‘ಕಥೆ ಇಲ್ಲದ ಕಥೆ’ಯ ವಿಲಕ್ಷಣ ಚಿತ್ರ

7

‘ಕಥೆ ಇಲ್ಲದ ಕಥೆ’ಯ ವಿಲಕ್ಷಣ ಚಿತ್ರ

Published:
Updated:

‘ಅತ್ತಿ ಹಣ್ಣು ಮತ್ತು ಕಣಜ’ ಕನ್ನಡ ಸಿನಿಮಾ ಮೇಲುನೋಟಕ್ಕೆ ಒಂದು ವಿಲಕ್ಷಣ ಚಿತ್ರವಾಗಿ ಆಸಕ್ತಿ ಹುಟ್ಟಿಸುತ್ತದೆ. ಅಸಂಗತ ಧಾಟಿಯ ನಾಟಕದಂತೆ, ಕಾವ್ಯದಂತೆ ಆಸ್ವಾದಿಸುತ್ತಾ ಹೋದಹಾಗೆ ಅದು ಪ್ರಜ್ಞಾಪೂರ್ವಕವಾಗಿ ಜೈವಿಕ, ಬೌದ್ಧಿಕ, ತಾತ್ವಿಕ ಮತ್ತು ಆನುಭಾವಿಕ ಚಿಂತನೆಯನ್ನು ಸಿನಿಮಾ ಭಾಷೆಯಲ್ಲಿ ಅನುಭವವಾಗಿಸಲು ಹವಣಿಸುವ ಗಂಭೀರ ಚಿತ್ರ ಎಂಬುದು ಗೋಚರಿಸತೊಡಗುತ್ತದೆ ಹಾಗೂ ವಾಸ್ತವದ ಶುದ್ಧ ಬಣ್ಣ-ಬೆಳಕುಗಳಲ್ಲಿ, ದೃಶ್ಯ ಮತ್ತು ಶಬ್ದ-ಮೌನಗಳ ಹೆಣಿಗೆಯಲ್ಲಿ, ಸಂಗೀತ-ಲಯಗಳ ವಿನ್ಯಾಸಗಳಲ್ಲಿ ಮನುಷ್ಯ ಸಂಬಂಧಗಳನ್ನು ಅವರದೇ ಆದ ಪರಿಸರದಲ್ಲಿ ನಿರುಕಿಸುವ ವಿಶಿಷ್ಟ ಚಿತ್ರವಾಗಿ ಸೆಳೆಯುತ್ತದೆ.ಸಿನಿಮೀಯ ರೂಪಕಗಳಲ್ಲಿ ಅಥವಾ ಪ್ರತಿಮೆಗಳಲ್ಲಿ ಹಿನ್ನೆಲೆಯನ್ನು ಮುನ್ನೆಲೆಗೆ ಪೂರಕವಾಗುವಂತೆ ಸಂಯೋಜಿಸಿರುವುದು ಇದು ‘ವಿಲಕ್ಷಣ ಚಿತ್ರ’ ಎನಿಸಲು ಮತ್ತೊಂದು ಕಾರಣ. ಅಷ್ಟೇ ಅಲ್ಲದೆ ತಮ್ಮ ಸ್ಥಾನಗಳನ್ನು ಅವು ಅದಲು ಬದಲು ಮಾಡಿಕೊಂಡು ದೃಶ್ಯ ಸಾಂಗತ್ಯವನ್ನು ಸಾಧಿಸುತ್ತವೆ. ಒಂದರೊಳಗೊಂದು ಲೀನವಾಗಿ ನಿಜವಾದ ಅರ್ಥದಲ್ಲಿ ಸಮಗ್ರ ಅನುಭವದ ಚಿತ್ರವಾಗುತ್ತದೆ. ಇಂಥ ಐಕ್ಯತೆ ಚಿತ್ರದ ಶೀರ್ಷಿಕೆಯಲ್ಲೇ ಹುದುಗಿದೆ.ಸಿನಿಮಾ ಎಂಬುದು ಛಾಯಾಚಿತ್ರಗ್ರಹಣ ಮತ್ತು ಸಂಕಲನ ಕಲೆಯಲ್ಲಿ ಮೈದಾಳುವ ಸಮಗ್ರ ಭಾಷೆಯ ಕೃತಿಯಾದ್ದರಿಂದ ಅದರ ಯಾವುದೇ  ಒಂದು ಅಂಗಕ್ಕೆ ಒತ್ತು ಬಿದ್ದರೂ ‘ವಿಲಕ್ಷಣತೆ’ ಕಾಣಿಸಿಕೊಂಡು ‘ಕಥೆ ಇಲ್ಲದ ಕಥೆ’ ಸೃಷ್ಟಿಯಾಗುತ್ತದೆ. ಛಾಯಾಚಿತ್ರಗ್ರಹಣಕ್ಕೆ ಹೆಚ್ಚು ಒತ್ತು ಬಿದ್ದಿರುವ ಈ ಸಿನಿಮಾ ಹಾಗೆ ಒಂದು ‘ಕಥೆ ಇಲ್ಲದ ಕಥೆ’. (ಆದರೆ ಎಲ್ಲ ನಿರೂಪಣೆಯೂ ಕಥನಕ್ರಮವೇ ಆದ್ದರಿಂದ ಕಥೆ ಇಲ್ಲದ ಚಿತ್ರ ಎಂಬುದು ಇಲ್ಲ).ನಸುಕಿನ ಮಬ್ಬು ಬೆಳಕಿನಲ್ಲಿ ಇಬ್ಬರು ವ್ಯಕ್ತಿಗಳೊಂದಿಗೆ ಚಲಿಸುವ ಕಾರು ಪ್ರೇಕ್ಷಕರನ್ನು ಚಿತ್ರದ ನಾಟಕದೊಳಕ್ಕೆ ಕರೆದೊಯ್ಯುತ್ತದೆ. ಪ್ರಾರಂಭದಲ್ಲಿ ಚಲಿಸುವ ಕಾರು ಮುನ್ನೆಲೆಯಾಗಿದ್ದು, ಕರಗುತ್ತಿರುವ ಕತ್ತಲೆ, ಮುಂಜಾವಿನ ಪರಿಸರ, ಆವರಣದ ಸೂಕ್ಷ್ಮ ಶಬ್ದಗಳು ಹಿನ್ನೆಲೆಯಾಗುತ್ತವೆ. ಕಾಲ ಕಳೆದಂತೆ ಹಿನ್ನೆಲೆ ಮುನ್ನೆಲೆಗಳು ಅದಲು ಬದಲಾಗುತ್ತವೆ. ಇದನ್ನು ಗಮನಿಸಲಾಗದ ಪ್ರೇಕ್ಷಕರಿಗೆ ಸಹನೆಯ ಪರೀಕ್ಷೆ ಮೊದಲಾಗುತ್ತದೆ. ಇದಕ್ಕೆ ಸಂವೇದನೆಯ ಕೊರತೆಯಷ್ಟೇ ಕಾರಣವಲ್ಲ, ಸಾಂಪ್ರದಾಯಿಕ ದೃಷ್ಟಿಯ ವೀಕ್ಷಣೆಯ ರೂಢಿಬಲವೂ ಕಾರಣವಾಗಿದೆ. ಕಾವ್ಯದಂತೆ, ಪೂರ್ವಸಿದ್ಧತೆ ಮತ್ತು ವಿನಯವನ್ನು ಬೇಡುವ ಈ ಸಾವಧಾನ ಗತಿ, ಚಿತ್ರಕಲಾವಿದರೂ ಆಗಿರುವ ನಿರ್ದೇಶಕ ಪ್ರಕಾಶ್ ಬಾಬು, ಗಂಭೀರ ಆಸಕ್ತಿಯ ಸಿನಿಮಾ ರಸಿಕರ ಸಹೃದಯತೆಯ ಮೇಲಿಟ್ಟ ನಂಬಿಕೆ-ವಿಶ್ವಾಸಗಳಿಂದ ಸಾಧ್ಯವಾಗಿದೆ.ಚಲಿಸುವ ಕಾರಿನೊಳಗಿನಿಂದ ದೃಶ್ಯೀಕರಿಸುವ ವಿಧಾನದಲ್ಲಿ ಮಾತ್ರವಲ್ಲ, ಮಂದಗತಿಯ ಕಥನ ಶೈಲಿಯಲ್ಲಿಯೂ ಅವರು ಅಬ್ಬಾಸ್ ಕಿರೋಸ್ತಮಿಯನ್ನು (ಪ್ರಸಿದ್ಧ ಇರಾನಿ ನಿರ್ದೇಶಕ) ನೆನಪಿಸುತ್ತಾರೆ.  ಚಿತ್ರಕಲಾವಿದರೊಬ್ಬರು ಬಿಂಬಕಲಾವಿದರಾಗಿ ಚಿತ್ರಿಸುವಾಗ ನೆರಳು-ಬೆಳಕು- ಬಣ್ಣ ಮತ್ತು ಕೋನ ವಿನ್ಯಾಸಗಳಲ್ಲಿ ಸಂಯೋಜಿತವಾಗುವ ಚಿತ್ರಿಕೆಗಳು ಯಾವುದೇ ವಿಕಾರಗಳಿಲ್ಲದೆ ಅನ್ಯಾದೃಶವೆನಿಸುವಂತೆ ಕಾಣಲು ಸಾಧ್ಯ. ಛಾಯಾಚಿತ್ರಗ್ರಾಹಕರ ಪರಿಣತಿ ಮತ್ತು ಕೌಶಲವೂ ಇದರೊಂದಿಗೆ ಜತೆಗೂಡಿ, ನಿರ್ದೇಶಕರು ಚಲನಚಿತ್ರದ ದೃಶ್ಯ ಸಾಧ್ಯತೆಗಳಿಗೆ  ಕೊಡುವ ವಿಶೇಷ ಒತ್ತು ಉದ್ದಕ್ಕೂ ಕಾಣಸಿಗುತ್ತದೆ. ಆದರೆ ಅದೇ ಮಾತನ್ನು ಒಳಾಂಗಣ ಬೆಳಕಿನ ಸಂಯೋಜನೆ ಕುರಿತಂತೆ ಹೇಳುವ ಹಾಗಿಲ್ಲ ಎಂಬುದೂ ನಿಜ.ಹಾಗೆ ನೋಡಿದರೆ, ಚಿತ್ರದ ಅತ್ಯಂತ ದುರ್ಬಲ ಅಂಶ ನಾಟಕೀಕರಣದ ಭಾಗ. ಪ್ರಧಾನ ಪಾತ್ರಧಾರಿಗಳ ನಟನಾ ನಡವಳಿಕೆ ಸಾಕಷ್ಟು ಸಂಯಮ ಮತ್ತು ಶಿಸ್ತಿಗೆ ಒಳಪಟ್ಟಿದ್ದರೂ ಗುಣಾತ್ಮಕವಾಗಿ ಅದು ದೃಶ್ಯಸಂಯೋಜನೆಯ ಪ್ರೌಢಿಮೆಗೆ ಸರಿಸಾಟಿಯಾಗಿಲ್ಲ. ವೀಡಿಯೊ ಪರಿಕರ, ಸಿಗರೇಟು, ಟೀಗಳನ್ನು ಬಳಸುವ ಪಾತ್ರಗಳ ಸಹನೆ, ನಿರೀಕ್ಷೆ, ಮತ್ತು ಮೌನದ ಹೊಯ್ದಾಟಗಳ ಮೂಲಕ ಬೋಧೆಯಾಗುವ ಅವರ ಗ್ರಾಮಯಾನದ ಉದ್ದೇಶವನ್ನು ಮಾತಿನ ಮೂಲಕವೂ ಪ್ರಕಟಗೊಳಿಸಲಾಗಿದೆ. ‘ಎಲ್ಲದಕ್ಕೂ ಅದರದೇ ಆದ ಲಯವಿದೆ, ಅದನ್ನು ಜಾನಪದ ವಾದ್ಯಗಾರನ ಸಂಗೀತದಲ್ಲಿ ಗುರುತಿಸಿ ಚಿತ್ರೀಕರಿಸುವುದು ಪ್ರಧಾನ ಪಾತ್ರದ  ಉದ್ದೇಶ’ ಎಂಬರ್ಥದ ಮಾತುಗಳು ದೃಶ್ಯಕ್ಕೆ ಪೂರಕವಾಗಿ ಬರದೆ ಹೊರಗಿನಿಂದ ಮಾಡಿದ ಹೇಳಿಕೆಯಾಗಿ ಬರುತ್ತದೆ.ಆವರಣದ ಶಬ್ದ ವಿನ್ಯಾಸದಲ್ಲಿ ಸೇರಿರುವ ಹಕ್ಕಿ, ಕೀಟಗಳು, ಜನ, ವಾದ್ಯ, ಹೊಲಿಗೆ ಯಂತ್ರ, ಗ್ಯಾಸ್ ಲೈಟ್ ಶಬ್ದಗಳು ಲಯ ವಿನ್ಯಾಸವನ್ನು ನಿರ್ಮಿಸುತ್ತವೆ. ನೀರು, ಟೀ, ಸಿಗರೇಟು, ಮದ್ಯಸೇವನೆಯ ವ್ಯಕ್ತಿಗಳ ನಡವಳಿಕೆಯ ವಿನ್ಯಾಸ ಆ ಪರಿಸರದಲ್ಲಿ ಬದುಕುವ ಜನರ ಏಕತಾನತೆಯ ಬದುಕಿನ ಲಯ-ವಿನ್ಯಾಸವನ್ನು ರಚಿಸುತ್ತವೆ. ಏಕಾಂಗಿಯಾಗಿ ಎಂಬಂತೆ ಆಟವಾಡುವ, ಬೆಳೆದ ಹುಡುಗಿ, ಸರಿಹೊತ್ತಿನಲ್ಲಿ ಹೊಲಿಗೆ ಯಂತ್ರ ಬಳಸಿ ಹೊಲಿಗೆಯಲ್ಲಿ ನಿರತಳಾದ ಗೃಹಿಣಿಯ ಮುಖೇನ ಸೂಚಿತವಾಗುವ ಏಕತಾನತೆಯ ಬದುಕಿನ ಲಯ-ವಿನ್ಯಾಸ ಮತ್ತೊಂದು ಬಗೆಯದು. ಹೀಗೆ ಎಲ್ಲದರಲ್ಲಿಯೂ ಕಾಣಸಿಗುವ ಧ್ವನಿ-ದೃಶ್ಯಗಳ ಲಯ- ವಿನ್ಯಾಸ ಚಿತ್ರದ ವಸ್ತುವನ್ನು ಮಾತಿನ ಹಂಗಿಲ್ಲದೆಯೂ ಬೆಳಗಿಸುತ್ತವೆ.ಪ್ರಜ್ಞಾಪೂರ್ವಕವಾಗಿ ಗ್ರಾಮಜೀವನವನ್ನು ಆರಿಸಿಕೊಂಡು ನಲುಗಿದ ಬದುಕನ್ನು ಬದುಕುವ ‘ವಿಲಕ್ಷಣ’ ಕವಿಯೊಬ್ಬ ಪ್ರಧಾನ ಪಾತ್ರದೊಂದಿಗಿನ ಸಂವಾದದಲ್ಲಿ ಕವನವನ್ನು ವಾಚಿಸುವ ದೃಶ್ಯ ಚಿತ್ರದಲ್ಲಿದೆ. ಚಿತ್ರದ ಕೊನೆಗೆ ಆತ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ರಂಗಕೃತಿಯ ನಾಟಕೀಯತೆ ಮತ್ತು ಕಾವ್ಯದ ಆಪ್ತತೆ ಎರಡನ್ನೂ ‘ಅತ್ತಿಹಣ್ಣು ಮತ್ತು ಕಣಜ’ ಬೆಸೆಯುತ್ತದೆ:ಗ್ರಾಮಸ್ಥರು, ಟೀ ಅಂಗಡಿ, ಚಿತ್ರ ನಿರ್ಮಾಪಕಿ, ಆಕೆಯ ಸಹಾಯಕ, ಅವರಿಗೂ ಗ್ರಾಮಕ್ಕೂ ಕೊಂಡಿಯಾದ ಹಳ್ಳಿಯ ಶಿಕ್ಷಕ, ಹೊಲಿಗೆಯ ಕಾಯಕದ ಹೆಂಡತಿ ಮಗಳೊಂದಿಗಿನ ಅವನ ಬಾಂಧವ್ಯ, ಚಿತ್ರೀಕರಣದಲ್ಲಿ ಪಾಲ್ಗೊಳ್ಳಬೇಕಿದ್ದು, ನಿಗದಿತ ಸಮಯಕ್ಕೆ ಸಿಗದೆ, ಹೊಟ್ಟಪಾಡಿಗಾಗಿ ಯಾವುದೋ ಹಳ್ಳಿಯಲ್ಲಿ ಸಂಗೀತ ಕಾಯಕ ನಡೆಸಿರುವ ಅಗೋಚರ ವಾದ್ಯಗಾರ, ಅವನ ಬರುವಿಕೆಗಾಗಿ ಕಾಯುತ್ತಿರುವ ಸಂಶೋಧಕಿ-ಚಿತ್ರ ನಿರ್ಮಾಪಕಿ ಮತ್ತು ಆಕೆಯ ಸಹಾಯಕ– ಹೀಗೆ ಎಲ್ಲರೂ ಯಾವುದೋ ಅಸಂಗತ, ದುರಂತ ನಾಟಕದ ಪಾತ್ರಧಾರಿಗಳಾಗಳಂತೆ ಒಂದೇ ರೀತಿಯ ಸಂತೋಷರಹಿತ ಗಾಂಭೀರ್ಯ-ವಿಷಣ್ಣತೆಗಳ ಮನಸ್ಥಿತಿಯಲ್ಲಿ ಬದುಕುತ್ತಿರುವುದು ಇಡೀ ಚಿತ್ರದ ಪರಿಸರವನ್ನು ಆವರಿಸಿದೆ.ಹಳ್ಳಿಯ ಕವಿಯ ಸಂವೇದನೆ ಮತ್ತು ಬದುಕಿನ ನಡುವಿನ ವೈದೃಶ್ಯ, ಶಿಕ್ಷಕನ ಮಗಳ ದೈಹಿಕ ವಯಸ್ಸು ಮತ್ತು ಅವಳಾಡುವ ಆಟದ ಭಾವನಾ ವಯಸ್ಸಿನ ನಡುವಿನ ವೈದೃಶ್ಯ, ನಿದ್ರಿಸುತ್ತಿರುವ ನಿರ್ಮಾಪಕಿಯೊಡನೆ ಕೂಡಬಯಸಿ ಬೆತ್ತಲೆಯಾಗುವ ಸಹಾಯಕನ ದೈಹಿಕ ಹಸಿವು ಮತ್ತು ಯಾವುದೇ ನೈತಿಕ ತೊಳಲಾಟವಿಲ್ಲದೆಯೂ ಅದನ್ನು ನಿರಾಕರಿಸುವ ನಿರ್ಮಾಪಕಿಯ ಬೌದ್ಧಿಕ ತಪ್ತತೆಯ ನಡುವಿನ ವೈದೃಶ್ಯಗಳಲ್ಲಿಯೂ ಈ ಅಸಂಗತತೆಯನ್ನು ಗುರುತಿಸಬಹುದು. ಮನುಷ್ಯರ ಆಪ್ತ ಸಂಬಂಧಗಳಲ್ಲಿನ ತುಮುಲ, ಸಂಘರ್ಷ, ಹಸಿವು, ಅನ್ವೇಷಣೆಗಳನ್ನು– ಕನ್ನಡದ ಕಲಾತ್ಮಕ ಚಿತ್ರಗಳಲ್ಲಿಯೂ ಬಹುತೇಕ ನಾಪತ್ತೆಯಾಗಿರುವ–  ಬೌದ್ಧಿಕ ಪ್ರೌಢಿಮೆಯೊಂದಿಗೆ ಚಿತ್ರಿಸಿರುವುದು ‘ಅತ್ತಿಹಣ್ಣು ಮತ್ತು ಕಣಜ’ದ ಹೆಚ್ಚುಗಾರಿಕೆ.ಕನ್ನಡಿಗರ ಬದುಕಿಗೆ ನಿರ್ದಿಷ್ಟವಾದ ಸಾಂಸ್ಕೃತಿಕ ಸಂದರ್ಭದಲ್ಲಿ ‘ಅತ್ತಿ ಹಣ್ಣು ಮತ್ತು ಕಣಜ’ ಎಂಬ ಶೀರ್ಷಿಕೆ, ಅತ್ತಿ ಹಣ್ಣಿನ ಸುಂದರ ಕವಚದೊಳಗಿನ ಹುಳುಗಳ ಅಸ್ತಿತ್ವದ ಲೌಕಿಕತೆ, ಭ್ರಮರ-ಕೀಟ ನ್ಯಾಯದಂತೆ, ಮಣ್ಣಿನ ಗೂಡಿನೊಳಗೆ ಆಹಾರಕ್ಕಾಗಿ ಹುಳವನ್ನು ಬಂಧಿಸಿಡುವ ಕಣಜ ಮತ್ತು ಹಾಗೆ ಬಂಧಿಸಿಟ್ಟ ಹುಳ ಮೃತ್ಯುವನ್ನು ತರುವ ಕಣಜದ ನಿರಂತರ ಧ್ಯಾನದಲ್ಲಿ ತಾನೇ ಕಣಜವಾಗುವ ಆಧ್ಯಾತ್ಮಿಕತೆಯನ್ನು ರಚಿಸುತ್ತದೆ. ಈ ಎರಡನ್ನೂ ಬೇರ್ಪಡಿಸಲಾಗದ ತಾತ್ವಿಕತೆಯ ಅರ್ಥವ್ಯಾಪ್ತಿ, ಬೀಗಹಾಕಿದ ಮನೆಯ ಮುಂದೆ ಕೂರುವ ನಿರ್ಮಾಪಕಿ ಮತ್ತು ಅವಳ ಸಹಾಯಕನ ಕಾಯುವಿಕೆ,  ಆಗ ಕೇಳಿ ಬರುವ ಸುಮಧುರ ವಾದ್ಯ ಸಂಗೀತದ ನಾದ ಇವೆರಡರ ಸಂಯೋಗದಲ್ಲಿ ವಿಸ್ತರಿಸುತ್ತದೆ.ಇಂಗ್ಲಿಷ್‌ನ ‘ಫಿಗ್ ಅಂಡ್ ದಿ ವ್ಯಾಸ್ಪ್’, ಅಂಜೂರದ ಹಣ್ಣು ಮತ್ತು ಕಣಜದ ಸಂಬಂಧ ಕುರಿತಂತೆ ಮತ್ತೊಂದು ಇಂಗಿತ ನೀಡುತ್ತದೆ: ಹೊರಗಿನಿಂದ ನೋಡಿದರೆ ಹಣ್ಣಿನಂತೆ ಕಾಣುವ ಅಂಜೂರ, ವಾಸ್ತವವಾಗಿ ಕವಚದೊಳಗೆ ಒಟ್ಟಾಗಿರುವ ಹೂಗಳು. ತಮ್ಮೊಳಗೆ ಬೀಜವನ್ನೂ ಹುದುಗಿಸಿಕೊಂಡ ಈ ಹೂಗಳೊಳಗೆ ಹೊರಗಿನಿಂದ ಸಣ್ಣ ರಂಧ್ರದ ಮೂಲಕ ಪ್ರವೇಶಿಸುವ ಹೆಣ್ಣು ಕಣಜ, ಹಾಗೆ ಪ್ರವೇಶಿಸುವಾಗ ತನ್ನ ರೆಕ್ಕೆಗಳನ್ನು ಕಳೆದುಕೊಂಡು ಹೂಗಳೊಳಗೆ ಮೊಟ್ಟೆಗಳನ್ನು ಇಡುತ್ತದೆ. ಅಲ್ಲೇ ಮೊಟ್ಟೆಯೊಡೆದು ಹೊರಬರುವ ಗಂಡು-ಹೆಣ್ಣು ಕಣಜಗಳು ಪರಸ್ಪರ ಕೂಡಿದಮೇಲೆ ಗಂಡು ಕಣಜಗಳು ಅಲ್ಲೇ ಸಾಯುತ್ತವೆ.ಗರ್ಭ ಧರಿಸಿದ ಹೆಣ್ಣು ಕಣಜಗಳು ಹೂಗಳ ಪರಾಗಗಳನ್ನು ಹೊತ್ತು ಹೊರಬಂದು ಮೊಟ್ಟೆಗಳನ್ನು ಇಡಲು ಬೇರೆ ಅಂಜೂರಗಳನ್ನು ಹುಡುಕಿಕೊಂಡು ಹೋಗುತ್ತವೆ. ಸತ್ತ ಗಂಡು ಕಣಜಗಳು ಅಂಜೂರದ ಹಣ್ಣಿನ ಭಾಗವಾಗಿ ಹಣ್ಣಿನಲ್ಲೇ ಉಳಿಯುತ್ತವೆ. ಅಂಜೂರ ಮತ್ತು ಕಣಜದ ಜೀವನ ಹಾಗೂ ಸಂತಾನಾಭಿವೃದ್ಧಿಯ ಈ ಪರಸ್ಪರತೆ, ಚಿತ್ರದ ಅರ್ಥವ್ಯಾಪ್ತಿಯನ್ನು ಏಕ ಕಾಲಕ್ಕೆ ಜೈವಿಕವಾಗಿ, ಲೌಕಿಕವಾಗಿ, ತಾತ್ವಿಕವಾಗಿ ಮತ್ತು ಆನುಭಾವಿಕವಾಗಿ ವಿಸ್ತರಿಸುತ್ತದೆ.ಜೀವದ ಅಸ್ತಿತ್ವ ಮತ್ತು ಮುಂದುವರಿಕೆಗಾಗಿ ಒಂದರೊಳಗೊಂದು ಸೇರುವ ಅತ್ತಿ ಹಣ್ಣು ಮತ್ತು ಕಣಜದ ಪರಸ್ಪರತೆ, ಮನುಷ್ಯರ ಸಾಮಾಜಿಕತೆಯಲ್ಲಿ ಕಾಯಕ ಮತ್ತು ತಾತ್ವಿಕತೆಯ ಪರಸ್ಪರತೆಯನ್ನು ಎತ್ತಿ ಹಿಡಿಯುವ ರೂಪಕವೂ ಆಗಬಹುದು. ಈ ಚಿತ್ರದ ಹೆಗ್ಗಳಿಕೆ, ಇಂಥ ಸಂವಾದವನ್ನು ಚಿತ್ರ ಸಹೃದಯರಲ್ಲಿ ಏರ್ಪಡಿಸುತ್ತದೆ ಎಂಬುದೇ ಆಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry