‘ಕಲ್ಲಿನ ಮಳಿ ಸುರಿತು, ಸರ್ವನಾಶವಾಯ್ತು’

ಬಳ್ಳಾರಿ: ‘ಆಕಾಶದಿಂದ ಕಲ್ಲಿನ ಮಳಿ ಸುರಿದಂಗಾಗೇತಿ. ಮುಂಜಾನೆದ್ದು ಹೋಗಿ ನೋಡಿದ್ರ ಹೊಲದಾಗಿನ ಬೆಳೀ ಎಲ್ಲಾ ಸರ್ವನಾಶ ಆಗೇತಿ. ಎರಡು ಮೂರು ದಿನದಾಗ ಕೈಗೆ ಬರಲಿದ್ದ ಮೆಣಸಿನಕಾಯಿ, ಟೊಮೆಟೊ, ಜ್ವಾಳ ಎಲ್ಲಾ ನೆಲದ ಪಾಲಾಗ್ಯಾವು. ನಿನ್ನೆ ಸುರದಿದ್ದು ಆಲಿಕಲ್ಲು ಮಳಿ ಅಲ್ಲ. ಅದು ಕಲ್ಲಿನ ಮಳಿ...’
ಬುಧವಾರ ಸಂಜೆ ಸುರಿದ ಆಲಿಕಲ್ಲು ಮಳೆಯಿಂದ ಬೆಳೆ ಕಳೆದುಕೊಂಡು ಸಂಕಷ್ಟ ಎದುರಿಸುತ್ತಿರುವ ತಾಲ್ಲೂಕಿನ ಕಪಗಲ್ಲು, ಸಿರಿವಾರ ಗ್ರಾಮದ ಕೆಲವು ರೈತರು ಆಡಿದ ನೋವಿನ ನುಡಿಗಳಿವು.
ಹೆಚ್ಚಾಗಿ ತೋಟಗಾರಿಕೆ ಬೆಳೆಗಳನ್ನೇ ಬೆಳೆದಿರುವ ಕಪಗಲ್ಲು, ಸಿರಿವಾರ, ಸೋಮಸಮುದ್ರ, ಮೋಕಾ, ಡಿ.ನಾಗೇನಹಳ್ಳಿ, ತಂಬ್ರಹಳ್ಳಿ, ಶಿವಪುರ ಮತ್ತಿತರ ಗ್ರಾಮಗಳ ರೈತರು ಬಿರು ಬೇಸಿಗೆಯಲ್ಲಿ ಸುರಿದ ಅಕಾಲಿಕ ಮಳೆ ನೆನಪಿಸಿಕೊಂಡರೇ ಮೈನಡುಕ ಉಂಟಾಗುವಂತಾಗಿದೆ.
ನೂರಾರು ಎಕರೆ ಭೂಮಿಯಲ್ಲಿ ಕಟಾವಿಗೆ ಬಂದಿದ್ದ ಸಾವಿರಾರು ಕ್ವಿಂಟಲ್ ಮೆಣಸಿನಕಾಯಿ, ಗಿಡದಲ್ಲಿದ್ದ ಟೊಮೆಟೊ, ತೊಗರಿ, ಹತ್ತಿ, ಜೋಳ, ಅಲಸಂದಿ, ಶೇಂಗಾ, ಭತ್ತ ಮತ್ತಿತರ ಬೆಳೆ ಸಂಪೂರ್ಣ ಹಾನಿಗೊಳಗಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.
‘ಕಳೆದ ವಾರವಷ್ಟೇ ಮೆಣಸಿನ ಕಾಯಿಯನ್ನು ಗಿಡದಿಂದ ಬಿಡಿಸಿ, ಬಿಸಿಲಿಗೆ ಒಣ ಹಾಕಿದ್ದೆವು. ಇನ್ನೇನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಬೇಕು ಎನ್ನುವಷ್ಟರಲ್ಲಿ ಮಳೆ ಸುರಿದಿದೆ. ಮಳೆ ನೀರಿಗೆ ಸಿಲುಕಿರುವ ಕಾಯಿಯ ಬಣ್ಣವೆಲ್ಲ ಹಾಳಾಗುತ್ತದೆ. ದರವೂ ಕಡಿಮೆ ದೊರೆಯುತ್ತದೆ’ ಎಂದು ಸಿರಿವಾರ ಗ್ರಾಮದ ರೈತ ಉಪ್ಪಾರ ಬಸವರಾಜ ದುಃಖ ತೋಡಿಕೊಂಡರು.
ಮೋಕಾ, ಡಿ.ನಾಗೇನಹಳ್ಳಿ, ತಂಬ್ರಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಸೋಮವಾರ ಸಂಜೆ ಸುರಿದದ್ದ ಆಲಿಕಲ್ಲು ಮಳೆಯಿಂದ ತೀವ್ರ ಹಾನಿಗೆ ಒಳಗಾಗಿ ಚೇತರಿಸಿಕೊಳ್ಳುತ್ತಿದ್ದ ರೈತರು, ಬುಧವಾರ ಸಂಜೆ ಮತ್ತೆ ಸುರಿದ ಆಲಿಕಲ್ಲು ಮಳೆಯಿಂದಾಗಿ ಇನ್ನಷ್ಟು ಆತಂಕಕ್ಕೆ ಒಳಗಾಗುವಂತಾಗಿದೆ.
ನೂರಾರು ಸಪೋಟಾ ಮತ್ತು ಮಾವಿನ ಮರಗಳಿಗೆ ಧಕ್ಕೆಯಾಗಿದೆ. ಕಟಾವಿಗೆ ಬಂದಿದ್ದ ಸಪೋಟಾ ಹಣ್ಣುಗಳೆಲ್ಲ ನೆಲಕ್ಕುರಳಿವೆ ಎಂದು ನಾಗೇನಹಳ್ಳಿ ಗ್ರಾಮದ ರೈತ ಜಂಬನಗೌಡ ತಿಳಿಸಿದ್ದಾರೆ.
ಅಧಿಕಾರಿಗಳು ಬರಲಿಲ್ಲ: ನಾಲ್ಕು ದಿನಗಳಿಂದ ತಾಲ್ಲೂಕಿನ ವಿವಿಧೆಡೆ ಧಾರಾಕಾರ ಮಳೆ ಸುರಿದು ಅಪಾರ ಹಾನಿ ಸಂಭವಿಸಿದರೂ ಕೃಷಿ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ. ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರೊಬ್ಬರು ಹಾನಿಗೊಳಗಾಗಿರುವ ತೋಟಗಳಿಗೆ ಕಳೆದ ಮಂಗಳವಾರ ಭೇಟಿ ನೀಡಿ ಪರಿಹಾರಕ್ಕಾಗಿ ಕಂದಾಯ ಇಲಾಖೆಗೆ ಅರ್ಜಿ ನೀಡುವಂತೆ ಸೂಚಿಸಿ ಹೋಗಿದ್ದಾರೆ ಎಂದು ಕೆಲವು ರೈತರು ತಿಳಿಸಿದರು.
ಸತ್ತು ಬಿದ್ದ ಕುರಿಗಳು: ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನಿಂದ ಬಂದಿದ್ದ ಹೊನ್ನಳ್ಳಿಯ ವೀರೇಶ, ಬೊಮ್ಮಘಟ್ಟದ ಗೊಲ್ಲಪ್ಪ, ರಾಮದುರ್ಗದ ಮುದ್ದಪ್ಪ, ಸಿರಿವಾರದ ಎಂಕಪ್ಪ ಹಾಗೂ ಹನುಮಂತಪ್ಪ ಅವರಿಗೆ ಸೇರಿರುವ 85ಕ್ಕೂ ಹೆಚ್ಚು ಕುರಿಗಳು ಆಲಿಕಲ್ಲಿನ ಹೊಡೆತಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿವೆ.
ಗುರುವಾರ ಮರಣೋತ್ತರ ಪರೀಕ್ಷೆ ನಡೆಸಿದ ಪಶು ಸಂಗೋಪನಾ ಇಲಾಖೆ ಸಿಬ್ಬಂದಿ ಪರಿಹಾರದ ಭರವಸೆ ನೀಡಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.