‘ಕಾಂಗ್ರೆಸ್‌ ವೈಫಲ್ಯ: ಮನೆ ಮನೆಯಲ್ಲಿ ಜಾಗೃತಿ’

7

‘ಕಾಂಗ್ರೆಸ್‌ ವೈಫಲ್ಯ: ಮನೆ ಮನೆಯಲ್ಲಿ ಜಾಗೃತಿ’

Published:
Updated:

ಪುತ್ತೂರು: ಕಾಂಗ್ರೆಸ್ ನೇತೃತ್ವದ ಕೇಂದ್ರದ ಯುಪಿಎ ಸರ್ಕಾರ ನಡೆಸುತ್ತಿರುವ ಭ್ರಷ್ಟಾಚಾರ ಮತ್ತು ಹಗರಣಗಳ ಸರಮಾಲೆಗಳಿಂದ ಜನತೆ ದಿಗಿಲು­ಗೊಂಡಿದ್ದು, ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ದೇಶದಿಂದ ಹೊರಗಟ್ಟಲು ಮನೆ ಮನೆಯಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಜಿಲ್ಲಾ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗುವುದು ಎಂದು ಪಕ್ಷದ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಪ್ರತಾಪಸಿಂಹ ನಾಯಕ್ ಹೇಳಿದ್ದಾರೆ.ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 9 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ದೇಶವನ್ನು ಆಡಳಿತಾತ್ಮಕವಾಗಿ ಅಧಃಪತನಕ್ಕೆ ತಳ್ಳಿದ್ದು, ಜನರಲ್ಲಿ ಆತಂಕ ಮೂಡಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜನತೆ ತಮ್ಮ ಆತಂಕವನ್ನು ಸೇವಾ ರೂಪದಲ್ಲಿ  ಬಿಜೆಪಿಯನ್ನು ಬೆಂಬಲಿಸುವ ಮೂಲಕ ದೇಶದ ಚಿತ್ರಣವನ್ನು ಬದಲಾಯಿಸಲಿದ್ದಾರೆ ಎಂದರು.ಭ್ರಷ್ಟರನ್ನು ರಕ್ಷಿಸಲು ಪ್ರಧಾನಿ ಸಹಿತ ಕೇಂದ್ರದ ವಿವಿಧ ಸಚಿವರು ಹುನ್ನಾರ ನಡೆಸುತ್ತಿದ್ದು, ಸಿಬಿಐನ ದುರುಪಯೋಗ, ಸುಪ್ರೀಂ ಕೋರ್ಟ್‌ಗೆ ಸುಳ್ಳು ಅಫಿದಾವತ್ ಸಲ್ಲಿಕೆ ಮತ್ತಿತರ ಪ್ರಕರಣಗಳು ಇದಕ್ಕೆ ಸಾಕ್ಷಿ. ಪ್ರಧಾನಿ ಕಚೇರಿಯಲ್ಲಿಯೇ ಕಲ್ಲಿದ್ದಲು ಹಗರಣ ನಡೆದಿರುವುದು ಸರ್ಕಾರದ ದೌರ್ಬಲ್ಯ­ವನು್ನ ಸೂಚಿಸುತ್ತದೆ ಎಂದರು.ಯೋಜನೆಗೆ ವಿರೋಧ: ನದಿ ತಿರುವು ಯೋಜನೆ, ನಿಡ್ಡೋಡಿ ವಿದ್ಯುತ್ ಯೋಜನೆ ಸೇರಿದಂತೆ ಜಿಲ್ಲೆಯ ಜನತೆಗೆ ತೊಂದರೆಯಾಗುವ ಯಾವುದೇ ಯೋಜನೆಗಳನ್ನು ಪಕ್ಷ ವಿರೋಧಿಸುತ್ತದೆ ಎಂದ ಅವರು, ಜಿಲ್ಲೆಯ ಧಾರಣಾ ಸಾಮರ್ಥ್ಯಕ್ಕೆ ಅನುಗುಣವಾಗಿ ಮತ್ತು ಇಲ್ಲಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆಗಳನ್ನು ರೂಪಿಸಬೇಕು. ಪಕ್ಷವು ಯಾವುದೇ ಯೋಜನೆಯನ್ನು ವಿರೋಧಕ್ಕಾಗಿ ವಿರೋಧಿಸುತ್ತಿಲ್ಲ. ಆದರೆ ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಿ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಆಗ್ರಹಿಸುತ್ತದೆ ಎಂದರು.ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೆಲವೊಂದು ತಪ್ಪು ನಿರ್ಧಾರಗಳಿಂದಾಗಿ ಬಿಜೆಪಿ ಪಕ್ಷಕ್ಕೆ ಸೋಲಾಗಿದೆ. ಈ ಬಗ್ಗೆ ಸೋಲಿನ ವಿಶ್ಲೇಷಣೆಯೂ ನಡೆದಿದೆ ಎಂದ ಅವರು, ಕಾಂಗ್ರೆಸ್ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ತಡೆ, ದೇವಸ್ಥಾನಗಳ ನಿಲರ್ಕ್ಷ್ಯ, ಅಡಿಕೆ ಬೆಳೆಗಾರರಿಗೆ ಕಷ್ಟಗಳಿಗೆ ಸ್ಪಂದಿಸದೆ ಇರುವುದು ಸಹಿತ ಹಲವಾರು ತಪ್ಪು ನಿರ್ಧಾರಗಳನ್ನು ಕೈಗೊಂಡಿದ್ದು ಇದರಿಂದಾಗಿ ಜನತೆ ಬಿಜೆಪಿಯನ್ನೇ ಮತ್ತೆ ಬಯಸಿದ್ದಾರೆ ಎಂದರು.ಪುತ್ತೂರು ಪುರಸಭಾ ಅಧ್ಯಕ್ಷರ ಚುನಾವಣೆಯಲ್ಲಿ ತಮ್ಮ ಪಕ್ಷದ ಸದಸ್ಯರ ಬೆಂಬಲವನ್ನು ನೂತನ ಅಧ್ಯಕ್ಷೆ ಬಯಸಿದ ಹಿನ್ನಲೆಯಲ್ಲಿ ಅಭಿವೃದ್ಧಿಯ ದೃಷ್ಟಿಯಿಂದ ಅವರಿಗೆ  ಬೆಂಬಲ ನೀಡಿರುವುದಾಗಿ ಅವರು ಸ್ಪಷ್ಟ­ಪಡಿಸಿ­ದರು.ಗೋಷ್ಠಿಯಲ್ಲಿ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಜೀವ ಮಟಂದೂರು, ಕ್ಷೇತ್ರ ಬಿಜೆಪಿ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ, ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಹೇರಳೆ ಮತ್ತು ಚಂದ್ರಶೇಖರ ರಾವ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry