‘ಕನ್ನಡ ಸಾಹಿತ್ಯ ಲೋಕದ ವಿವೇಕ ದೇಜಗೌ’

7

‘ಕನ್ನಡ ಸಾಹಿತ್ಯ ಲೋಕದ ವಿವೇಕ ದೇಜಗೌ’

Published:
Updated:

ಬೆಳಗಾವಿ: ‘ಡಾ. ದೇ.ಜವರೇಗೌಡ ಅವರು ಸಾಹಿತ್ಯ ಕ್ಷೇತ್ರದ ಆಧಾರಸ್ತಂಭ. ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಅನನ್ಯ’ ಎಂದು ಹಿರಿಯ ವಿಮರ್ಶಕ ಡಾ. ಗುರುಲಿಂಗ ಕಾಪಸೆ ಹೇಳಿದರು.ಇಲ್ಲಿನ ಶಿವಬಸವ ನಗರದ ಎಸ್‌.ಜೆ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲ ಯದ ಸಭಾಭವನದಲ್ಲಿ ನಾಗನೂರು ಶ್ರೀ ಶಿವಬಸವ ಸ್ವಾಮಿಗಳ ಕಲ್ಯಾಣ ಕೇಂದ್ರದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ದೇಜಗೌ ಸಾಹಿತ್ಯ ವಿಚಾರ ಸಂಕಿರಣ ಹಾಗೂ ಅಭಿನಂದನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ದೇಜಗೌ ಅವರು 300 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಅವರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. 35,000 ಪುಟಗಳ ಸಾಹಿತ್ಯವನ್ನು ಸೃಷ್ಟಿಸಿ, ಗದ್ಯ ಸಾಹಿತ್ಯಕ್ಕೆ ಹೊಸ ಆಯಾಮ ನೀಡಿ ದ್ದಾರೆ. ದೇಜಗೌ ಎಂಬುದು ಕೇವಲ ಮೂರಕ್ಷರದ ಹೆಸರಲ್ಲ, ಅದೊಂದು ಕನ್ನಡಕ್ಕೆ ಧಕ್ಕೆ ತರುವ ಪೀಡೆಗಳನ್ನು ತೊಲಗಿಸುವ ಮಂತ್ರ. ದೇಜಗೌ ಕನ್ನಡ ಸಾಹಿತ್ಯ ಲೋಕದ ವಿವೇಕ ಎಂದು ಬಣ್ಣಿಸಿದರು.ದೇಜಗೌ ಅವರು ಧರ್ಮ, ನೀತಿ, ಭಾಷೆ, ರಾಜಕಾರಣ ಹಾಗೂ ಜನ ಸಾಮಾನ್ಯರ ಸಮಸ್ಯೆಗಳನ್ನು ಸಮಚಿತ್ತ ದಿಂದ ಕಾಣುವ ಸಾಹಿತಿ. ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿತ್ವವನ್ನು ಅವರ ಕೃತಿಗಳಲ್ಲಿ ಕಾಣಬಹುದು. ಕುವೆಂಪು ಅವರ ಇನ್ನೊಂದು ಮುಖವೇ ದೇಜಗೌ ಎಂದು ಬಣ್ಣಿಸಿದರು.ಏಳು ದಶಕಗಳ ಕಾಲ ಸಾಹಿತ್ಯ ಕ್ಷೇತ್ರದಲ್ಲಿ ಅಮೂಲ್ಯ ಸೇವೆ ಸಲ್ಲಿಸಿದ ಅವರು ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆಯುವ ನಿಟ್ಟಿನಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಅಖಂಡ ಕರ್ನಾಟಕದ ಕನಸನ್ನು ನನಸು ಗೊಳಿಸಲು ಹಗಲಿರುಳು ಶ್ರಮಿಸಿದ್ದಾರೆ. ನೂರಾರು ಯುವ ಸಾಹಿತಿಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಆರ್‌.ಅನಂತನ್‌ ಅವರು ಮಾತನಾಡಿ, ಯಾವುದೇ ಕ್ಷೇತ್ರ ದಲ್ಲಿ ಸಾಧಕನು ಜಾತಿ, ಭಾಷೆ, ಗ್ರಾಮಕ್ಕೆ ಸೀಮಿತವಲ್ಲ. ಸಾಧಕ ಎಂಬುವನು ಸಮಾಜಕ್ಕೆ ಸೇರಿದವನು. ಹೀಗಾಗಿ 35,000 ಪುಟಗಳ ಸಾಹಿತ್ಯ ಸೃಷ್ಟಿಸಿರುವ ದೇಜಗೌ ಅವರು ಸಮಾಜದ ಸ್ವತ್ತು ಎಂದು ತಿಳಿಸಿದರು.ಡಾ. ಗುರುಪಾದ ಮರಗುದ್ದಿ ಅವರು ಮಾತನಾಡಿ, ಜನರು ಪ್ರಾದೇಶಿಕ ಅಸಮಾನತೆಯನ್ನು ತೊಡೆದು ಹಾಕಿ ಅಖಂಡ ಕರ್ನಾಟಕ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.ಸಾನಿಧ್ಯ ವಹಿಸಿದ್ದ ನಿಡಸೋಸಿ ಸಿದ್ಧಸಂಸ್ಥಾನಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯಿಂದಾಗಿ ಇಂದಿನ ಯುವಕರು ಸಾಹಿತ್ಯವನ್ನು ಓದಲು ಹಿಂದೇಟು ಹಾಕುತ್ತಿದ್ದಾರೆ. ಸಾಹಿತ್ಯ ಕ್ಷೇತ್ರದತ್ತ ನಿರ್ಲಕ್ಷ್ಯ ತಾಳುತ್ತಿದ್ದಾರೆ. ಈ ಕುರಿತು ಗಮನ ಹರಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.ನಾಗನೂರು ರುದ್ರಾಕ್ಷಿಮಠದ ಡಾ. ಸಿದ್ಧರಾಮ ಸ್ವಾಮೀಜಿ, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಯ.ರು.ಪಾಟೀಲ ಮತ್ತಿತರ ಪ್ರಮುಖರು  ಹಾಜರಿದ್ದರು.ಡಾ, ಬಸವರಾಜ ಜಗಜಂಪಿ ಸ್ವಾಗತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry