‘ಕಬ್ಬಿನ ಬೆಲೆಗೆ ಇಳುವರಿ ಆಧಾರವಾಗಲಿ’

7

‘ಕಬ್ಬಿನ ಬೆಲೆಗೆ ಇಳುವರಿ ಆಧಾರವಾಗಲಿ’

Published:
Updated:

ಬೆಳಗಾವಿ: ‘ಇಳುವರಿ ಆಧಾರದ ಮೇಲೆ ಕಬ್ಬಿನ ಬೆಲೆ ನಿಗದಿ ಮಾಡಬೇಕು’ ಎಂದು ರಾಷ್ಟ್ರೀಯ ರೈತ ಸಂಘದ ರಾಷ್ಟ್ರ ಘಟಕದ ಅಧ್ಯಕ್ಷ ಬಿ.ಪಿ. ಶೇರಿ ಒತ್ತಾಯಿಸಿದರು.ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೆರೆ ರಾಜ್ಯಗಳಾದ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್ ಹಾಗೂ ಹರಿಯಾಣದ ಸಕ್ಕರೆ ಕಾರ್ಖಾನೆಗಳು ಶೇ. 9.5 ರಷ್ಟು ಸಕ್ಕರೆ ಇಳುವರಿಯ ಪ್ರತಿಟನ್‌ ಕಬ್ಬಿಗೆ 2950 ರೂಪಾಯಿ ಪಾವತಿಸುತ್ತಿವೆ. ಆದರೆ, ಕರ್ನಾಟಕ ರಾಜ್ಯದಲ್ಲಿನ ಸಕ್ಕರೆ ಕಾರ್ಖಾನೆಗಳು ಶೇ. 12 ರಿಂದ 14 ರಷ್ಟು ಸಕ್ಕರೆ ಇಳುವರಿಯ ಪ್ರತಿ ಟನ್‌ ಕಬ್ಬಿಗೆ ರೂ 2000 ರಿಂದ 2200 ಪಾವತಿಸುತ್ತಿವೆ. ಇದರಿಂದಾಗಿ ಕಬ್ಬು ಬೆಳೆದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಅತಂತ್ರ ಸ್ಥಿತಿಗೆ ತಲುಪಿದ್ದಾರೆ. ಈ ಹಿನ್ನೆಲೆಯಲ್ಲಿ ಕಬ್ಬು ಬೆಳೆ ದರ ನಿಗದಿ ಸಮಿತಿ ರಚಿಸಿ ಇಳುವರಿ ಆಧಾರದ ಮೇಲೆ ಕಬ್ಬಿನ ದರ ನಿಗದಿ ಮಾಡಬೇಕು ಎಂದರು.ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳು 2012–13ನೇ ಸಾಲಿನಲ್ಲಿ ಪ್ರತಿ ಟನ್‌ ಕಬ್ಬಿಗೆ 2500 ರೂಪಾಯಿ ದರ ನೀಡುವುದಾಗಿ ಸ್ವಯಂ ಘೋಷಣೆ ಮಾಡಿದ್ದವು. ಆದರೆ, ಈಚೆಗೆ ಮೈಸೂರಿನಲ್ಲಿ ನಡೆದ ಸಭೆಯಲ್ಲಿ ಸಕ್ಕರೆ ಸಚಿವ ಪ್ರಕಾಶ ಹುಕ್ಕೇರಿ ಅವರು ಪ್ರತಿ ಟನ್‌ ಕಬ್ಬಿಗೆ ರೂ 2400 ನೀಡಿ ಎಂದು ಸಕ್ಕರೆ ಕಾರ್ಖಾನೆಗಳಿಗೆ ಆದೇಶ ನೀಡಿರುವುದು ಖಂಡನೀಯ. ಹೀಗಾಗಿ ಇಳುವರಿ ಆಧಾರದ ಮೇಲೆ ಕಬ್ಬಿನ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.ಬೆಳೆ ದರ ನಿಗದಿ ಸಮಿತಿಗೆ ಬೆಳಗಾವಿ ವಿಭಾಗದಿಂದ ಮೂವರು, ಗುಲ್ಬರ್ಗ ವಿಭಾಗದಿಂದ ಒಬ್ಬರು ಹಾಗೂ ಮೈಸೂರು ವಿಭಾಗದಿಂದ ಒಬ್ಬರು ಸೇರಿದಂತೆ ಐದು ಜನ ಕಬ್ಬು ಬೆಳೆಗಾರರ ಪ್ರತಿನಿಧಿಗಳನ್ನು ನೇಮಿಸಬೇಕು ಎಂದು ತಿಳಿಸಿದರು.ಜಿಲ್ಲೆಯ 8 ಕಾರ್ಖಾನೆಗಳಲ್ಲಿ 2012–13ನೇ ಸಾಲಿನಲ್ಲಿ ಕಬ್ಬು ಪೂರೈಕೆ ಮಾಡಿದ ರೈತರ ರೂ 75 ಕೋಟಿ ಬಿಲ್‌ ಬಾಕಿ ಇದೆ. ಗೋಕಾಕನ ಘಟಪ್ರಭಾ ಸಕ್ಕರೆ ಕಾರ್ಖಾನೆ 23.88 ಕೋಟಿ ರೂಪಾಯಿ, ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಕ್ಕರೆ ಕಾರ್ಖಾನೆ 10.11 ಕೋಟಿ ರೂಪಾಯಿ, ಬೈಲಹೊಂಗಲದ ಸೋಮೇಶ್ವರ ಸಕ್ಕರೆ ಕಾರ್ಖಾನೆ ರೂ 89 ಲಕ್ಷ, ಹುಣಶ್ಯಾಳ ಪಿ.ಜಿ. ಗ್ರಾಮದ ಸತೀಶ ಶುಗರ್ಸ್ ರೂ 20.10 ಕೋಟಿ, ಅಥಣಿ ಫಾರ್ಮರ್ಸ್ ಶುಗರ್ಸ್‌ ರೂ 12.15 ಕೋಟಿ, ಉದಪುಡಿಯ ಶಿವಸಾಗರ ಸಕ್ಕರೆ ಕಾರ್ಖಾನೆ ರೂ 2.85 ಕೋಟಿ, ಹಿರೇನಂದಿ ಸೌಭಾಗ್ಯ ಸಕ್ಕರೆ ಕಾರ್ಖಾನೆ ರೂ 1.56 ಕೋಟಿ ಹಾಗೂ ನಿಪ್ಪಾಣಿಯ ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆ ರೂ 3.02 ಕೋಟಿ ಬಿಲ್ ಪಾವತಿಸಬೇಕಿದೆ. ಕೂಡಲೇ ಬಾಕಿ ಬಿಲ್‌ ಪಾವತಿಸಬೇಕು ಎಂದರು.ಕಲ್ಯಾಣರಾವ್‌ ಮುಚಳಂಬಿ, ದಾದಪ್ಪ ಮುನ್ನೋಳಿ, ಶಿವಪುತ್ರಪ್ಪ ಜಕಬಾಳ, ಮುರಿಗೆಪ್ಪ ಹೊಸಮನಿ, ಪಾರ್ವತೆಮ್ಮ ಕಳಸಣ್ಣವರ, ಪುಷ್ಪಾ ಹುಬ್ಬಳ್ಳಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry