‘ಒತ್ತುವರಿ ಸಮಸ್ಯೆ ನಿವಾರಣೆಗೆ ಚರ್ಚೆ’

7

‘ಒತ್ತುವರಿ ಸಮಸ್ಯೆ ನಿವಾರಣೆಗೆ ಚರ್ಚೆ’

Published:
Updated:

ನರಸಿಂಹರಾಜಪುರ: ಮಲೆನಾಡು ಭಾಗದ ಒತ್ತುವರಿಸಿ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಗಳೊಂದಿಗೆ ಚರ್ಚಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಟಿ.ಡಿ.­ರಾಜೇಗೌಡ ತಿಳಿಸಿದರು. ಪಟ್ಟಣಕ್ಕೆ ಭಾನುವಾರ ಕಾರ್ಯ­ಕ್ರಮ­­­ವೊಂದರಲ್ಲಿ ಭಾಗವಹಿಸಿಲು ಭಾನುವಾರ ಆಗಮಿಸಿದ ಸಂದರ್ಭ­ದಲ್ಲಿ ‘ಪ್ರಜಾವಾಣಿ’ ಯೊಂದಿಗೆ ಅವರು ಮಾತನಾಡಿದರು.ಒತ್ತುವರಿ ಸಮಸ್ಯೆ ಬಗೆಹರಿಸಲು ಅರಣ್ಯ, ಕಂದಾಯ ಹಾಗೂ ಗೋಮಾಳ ಜಮೀನಿನ ಬಗ್ಗೆ ಸಮೀಕ್ಷೆಗೆ ಸರ್ಕಾರ ಆದೇಶಿಸಿದೆ. ಈಗಾಗಲೇ ಫಾರಂ ನಂ 50, 53ರಲ್ಲಿ ಸಾಗುವಳಿ ಚೀಟಿ ಕೊಟ್ಟಿರುವ ಜಮೀನು ಕಂದಾಯ ಇಲಾಖೆಗೆ ಸೇರಿದ ಜಮೀ­ನೆಂದು ಕಂದಾಯ ಇಲಾಖೆ ದಾಖಲೆ ನೀಡುತ್ತದೆ. ಅರಣ್ಯಕ್ಕೆ ಸೇರಿದ್ದೆಂದು ಅರಣ್ಯ ಇಲಾಖೆ ವಾದಿಸುತ್ತಿದೆ. ಹಾಗಾಗಿ ಇದರ ಸಮೀಕ್ಷೆ ಮೊದಲು ಆಗಬೇಕಾಗಿದೆ.

ಇದಾದ ನಂತರ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದರು. 5ರಿಂದ 10 ಎಕರೆ ಒತ್ತುವರಿ ದಾರರಿಗೆ ಅನುಕೂಲ ಮಾಡಿ ಕೊಡ ಬೇಕೆಂಬ ಇಚ್ಛೆ ಸರ್ಕಾರಕ್ಕಿದ್ದು ಇದು ಇನ್ನೂ ಚರ್ಚೆಯ ಹಂತದಲ್ಲಿದೆ. ಒತ್ತುವರಿ ತೆರವು­ಗೊಳಿಸು­ವುದ­ರಿಂದಾ­ಗುವ ಅನುಕೂಲ ಮತ್ತು ಅನಾನು­ಕೂಲದ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದರು. ಒತ್ತುವರಿ ಬಿಡಿಸುವ ಕಾನೂನು ಜಾರಿಗೆ ತಂದ ಕೀರ್ತಿ ಬಿಜೆಪಿ ಮತ್ತು ಜೆಡಿಎಸ್ ಸಮಿಶ್ರ ಸರ್ಕಾರಕ್ಕೆ ಸೇರುತ್ತದೆ ಎಂದು ಆರೋಪಿಸಿದರು. ಸದಾನಂದಗೌಡರು ಮುಖ್ಯಮಂತ್ರಿ­ಯಾದಾಗ ಒತ್ತುವರಿ ಜಾಗದಲ್ಲಿರುವ ಚರ್ಚ್, ಮಸೀದಿ, ಸ್ಮಶಾನವನ್ನು ತೆರವು­ಗೊಳಿಸಲಾಗುತ್ತದೆ ಎಂದು ನ್ಯಾಯಾ­ಲಯಕ್ಕೆ ಅಫಡಿವೆಟ್‌ ಸಲ್ಲಿಸಿ­ದ್ದಾರೆ ಎಂದು ದೂರಿದರು. ಒತ್ತುವರಿ ತೆರವುಗೊಳಿಸುವ ವಿಷಯ ಬಂದಾಗ ನ್ಯಾಯಾಲಯದತ್ತ ಬೊಟ್ಟು ಮಾಡುವ ಕೆಲವು ಚುನಾಯಿತ ಜನ­ಪ್ರತಿನಿಧಿ­ಗಳು ನ್ಯಾಯಾಲಯಕ್ಕೆ ವಾಸ್ತವ ಸಮಸ್ಯೆ ಮನವರಿಕೆ ಮಾಡುವ ಪ್ರಯತ್ನವನ್ನೆ ಮಾಡಲಿಲ್ಲ ಎಂದರು.  ಅಡಿಕೆ ಬೆಳೆಗೆ ತಗುಲಿರುವ ಕೊಳೆ ರೋಗದ ಪರಿಹಾರಕ್ಕೆ  ರೂ.65 ಕೋಟಿ ಅನುದಾನವನ್ನು ಮುಖ್ಯ­ಮಂತ್ರಿಗಳು ಬಿಡುಗಡೆ ಮಾಡಿದ್ದಾರೆ. 1ಹೆಕ್ಟೇರ್ ಗೆ ರೂ.12 ಸಾವಿರದಂತೆ ಪರಿಹಾರ ನೀಡಲಾಗುವುದು. ಹಳದಿ ಎಲೆ ರೋಗ ಪೀಡಿತ  ಅಡಿಕೆ ತೋಟಗಳಿಗೆ ಪರಿಹಾರ ನೀಡಲು ಪ್ರಯತ್ನ ಮುಂದುವರೆದಿದೆ. ಸಂಸದ ಕೆ.ಜಯ­ಪ್ರಕಾಶ್ ಹೆಗ್ಡೆ ಅವರ ಮನ­ವಿಯ ಮೇರೆಗೆ ಪಕ್ಷದ ವರಿಷ್ಟರಾದ ಸೋನಿಯಾಗಾಂಧಿ ಮುಖ್ಯಮಂತ್ರಿಗೆ ಪತ್ರ ಬರೆದು ಪೂರಕ ಕ್ರಮ ಕೈಗೊ­ಳ್ಳಲು ಸೂಚಿಸಿದ್ದಾರೆ. ಮುಖ್ಯ­ಮಂತ್ರಿಗಳು ವಿದೇಶಿ ಪ್ರವಾಸ ಮುಗಿಸಿ ಬಂದ ಕೂಡಲೇ ನಿಯೋಗ ತೆರಳಿ ಈ ಬಗ್ಗೆ ಚರ್ಚಿಸಲಾಗುವುದು ಎಂದರು.ಪಟ್ಟಣದಲ್ಲಿ ಪಡಿತರ ಆಹಾರ ಧಾನ್ಯಗಳನ್ನು ಅಕ್ರಮ ಸಾಗಾಣಿಕೆ ಮಾಡುವ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಿ ತಪ್ಪಿತಸ್ಥರ  ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್‌ ಹಾಗೂ ಪೊಲೀಸ್‌ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು. ಭದ್ರಾವತಿ, ಎನ್.ಆರ್‌.ಪುರ ಹಾಗೂ ಶೃಂಗೇರಿಗೆ ರೈಲು ಮಾರ್ಗ ಕಲ್ಪಿಸುವ ಬಗ್ಗೆ ಸಚಿವರೊಂದಿಗೆ ಚರ್ಚಿಸ­ಲಾಗಿದೆ.

ಕಡೂರು, ಚಿಕ್ಕಮ­ಗಳೂರು, ವಸ್ತಾರೆ, ಬಾಳೆ­ಹೊ­ನ್ನೂರು, ಜಯಪುರ ಹಾಗೂ ಶೃಂಗೇರಿಗೆ ರಾಷ್ಟ್ರೀಯ ಹೆದ್ದಾರಿ ಹಾಗೂ ತರೀಕೆರೆ, ಎನ್.ಆರ್.ಪುರ ಹಾಗೂ ಮಂಗಳೂ­ರಿಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪಡಿಸಲು ಕೇಂದ್ರ ಸಚಿವ ಅಸ್ಕರ್ ಫರ್ನಾಂಡಿಸ್ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry