ಸೋಮವಾರ, ಜೂನ್ 14, 2021
26 °C
ಹುಮನಾಬಾದ್‌ ತಾಲ್ಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನ

‘ಕನ್ನಡ ಅಪ್ಪಿಕೊಳ್ಳಿ, ಅನ್ಯಭಾಷೆ ಗೌರವಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಮನಾಬಾದ್: ಕನ್ನಡಕ್ಕೆ ಅಪ್ಪಿಕೊಳ್ಳಿ, ಅನ್ಯ ಭಾಷೆಗಳನ್ನು ಗೌರವದಿಂದ ಕಾಣಬೇಕು ಎಂದು ತಾಲ್ಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಸಾಹಿತಿ ಶಿವಸ್ವಾಮಿ ಚಿನಕೇರಿ ಹೇಳಿದರು.ಪಟ್ಟಣದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಸಮ್ಮೇಳನದಲ್ಲಿ  ಮಾತನಾಡಿದರು.ದೃಷ್ಟಿದೋಷ ಉಳ್ಳ ಬರಹಗಾರ­ನಾದ ನನ್ನನ್ನು ಗುರುತಿಸಿದ್ದು ಅಲ್ಲದೇ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ನೀಡಿದ್ದು, ಜಿಲ್ಲಾ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಪದಾಧಿಕಾರಿ­ಗಳ ಕಾರ್ಯ ಅಭಿನಂದನಾರ್ಹ.  ಕನ್ನಡ ಭಾಷೆ ಸರ್ವ ಭಾಷೆಗಳ ಮಾತೃ ಸ್ಥಾನದಲ್ಲಿದೆ. ಯಾರು ಕನ್ನಡವನ್ನು ಗೌರವಿಸುತ್ತಾರೋ ಕನ್ನಡ ಅವರನ್ನು ಗೌರವಿಸುತ್ತದೆ. ಕನ್ನಡ ನಂಬಿದ ಅದೆಷ್ಟೋ ವಿದ್ಯಾವಂತರು ಉನ್ನತ ಸ್ಥಾನಮಾನ ಪಡೆದಿದ್ದಾರೆ ಎಂದರು.ಹುಟ್ಟಿನಿಂದ ಸಾಯುವವರೆಗಿನ ಪ್ರತಿಯೊಂದು ಚಟುವಟಿಕೆಗಳೂ ಕನ್ನಡಮಯ ಆಗಿರಬೇಕು ನಾಡು–ನುಡಿ ಸೇವೆಗಾಗಿ ಕಂಕಣ ಬದ್ಧ ಎಂದರು.ಚರ್ಚೆಗಳು ಕಾರ್ಯರೂಪಕ್ಕೆ ಬರಲಿ’: ಸಮ್ಮೇಳನದಲ್ಲಿ ನಡೆಯುವ ವಿವಿಧ ವಿಚಾರಗೋಷ್ಠಿ ಚರ್ಚೆ, ಭಾಷಣ ಕೇವಲ ವೇದಿಕೆಗೆ ಸೀಮಿತಗೊಳ್ಳದೇ ಕಾರ್ಯರೂಪಕ್ಕೆ ಬಂದರೆ ಮಾತ್ರ  ಸಮ್ಮೇಳನ ಸಾರ್ಥಕವಾಗುತ್ತದೆ ಎಂದು ಶಾಸಕ ರಾಜಶೇಖರ ಬಿ.ಪಾಟೀಲ ಹೇಳಿದರು.ಪಟ್ಟಣದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ತಾಲ್ಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು.2ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯ ’ವಡ್ಡಾರಾಧನೆ’ ಮೊದಲ ಗದ್ಯಗ್ರಂಥ ಕರ್ತೃ ಹುಮನಾಬಾದ್‌ ತಾಲ್ಲೂಕಿನ ಹಳ್ಳಿಖೇಡ(ಬಿ) ಗ್ರಾಮದ ಬ್ರಾಹಿಷ್ಣು ಆಗಿರುವುದು ಈ ಭಾಗದ ಪ್ರತಿಯೊಬ್ಬರ ಸ್ವಾಭಿಮಾನ ಹೆಚ್ಚಿಸಿದೆ. ಕನ್ನಡ ಸಾಹಿತ್ಯ ಪರಿಷತನ್ನು ಸ್ಥಾಪಿಸಿದ್ದು ಯಾವುದೇ ಸಾಹಿತಿಗಳಲ್ಲ. ಎಂಜಿನಿಯರ್‌ ಸರ್‌.ಎಂ.ವಿಶ್ವೇಶ್ವರಯ್ಯ ಅವರಂತ ಪ್ರಾಮಾಣಿಕ ಕಳಕಳಿಯುಳ್ಳ ಕನ್ನಡಿಗರು ಎನ್ನುವುದನ್ನು ಪ್ರತಿಯೊಬ್ಬರೂ ಸ್ವಾಭಿಮಾನದಿಂದ ಹೇಳಿಕೊಳ್ಳಬೇಕು ಎಂದರು.ನಿಕಟಪೂರ್ವ ಸಮ್ಮೇಳನ ಸರ್ವಾಧ್ಯಕ್ಷ ಹಿರಿಯ ಸಾಹಿತಿ ಡಾ,ಮಾಣಿಕರಾವ ಧನಾಶ್ರೀ ಮಾತನಾಡಿ, ವಿದ್ಯಾವಂತರೂ ಮಾತ್ರವಲ್ಲದೇ ಜನಸಾಮಾನ್ಯರು, ಕೂಲಿಕಾರರ ಮೇಲೂ ಆಂಗ್ಲ ಪದಗಳ ಪ್ರಭಾವ ಹೆಚ್ಚಾಗಿ ಭಾಷಾಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಜನಸಾಮಾನ್ಯರ ಕೈಗೆ ಸಿಕ್ಕ ಕನ್ನಡ ಆಂಗ್ಲ– ಕನ್ನಡ ಮಿಶ್ರಣದಿಂದ ಭಜ್ಜಿ ಭಾಷೆಯಾಗಿ ಪರಿವರ್ಥನೆಗೊಳ್ಳುತ್ತಿದೆ ಎಂದು ವಿಷಾದದಿಂದ ಹೇಳಿದರು. ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಉತ್ಸವ ಮೂರ್ತಿಗಳಾಗದೇ ನಾಡು– ನುಡಿಗೆ ಧಕ್ಕೆ ಬಂದಾಗ ವೈಯಕ್ತಿಕ ಪ್ರತಿಷ್ಟೆ ಬದಿಗೊತ್ತಿ ಉದನ್ನು ಉಳಿಸಿ ಬೆಳೆಸಲು ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಕಂಕಣ ಬದ್ಧರಾಗಬೇಕು ಎಂದರು.ಸಂಭ್ರಮದ ಮೆರವಣಿಗೆ

ಹುಮನಾಬಾದ್‌: ನಗರದಲ್ಲಿ ಬುಧವಾರ ನಡೆದ ತಾಲ್ಲೂಕು 4ನೇ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರ ಮೆರವಣಿಗೆ ನಡೆಯಿತು.

ಪ್ರವಾಸಿ ಮಂದಿರದಿಂದ ಆರಂಭಗೊಂಡ ಮೆರವಣಿಗೆಗೆ ಡಿ.ವೈಎಸ್ಪಿ ಅಮರನಾಥರೆಡ್ಡಿ ಪೂಜೆ ಸಲ್ಲಿಸಿ, ಚಾಲನೆ ನೀಡಿದರು.

ವಿವಿಧ ಇಲಾಖೆ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ದೇಶಭಕ್ತಿಗೀತೆ ಆಧಾರಿತ ಧ್ವನಿಸುರುಳಿಗೆ ನೃತ್ಯ ಪ್ರದರ್ಶಿಸಿ ಗಮನಸೆಳೆದರು.    ಕನ್ನಡ ಸಾಹಿತ್ಯ ಪರಿಷತ್‌ ಪದಾಧಿಕಾರಿಗಳು ಮೆರವಣಿಗೆ ಉದ್ದಕ್ಕೂ ಹೆಜ್ಜೆಹಾಕಿ ಗಮನ ಸೆಳೆದರು.

ಪಟ್ಟಣದ ವೀರಭದ್ರೇಶ್ವರ, ನಗರೇಶ್ವರ, ವಿಶ್ವಭಾರತಿ, ಡಾ.ಅಂಬೇಡ್ಕರ್‌, ಬಸವತೀರ್ಥ ವಿದ್ಯಾಪೀಠ, ನೂತನ ಭವಾನಿ, ಶಾಂತಿನಿಕೇತನ, ಜಲಸಂಗವಿಯ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಲೇಜಿಮ್‌ ಹಾಗೂ ಕೋಲಾಟ ಪ್ರದರ್ಶಿಸಿ ಮೆರವಣಿಗೆ ಮೆರಗು ಹೆಚ್ಚಿಸಿದರು. ಡೊಳ್ಳು ಕುಣಿತ, ಬ್ರಾಸ್‌ಬ್ಯಂಡ್‌, ಹಲಗೆ, ವಾದ್ಯಮೇಳ ಇದ್ದವು.ಶಾಸಕ ರಾಜಶೇಖರ ಬಿ.ಪಾಟೀಲ, ಜಿಲ್ಲಾ ಪಂಚಾಯಿತಿ ಕೃಷಿ ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ವೀರಣ್ಣ ಪಾಟೀಲ, ತಾ.ಪಂ ಮಾಜಿ ಅಧ್ಯಕ್ಷ ಶಿವರಾಜ ಗಂಗಶೆಟ್ಟಿ, ಪುರಸಭೆ ಮಾಜಿ ಸದಸ್ಯ ಮಾಣಿಕರೆಡ್ಡಿ ಕರ್ಣಿ, ಅಪ್ಸರಮಿಯ್ಯ, ವಿನಾಯಕ ಯಾದವ್‌, ಕಸಾಪ ಜಿಲ್ಲಾಧ್ಯಕ್ಷ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ, ತಾಲ್ಲೂಕು ಅಧ್ಯಕ್ಷ ರವೀಂದ್ರ ಭಂಡಾರಿ, ಮಾಜಿ ಅಧ್ಯಕ್ಷ ವೀರಂತರೆಡ್ಡಿ ಜಂಪಾ, ಕೋಶಾಧ್ಯಕ್ಷ ಡಿ.ಎಂ.ಆರ್ಯ, ಕಾರ್ಯದರ್ಶಿ ಶಿವರಾಜ ಮೇತ್ರೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗಶೆಟ್ಟಿ ಡುಮಣಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ವೀರಾರೆಡ್ಡಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪಿ.ನಾಗಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್‌.ಸಿ ಚಂದ್ರಶೇಖರ, ಬಿ.ಆರ್‌.ಸಿ ಮಾಣಿಕಪ್ಪ ಬಕ್ಕನ್, ಸಿ.ಎಸ್‌.ಪಾಟೀಲ, ಅಂಕುಶ ಗೋಖಲೆ, ರಾಜಕುಮಾರ ಭೂರೇಶ, ಅನಂತರೆಡ್ಡಿ , ಮಾಣಿಕಪ್ಪ ಕುಂದನ್‌, ಜಿ.ಟಿ ದೊಡ್ಮನಿ, ಅಶೋಕ ಗೊಂಬಿ, ಪ್ರಭಾಕರ ಕುಲಕರ್ಣಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.