‘ಒತ್ತಡ ತರುವ ಪರೀಕ್ಷಾ ಪದ್ಧತಿ’

7

‘ಒತ್ತಡ ತರುವ ಪರೀಕ್ಷಾ ಪದ್ಧತಿ’

Published:
Updated:

ಯಾದಗಿರಿ: ಇಂದಿನ ಪರೀಕ್ಷಾ ಪದ್ಧತಿಯು ವಿದ್ಯಾರ್ಥಿಗಳ ಮೇಲೆ ಅನವಶ್ಯಕ ಮಾನಸಿಕ ಒತ್ತಡ ಹಾಗೂ ನಿರಂತರ ಪರೀಕ್ಷೆಯ ಭೂತವನ್ನು ಹೇರಿದೆ. ನಿತ್ಯ ಶಿಕ್ಷಕರು, ವಿದ್ಯಾರ್ಥಿಗಳ ದಿನಚರಿಯನ್ನು ಸಿದ್ಧಪಡಿಸುವದರಲ್ಲಿ ಮುಳುಗಿದ್ದಾರೆ. ವಿದ್ಯಾರ್ಥಿಗಳು ಕಲಿಕೆ­ಯಿಂದ ಹಾಗೂ -ಸಾಂಸ್ಕೃತಿಕ ಚಟುವಟಿಕೆಗಳಿಂದ ವಂಚಿತರಾಗುತ್ತಿ­ದ್ದಾರೆ. ಗುಣಮಟ್ಟದ ಶಿಕ್ಷಣವನ್ನು ತುರ್ತು ನಿಗಾ ಘಟಕಕ್ಕೆ ಸೇರಿಸಲಾಗಿದೆ ಎಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ರಾಜ್ಯ ಸಂಘಟನಕಾರ ಡಾ. ಚಂದ್ರಗಿರೀಶ ವಿಷಾದ ವ್ಯಕ್ತಪಡಿಸಿದರು.ಇಲ್ಲಿನ ಜವಾಹರ್ ಶಿಕ್ಷಣ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ಮಂಗಳ­ವಾರ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ವತಿಯಿಂದ ಹಮ್ಮಿಕೊಳ್ಳ­ಲಾಗಿದ್ದ ಶಿಕ್ಷಣ ಉಳಿಸಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಅಮೆರಿಕದ ಪ್ರಯೋಗಗಳಿಂದ ಉತ್ತೇ­­ಜಿತ­ರಾಗಿ -ಕಲಿಕಾ ಪ್ರಕ್ರಿಯೆ ಹಾಗೂ ಪರೀಕ್ಷಾ ವಿಧಾನಗಳಲ್ಲಿ ಹಲ­ವಾರು ಸುಧಾರಣೆಗಳನ್ನು ಹೇರಲಾ­ಗುತ್ತಿದೆ. ಇವು ನಮ್ಮ ಶಿಕ್ಷಣ ವ್ಯವ­ಸ್ಥೆಯನ್ನು ಅಭಿವೃದ್ಧಿಗೊಳಿಸಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು. ಕಾಲದ ಪರೀಕ್ಷೆಯಲ್ಲಿ ಸಾಬೀತಾದ ಬೋಧನಾ ವಿಧಾನ ಕ್ರಮಗಳು, ಪಠ್ಯಕ್ರಮ, ವಿಷಯಗಳು ಹಾಗೂ ಪರೀಕ್ಷಾ ಪದ್ಧತಿಗಳನ್ನು ಆಮೂಲಾಗ್ರ­ವಾಗಿ ತಿರುಚಲಾಗಿದೆ. ವಿಶ್ವಬ್ಯಾಂಕ್ ಪ್ರಾಯೋಜಿತ ನಲಿ-ಕಲಿ ಪದ್ಧತಿಯು ಕ್ರಮಬದ್ಧವಾಗಿ ಭಾಷೆಯನ್ನು ಕಲಿಯುವ ಹಾಗೂ ಜ್ಞಾನಾರ್ಜನೆ ಪ್ರಕ್ರಿಯೆಯನ್ನೇ ಕುಂಠಿತಗೊಳಿಸುತ್ತದೆ ಎಂದು ಹೇಳಿದರು.

ನಮ್ಮನ್ನು ಆಳಿದವರಿಗೆ ಶಿಕ್ಷಣವು ಮೂಲ­ಭೂತ ಹಕ್ಕು ಎಂದು ಘೋಷಿ­ಸಲು ಸುದೀರ್ಘ 62 ವರ್ಷಗಳೇ ಬೇಕಾ­ಯಿತು. ಆದಾಗ್ಯೂ, ನಿಜವಾ­ಗಿಯೂ ಶಿಕ್ಷಣವು ಹಕ್ಕಾಗಿದೆಯೇ? ಇಂದು ಯಾರಾದರೂ ಶಿಕ್ಷಣದಿಂದ ವಂಚಿತ­ರಾದರೆ ಅವರಿಗೆ ನ್ಯಾಯ ದೊರಕುತ್ತ­ದೆಯೇ ಎಂಬುದು ಯಕ್ಷ ಪ್ರಶ್ನೆಯಾ­ಗಿಯೇ ಉಳಿದಿದೆ ಎಂದರು.ಒಂದೆಡೆ ಸರ್ಕಾರವು ಹಲವಾರು ಶಾಲೆಗಳನ್ನು ಮುಚ್ಚುತ್ತಿದೆ. ಮತ್ತೊಂ­ದೆಡೆ, ಆರ್ಥಿಕವಾಗಿ, ಸಾಮಾಜಿಕವಾಗಿ ದುರ್ಬಲ ವರ್ಗದವರಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶೇ 25ರಷ್ಟು ಸೀಟುಗಳನ್ನು ಕಾಯ್ದಿರಿಸುವ ಆದೇಶ ಹೊರಡಿಸಿದೆ. ಇದರ ಮೂಲಕ ಸರ್ಕಾರವು ಶಿಕ್ಷಣ­ಕ್ಕಾಗಿ ತನ್ನ ಆರ್ಥಿಕ ಜವಾಬ್ದಾರಿಯಿಂದ ನುಣಿಚಿಕೊಳ್ಳುವ ಸುಲಭ ಮಾರ್ಗ­ವನ್ನು ಕಂಡುಕೊಂಡಿದೆ ಎಂದು ಆರೋಪಿಸಿದರು.ಜಿಲ್ಲಾ ಸಂಚಾಲಕರಾದ ವೀರಭದ್ರಪ್ಪ ಮಾತನಾಡಿ, ಸೆ. 28 ಹಾಗೂ 29 ರಂದು ಬೆಂಗಳೂರಿನ ಗಾಂಧಿ ಭವನ­ದಲ್ಲಿ ರಾಜ್ಯ ಮಟ್ಟದ ಶಿಕ್ಷಣ ಉಳಿಸಿ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.ಕಾಲೇಜಿನ ಪ್ರಾಂಶುಪಾಲ ಸಯ್ಯದ್ ಶಂಶಲಾಂ ಪೀರಾ, ಎಐಡಿಎಸ್ಒ ಜಿಲ್ಲಾ ಸಮಿತಿ ಅಧ್ಯಕ್ಷೆ ಸಿ.ಕೆ. ಗೌರಮ್ಮ, ಸದಸ್ಯ­ರಾದ ಬಸಮ್ಮ, ರತ್ನ, ಪುಷ್ಪ, ಆಕಾಶ, ಸುನೀತಾ, ಶಿವರಾಜ, ಆನಂದ, ವಿಜಯ­ಕುಮಾರ್, ರಾಮು, ಕಾಲೇಜಿನ ವಿದ್ಯಾ­ರ್ಥಿ­ಗಳು, ಶಿಕ್ಷಕರು, ಸಿಬ್ಬಂದಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry