಒಡಿ ನೀಡಲಾಗುತ್ತಿತ್ತು ಎಂದು ಹೇಳಿದರು.ಆದರೆ, ಇತ್ತೀಚಿನ ದಿನಗಳಲ್ಲಿ ಈ ಸೌಲಭ್ಯ ದುರುಪಯೋಗವಾಗುತ್ತಿರುವ ಬಗ್ಗೆ ದೂರು ಕೇಳಿ ಬರುತ್ತಿರುವುದರಿಂದ ಇದರ ಬಗ್ಗೆ ಕ್ರಮಕ್ಕೆ ಮುಂದಾಗುವ ಮೂಲಕ ಹಾವೇರಿಯಲ್ಲಿ ನಡೆಯಲಿರುವ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇಲ್ಲಿ ಕಂಡು ಬಂದ ಗೊಂದಲ ನಿವಾರಣೆ ಮಾಡಲಾಗುವುದು ಎಂದರು.ಒಒಡಿ: ಸರದಿ ಸಾಲು

ಕೊನೆಯ ದಿನ ಬೆಳಿಗ್ಗೆಯಿಂದಲೇ ಹಾಜರಾತಿ ದೃಢೀಕರಣ ಪತ್ರ (ಒಒಡಿ) ಪಡೆಯಲು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ವಿವಿಧ ಇಲಾಖೆಯ ಸರ್ಕಾರಿ ನೌಕರರು ಸರದಿ ಸಾಲಿನಲ್ಲಿ ನಿಂತಿದ್ದರು.ಒಒಡಿ ನೀಡಲು ಮುಂದಾಗುತ್ತಿ ದಂತೆಯೇ ವಿವಿಧ ಕಾರ್ಯಕ್ರಮಗಳಲ್ಲಿ ಆಸೀನರಾಗಿದ್ದವರು ಕೂಡ ಸರದಿಯಲ್ಲಿ ನಿಂತ ಕಾರಣ ವೇದಿಕೆಯಲ್ಲಿ ಜನರ ಸಂಖ್ಯೆ ಕ್ಷೀಣಿಸಿತ್ತು. ಸಮ್ಮೇಳನಕ್ಕೆ ಆಗಮಿಸುವ ಮೊದಲೇ ಆಯಾ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರಗಳಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದವರಿಗೆ ಒಒಡಿಯನ್ನು ಪರಿಷತ್ತಿನ ಮೂಲಕವೇ ನೀಡಲು ಅಂದಾಜಿಲಾಗಿತ್ತು.ಆದರೆ, ಸಮ್ಮೇಳನದಲ್ಲಿ ಭಾಗವಹಿಸಲು ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ ಸರ್ಕಾರಿ ನೌಕರರು ಒಒಡಿಯನ್ನು ನಮ್ಮ ಬಳಿಯಲ್ಲಿಯೇ ನೀಡುವಂತೆ ಸಮ್ಮೇಳನದ ಆರಂಭದಿಂದಲೇ ಪ್ರತಿಭಟನೆ ನಡೆಸಿದ್ದರಿಂದ ಹೆಸರು ನೋಂದಾಯಿಸಿಕೊಳ್ಳದ ಬಹುತೇಕ ಮಂದಿಗೂ ಒಒಡಿ ಪತ್ರವನ್ನು ನೀಡಲಾಯಿತು.ಸಂಗೀತದೊಂದಿಗೆ ಭೋಜನ

ಸಮ್ಮೇಳನದ ಕೊನೆಯ ದಿನವಾದ ಗುರುವಾರ ಊಟದ ಪೆಂಡಾಲ್‌ನಲ್ಲಿ ಇಂಪಾದ ಸಂಗೀತ ಆಲಿಸುವುದರೊಂದಿಗೆ ಭೂರಿ ಭೋಜನದ ವ್ಯವಸ್ಥೆ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.ನಗರದ ಜಿಲ್ಲಾ ಪೊಲೀಸ್‌ ಕವಾಯತು ಮೈದಾನದಲ್ಲಿ ನಿರ್ಮಿಸಲಾಗಿದ್ದ ಊಟದ ಹಾಲ್‌ನಲ್ಲಿ ಜಿಲ್ಲೆಯ ಗೋಣಿಕೊಪ್ಪಲಿನ ವಿಜಯಲಕ್ಷ್ಮೀ ಪದವಿ ಪೂರ್ವಕಾಲೇಜು ವತಿಯಿಂದ ಉಪನ್ಯಾಸಕ ಚಂದ್ರಶೇಖರ್‌ ನೇತೃತ್ವದಲ್ಲಿ ಭಾವಗೀತೆ, ಜನಪದ ಗೀತೆಗಳನ್ನು ಇಂಪಾಗಿ ಹಾಡುವ ಮೂಲಕ ಊಟದ ಜೊತೆಗೆ ಸಂಗೀತದ ಔತಣವನ್ನು ಉಣಬಡಿಸಿದರು.ಚೇತರಿಕೆ ಕಂಡ ಖರೀದಿ:

ಪುಸ್ತಕ ಮಳಿಗೆಗಳು ಹಾಗೂ ಬಟ್ಟೆ, ಗೃಹಪಯೋಗಿ ವಸ್ತಗಳು, ಅಲಂಕಾರಿಕ ಹಾಗೂ ಆಟಿಕೆ ಸಾಮಗ್ರಿಗಳ ಖರೀದಿಯ ಭರಾಟೆ ತುಸು ಬಿರುಸುಗೊಂಡಿದ್ದ ದೃಶ್ಯ ಕಂಡು ಬಂತು. ರಸ್ತೆ ಬದಿಯಲ್ಲಿ ಮಾರಾಟ ಮಾಡಲಾಗುತ್ತಿದ್ದ ವಿವಿಧ ವಸ್ತುಗಳ ಖರೀದಿಯು ಕೂಡ ಹೆಚ್ಚಾಗಿತ್ತು.ಸಮ್ಮೇಳನದ ಕೊನೆಯ ದಿನವಾದರಿಂದ ಹೆಚ್ಚಿನ ಜನರು ಪುಸ್ತಕಕೊಳ್ಳಲು ಆಗಮಿಸುತ್ತಿದ್ದು, ಕಳೆದೆರಡು ದಿನಗಳಿಗಿಂತ ಸಮಾರೋಪ ಸಮಾರಂಭದ ದಿನವೇ ಅಧಿಕ ಪುಸ್ತಕಗಳು ಮಾರಾಟವಾಗುತ್ತಿವೆ ಎಂದು ಪುಸ್ತಕ ಮಳಿಗೆಯ ವ್ಯಾಪಾರಿ ಕಾರ್ತಿಕ್‌ ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry