‘ಕನಕದಾಸರ ಕೀರ್ತನೆಗಳಿಗೆ ವೈಚಾರಿಕ ಸತ್ವವಿದೆ’

7

‘ಕನಕದಾಸರ ಕೀರ್ತನೆಗಳಿಗೆ ವೈಚಾರಿಕ ಸತ್ವವಿದೆ’

Published:
Updated:

ಚಾಮರಾಜನಗರ: ‘ಕನಕದಾಸರು ರಚಿಸಿರುವ ಕೀರ್ತನೆಗಳಲ್ಲಿ ಪ್ರಗತಿಪರ, ವೈಚಾರಿಕ ನೆಲಗಟ್ಟಿದೆ. ಆ ಮೂಲಕ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ’ ಎಂದು ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ಹೇಳಿದರು.ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಬೆಂಗಳೂರಿನ  ರಾಷ್ಟ್ರೀಯ ಕನಕದಾಸರ ಅಧ್ಯಯನ ಕೇಂದ್ರ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಈಚೆಗೆ ಹಮ್ಮಿಕೊಂಡಿದ್ದ ‘ಮುತ್ತು ಬಂದಿದೆ ಕೇರಿಗೆ-’ ಕನಕದಾಸರ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕನಕದಾಸರ ಜನಪ್ರಿಯ ಕೀರ್ತನೆಯಾದ ‘ಎಲ್ಲರು ಮಾಡುವುದು  ಹೊಟ್ಟೆಗಾಗಿ; ಗೇಣು ಬಟ್ಟೆಗಾಗಿ...’ ಎಂಬ ಕೀರ್ತನೆಯಲ್ಲಿ ದಾರ್ಶನಿಕ ಸತ್ಯ ಅಡಗಿದೆ. ಪ್ರತಿಯೊಬ್ಬರು ಹೊಟ್ಟೆ, ಬಟ್ಟೆಗಾಗಿ ಕೆಲಸ ಮಾಡುತ್ತಾರೆ. ನಮಗಾಗಿ ಸುಂದರ ಜಗತ್ತು ನಿರ್ಮಿಸಿದ ದೇವರಿಗೆ ಯಾರೊಬ್ಬರು ಶ್ರಮಿಸುವುದಿಲ್ಲ ಎಂದರು.ಭಕ್ತಮಾರ್ಗದಲ್ಲಿ ಸಂತರು ತಮ್ಮ ಕಾಯಕದಲ್ಲೇ ಭಗವಂತವನ್ನು ಕಂಡರು. ಹಾಗಾಗಿ, ಅವರು ದೇಗುಲ, ಮಠ, ಮಂದಿರಗಳಿಗೆ ಹೋಗುತ್ತಿರಲಿಲ್ಲ ಎಂದು ದೇವರದಾಸಿಮಯ್ಯ, ತಮಿಳು ಸಂತ ನೆಚ್ಚಿವಾರ್ ಅವರನ್ನು ಉದಾಹರಿಸಿದರು.ಸಾಹಿತಿ ಲಕ್ಷ್ಮಿಪತಿ ಕೋಲಾರ ಮಾತನಾಡಿ, ಕನಕದಾಸರು ಕಂದಾಚಾರ, ಅರ್ಥವಿಲ್ಲದ ಆಚರಣೆಗಳನ್ನು ತಮ್ಮ ನಿರ್ಭೀತ ವಿಚಾರಧಾರೆಯಿಂದ ಖಂಡಿಸಿದ ರೀತಿಯಲ್ಲಿ ಯಾವ ದಾಸರು ಖಂಡಿಸಿಲ್ಲ ಎಂದು ಹೇಳಿದರು.ರಾಷ್ಟ್ರೀಯ ಕನಕದಾಸ ಅಧ್ಯಯನ ಕೇಂದ್ರದ ಸಮನ್ವಯಾಧಿಕಾರಿ ಕಾ.ತ. ಚಿಕ್ಕಣ್ಣ, ಸಮಾಜದಲ್ಲಿ ಮೇಲು– ಕೀಳು ಎಂಬುದು ಇಲ್ಲದಂತಾಗಿ ಸಮಾನತೆ ಮೂಡಬೇಕು ಎಂಬ ತುಡಿತ ಕನಕದಾಸರ ಕೀರ್ತನೆಗಳಲ್ಲಿದೆ ಎಂದರು.ಗಾಯಕ ಸಿ.ಎಂ. ನರಸಿಂಹಮೂರ್ತಿ ಕನಕದಾಸರ ಕೀರ್ತನೆ ಹಾಡಿದರು. ಪ್ರಾಂಶುಪಾಲ ಪ್ರೊ.ಲಿಂಗಣ್ಣ ಅಧ್ಯಕ್ಷತೆವಹಿಸಿದ್ದರು. ಸಾಹಿತಿ ಹರವೆ ಮಹೇಶ್, ಪ್ರಾಧ್ಯಾಪಕ ಡಾ.ದೇವರಾಜು, ಕವಿತಾ, ರೂಬಿನ್‌ ಸಂಜಯ್, ಭರತ್, ಸೋಮಹಳ್ಳಿ ನಾಗರಾಜ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry