‘ಕಾಡಿನಲ್ಲಿ ನಡೆಯುವುದನ್ನು ಕಲಿಯಿರಿ’

7
ಅರಣ್ಯ ರಕ್ಷಕರ ಸಂಘದ ಡೈರಿ ಬಿಡುಗಡೆ

‘ಕಾಡಿನಲ್ಲಿ ನಡೆಯುವುದನ್ನು ಕಲಿಯಿರಿ’

Published:
Updated:

ಶಿರಸಿ: ‘ಅರಣ್ಯ ರಕ್ಷಕರು ಕಾಡನ್ನು ಬಿಟ್ಟು ರಸ್ತೆಯಲ್ಲಿ ಗಸ್ತು ತಿರುಗಿ ಕೇವಲ ವೀಕ್ಷಕರ ಮೇಲೆ ಎಲ್ಲ ಹೊಣೆ ಹೊರಿಸುವುದು ಸೂಕ್ತವಲ್ಲ. ಕಾಡಿನಲ್ಲಿ ನಡೆಯುವುದನ್ನು ಕಲಿತುಕೊಳ್ಳಿ. ನಿಮ್ಮ ವಲಯ ಅರಣ್ಯದ ಪ್ರತಿ ಪ್ರದೇಶದೊಂದಿಗೆ ಒಡನಾಟ ಬೆಳೆಸಿಕೊಂಡು ಹಿರಿಯ ಅಧಿಕಾರಿ ಗಳನ್ನೂ ಅರಣ್ಯ ಪ್ರದೇಶಕ್ಕೆ ಕರೆದೊಯ್ಯಿರಿ’ ಹೀಗೆಂದು ಹುರಿದುಂಬಿಸಿದವರು ಕೆನರಾ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎನ್‌.ಎಲ್‌. ಶಾಂತಕುಮಾರ್‌.ಕರ್ನಾಟಕ ರಾಜ್ಯ ಅರಣ್ಯ ರಕ್ಷಕ ಹಾಗೂ ವೀಕ್ಷಕರ ಸಂಘದ ಕೆನರಾ ವೃತ್ತ ಘಟಕ ಗುರುವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡೈರಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ‘ಅರಣ್ಯ ಇಲಾಖೆಯ ಗಸ್ತು ವಿಭಾಗವು ಅರಣ್ಯ ರಕ್ಷಕರು ಮತ್ತು ವೀಕ್ಷಕರನ್ನೇ ಅವಲಂಬಿಸಿದೆ. ಅರಣ್ಯ ರಕ್ಷಕರು ಪ್ರಸ್ತುತ ಇರುವ ಅರಣ್ಯ ಪ್ರದೇಶವನ್ನು ರಕ್ಷಣೆ ಮಾಡಿದರೆ ಅದೇ ದೊಡ್ಡ ಕೊಡುಗೆಯಾಗುತ್ತದೆ. ಕೇಂದ್ರ ಸರ್ಕಾರ ಮಟ್ಟದ ಹಿರಿಯ ಅಧಿಕಾರಿಗಳು ಜಿಲ್ಲೆಗೆ ಆಗಮಿಸಿದಾಗ ಇಲ್ಲಿನ ದಟ್ಟ ಅರಣ್ಯ ಪ್ರದೇಶ, ಅರಣ್ಯ ಸಂರಕ್ಷಣೆ ಕಂಡು ಅಚ್ಚರಿ ಪಡುತ್ತಾರೆ. ಕೆನರಾ ವೃತ್ತದಲ್ಲಿರುವ ಉಳಿದುಕೊಂಡಿರುವ ಅರಣ್ಯ ಸಂಪತ್ತನ್ನು ರಕ್ಷಿಸುವಲ್ಲಿ ನಿಮ್ಮ ಜವಾಬ್ದಾರಿ ಹೆಚ್ಚಿನದಾಗಿದೆ’ ಎಂದರು.‘ಕೆನರಾ ವೃತ್ತ ದೊಡ್ಡ ವೃತ್ತವಾಗಿದ್ದು, 667 ಅರಣ್ಯ ರಕ್ಷಕ ಹುದ್ದೆಯಲ್ಲಿ 427 ಜನ ಕಾರ್ಯ ನಿರ್ವಹಿಸುತ್ತಿದ್ದಾರೆ. 1500 ಇತರ ಹುದ್ದೆಗಳಲ್ಲಿ 1200ರಷ್ಟು ಭರ್ತಿ ಇವೆ. 2500 ದಿನಗೂಲಿ ನೌಕರರು ಕೆಲಸ ಮಾಡುತ್ತಿರುವ ಈ ವೃತ್ತದಲ್ಲಿ ಒತ್ತುವರಿ ತೆರವು, ಕಳ್ಳ ಸಾಗಣೆ ತಡೆಗಟ್ಟಲು ಅರಣ್ಯ ಇಲಾಖೆ ಯಶಸ್ವಿಯಾಗಿದೆ. 20 ಲಕ್ಷ ಎಕರೆ ಅರಣ್ಯ ಪ್ರದೇಶ ಹೊಂದಿದ್ದರೂ ಗ್ರಾಮ ಅರಣ್ಯ ಸಮಿತಿ, ಸ್ಥಳೀಯ ನಾಗರಿಕರ ಸಹಕಾರದಿಂದ ಕಳೆದ ನಾಲ್ಕು ವರ್ಷಗಳಿಂದ ಕೆನರಾ ವೃತ್ತದ ಅರಣ್ಯ ಬೆಂಕಿಯಿಂದ ರಕ್ಷಣೆಯಾಗಿದೆ. ಎಲ್ಲೂ ಬೆಂಕಿ ಬಿದ್ದ ಪ್ರಕರಣಗಳು ವರದಿಯಾಗಿಲ್ಲ’ ಎಂದರು.‘ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನಗೊಳಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಕಿರಿಯ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ. ಗ್ರಾಮಗಳಲ್ಲಿ ಸರ್ವೆ ನಡೆಸುವ ಅರಣ್ಯ ರಕ್ಷಕರು, ವೀಕ್ಷಕರು ಜನರಿಗೆ ಅನ್ಯಾಯ ಆಗದಂತೆ ಕೆಲಸ ನಿರ್ವಹಿಸಬೇಕು’ ಎಂದರು.ಸಂಘಟನೆಯ ಕೆನರಾ ವೃತ್ತದ ಅಧ್ಯಕ್ಷ ಮಂಜುನಾಥ ಗೌಡ ಮಾತನಾಡಿ, ‘ಅರಣ್ಯ ರಕ್ಷಕರಿಗೆ ಮುಂಬಡ್ತಿ ನೀಡಬೇಕು, ಶಿರಸಿ ವಿಭಾಗದಲ್ಲಿ ನೀಡುವಂತೆ ಸಾರಿಗೆ ಭತ್ಯೆಯನ್ನು ಕೆನರಾ ವೃತ್ತದ ಎಲ್ಲ ವಿಭಾಗಗಳಿಗೆ ವಿಸ್ತರಿಸಬೇಕು. ಚೆಕ್‌ಪೋಸ್ಟ್, ಸಂಚಾರಿ ದಳ, ಸಸ್ಯಪಾಲನಾ ವಿಭಾಗದಲ್ಲಿ ಕೆಲಸ ಮಾಡುವವರಿಗೂ ವಿಶೇಷ ಭತ್ಯೆ ನೀಡಬೇಕು. ಅರಣ್ಯ ರಕ್ಷಕರ ಸಮಸ್ಯೆ ಅರಿಯಲು ಆರು ತಿಂಗಳಿಗೊಮ್ಮೆ ಸಭೆ ಕರೆಯಬೇಕು’ ಎಂದರು.ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರಾದ ಅಂಕೋಲಾ ವಲಯದ ನವೀನ್‌ ಶೆಟ್ಟಿ, ಜಗಲ್‌ಬೇಟ್‌ ವಲಯದ ವಿನೋದ್‌ ಬಾಂಬಳೇಕರ್‌, ಇಡಗುಂದಿ ವಲಯದ ಸಂತೋಷ್‌ ಪವಾರ್‌ ಅವರನ್ನು ಸನ್ಮಾನಿಸಲಾಯಿತು.ದಾಂಡೇಲಿ ವನ್ಯಜೀವಿ ವಿಭಾಗದ ನಿರ್ದೇಶಕ ಬಿ.ಬಿ. ಮಲ್ಲೇಶ್‌,  ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್‌, ಯಲ್ಲಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ. ವೆಂಕಟೇಶ, ಹಳಿಯಾಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚೌವ್ಹಾಣ, ಹೊನ್ನಾವರ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ರಮೇಶ, ಉಪ ಅರಣ್ಯ ಸಂರಕ್ಷಣಾಧಿಕಾರಿ ಆರ್.ಎಚ್.ನಾಯ್ಕ, ದಾಂಡೇಲಿ ಎಸಿಎಫ್ ಯು.ಡಿ.ನಾಯ್ಕ, ಶಿರಸಿ ಎಸಿಎಫ್ ಎಸ್.ಜಿ.ಹೆಗಡೆ, ತಟ್ಟಿಹಳ್ಳ ತರಬೇತಿ ಕೇಂದ್ರದ ಎಸಿಎಫ್ ನಟರಾಜ ದೇಸಾಯಿ, ಶಿರಸಿ ಅರಣ್ಯ ಕಾಲೇಜಿನ ಡೀನ್ ಎಸ್.ಎಲ್. ಮಡಿವಾಳರ್, ವಲಯ ಅರಣ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಬಿ.ಎನ್.ವಿರೇಶ ನಾಯ್ಕ, ಕೆನರಾ ವೃತ್ತ ಉಪವಲಯ ಅರಣ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಎಂ.ಟಿ.ನಾಯ್ಕ ಉಪಸ್ಥಿತರಿದ್ದರು. ಇಂದಿರಾ ನಾಯ್ಕ, ಮಲ್ಲಿಕ್‌ ನದಾಫ್‌   ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry