ಶನಿವಾರ, ಮಾರ್ಚ್ 6, 2021
19 °C

‘ಕದನ ಕೂಪ’ವಾದ ಲೋಕಸಭೆ ಸದನದ ಬಾವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕದನ ಕೂಪ’ವಾದ ಲೋಕಸಭೆ ಸದನದ ಬಾವಿ

ನವದೆಹಲಿ (ಪಿಟಿಐ): ವಿವಾದಾತ್ಮಕ ತೆಲಂಗಾಣ ಮಸೂದೆ ಗುರುವಾರವೂ ಲೋಕಸಭೆಯ ಕಲಾಪವನ್ನು ನುಂಗಿಹಾಕುವ ಜೊತೆಗೆ ಸದನದ ಬಾವಿಯನ್ನು ‘ಕದನದ ಕೂಪ’ವನ್ನಾಗಿ ಮಾರ್ಪಡಿಸಿತು. ಜೊತೆಗೆ ಸದಸ್ಯರು ಕೈ–ಕೈ ಮಿಲಾಯಿಸಿದ, ಮೈಕ್‌ಗಳನ್ನು  ಹಾನಿ ಮಾಡಿದ ಹಾಗೂ ಗಾಜುಗಳನ್ನು ಒಡೆದ ಕರಾಳ ಘಟನೆಗಳಿಗೆ ಸಾಕ್ಷಿಯಾಯಿತು.

ಸೀಮಾಂಧ್ರ ಸದಸ್ಯರ ವ್ಯಾಪಕ ಕೋಲಾಹಲದ ನಡುವೆಯೇ ಕೇಂದ್ರ ಗೃಹ ಸಚಿವ ಸುಶೀಲ್‌ ಕುಮಾರ್‌ ಶಿಂಧೆ ಅವರು ಆಂಧ್ರ ಪ್ರದೇಶ ವಿಭಜನೆ ಮಸೂದೆಯನ್ನು ಮಂಡಿಸಲು ಮುಂದಾದರು.

ಇದನ್ನು ತಡೆಯಲು ಮುಂದಾದ ಕಾಂಗ್ರೆಸ್‌ನ ಉಚ್ಚಾಟಿತ ಸಂಸದ ಎಲ್‌ ರಾಜಗೋಪಾಲ್ ಅವರು ಪೆಪ್ಪರ್‌ ಸ್ಪ್ರೇ (ಮೆಣಸಿನ ದ್ರವಯುಕ್ತ ತೈಲ) ಮಾಡಿದ ಘಟನೆ ನಡೆಯಿತು. ಇದರಿಂದ ಸದನದಲ್ಲಿದ್ದ ಸಾಕಷ್ಟು ಸದಸ್ಯರು ತೀವ್ರ ಬಳಲಿಕೆಯಿಂದ ತತ್ತರಿಸಿದರು. ಕೂಡಲೇ ಸ್ಥಳಕ್ಕೆ ಧಾವಿಸಿದ ನಾಲ್ಕು ಅಂಬ್ಯುಲೆನ್ಸ್‌ಗಳಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಗದ್ದಲವನ್ನು ತಡೆಯಲು ಮುಂದಾಗಿದ್ದ ರಾಜ್‌ ಬಬ್ಬರ್‌, ಅಜರುದ್ದೀನ್‌, ಲಾಲ್‌ ಸಿಂಗ್‌ (ಎಲ್ಲರೂ ಕಾಂಗ್ರೆಸ್‌ ಸದಸ್ಯರು) ಹಾಗೂ ಸುಗತಾ ರಾಯ್ (ಟಿಡಿಪಿ) ಸೇರಿದಂತೆ ಇತರರೊಂದಿಗೆ ಸೀಮಾಂಧ್ರ ಸದಸ್ಯರು ಕೈ–ಕೈ ಮಿಲಾಯಿಸಿದ ಘಟನೆ ನಡೆಯಿತು. ಜೊತೆಗೆ ಸದನದ ಬಾವಿ ‘ಕದನದ ಕೂಪ’ವಾಗಿ ಮಾರ್ಪಟ್ಟಿತು.

ಈ ವೇಳೆ ವೇಣುಗೋಪಾಲ್ ರೆಡ್ಡಿ  (ಟಿಡಿಪಿ) ಅವರು ಪ್ರಧಾನ ಕಾರ್ಯದರ್ಶಿ ಅವರ ಮೇಜಿನ ಮೇಲಿದ್ದ ಮೈಕ್‌ಗೆ ಹಾನಿ ಮಾಡಿದರು. ನಂತರ ಸ್ಪೀಕರ್ ವೇದಿಕೆಯ ಮೇಲಿದ್ದ ಕಾಗದಗಳನ್ನು ಕಸಿದುಕೊಂಡರು. ಈವೇಳೆ ರಾಜಗೋಪಾಲ್‌ ಅವರು ಮೇಜಿನ ಮೇಲಿದ್ದ ಗಾಜನ್ನು ಒಡೆದರಲ್ಲದೇ ಪೆಪ್ಪರ್‌ ಸ್ಪ್ರೇ ಉಪಯೋಗಿಸಿದರು.

18 ಸಂಸದರ ಅಮಾನತು: ವ್ಯಾಪಕ ಕೋಲಾಹಲ ಏರ್ಪಟ್ಟ ನಂತರ  ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರು ಅಧಿವೇಶನದ ಇನ್ನುಳಿದ ಅವಧಿಯ ಮುಗಿಯುವ ತನಕ 18 ಸಂಸದರನ್ನು ಗುರುವಾರ ಅಮಾನತುಗೊಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.