ಗುರುವಾರ , ಜೂನ್ 17, 2021
27 °C
ಮನ ಸೆಳೆದ 14ನೇ ತಂಡದ ನಿರ್ಗಮನ ಪಥಸಂಚಲನ

‘ಕಾನ್‌ಸ್ಟೆಬಲರು ಬುದ್ಧಿವಂತರು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಅಪರಾಧದ ಮೂಲವನ್ನು ಕಂಡುಹಿಡಿದು ಅಪರಾಧಿಗಳನ್ನು ವಶಕ್ಕೆ ತೆಗೆದುಕೊಳ್ಳಲು ಪೊಲೀಸ್ ಅಧಿಕಾರಿಗಳಿಗಿಂತ ಕಾನ್‌ಸ್ಟೆಬಲರು ಬುದ್ಧಿವಂತರು ಎಂದು ಪೊಲೀಸ್ ಮಹಾನಿರ್ದೇಶಕ (ತರಬೇತಿ) ಸುಶಾಂತ ಮಹಾಪಾತ್ರ ಹೇಳಿದರು.ನಗರದ ಪೊಲೀಸ್ ಪರೇಡ್‌ ಮೈದಾನದಲ್ಲಿ ಸೋಮವಾರ ನಡೆದ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ ೧೪ನೇ ತಂಡದ ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲರ ನಿರ್ಗಮನ ಪಥಸಂಚಲನ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.ಕಾನ್‌ಸ್ಟೆಬಲ್‌ಗಳಿಗೆ ನೀಡುವ ತರಬೇತಿಯು ಐಪಿಎಸ್, ಪಿಎಸ್‌ಐಗಳಿಗೆ ನೀಡುವ ತರಬೇತಿಗೆ ಹೆಚ್ಚಿನ ವ್ಯತ್ಯಾಸವಿರುವುದಿಲ್ಲ. ಕಾನ್‌ ಸ್ಟೆಬಲ್‌ಗಳು ಸಾಮಾಜಿಕ ದೃಷ್ಟಿಕೋನ ದಿಂದ ತರಬೇತಿಯನ್ನು ಪಡೆಯಬೇಕು. ಇದರಿಂದ ಸಮಾಜದಲ್ಲಿ ನಡೆಯುವ ಯಾವುದೇ ಅಪರಾಧಗಳನ್ನು ಪತ್ತೆ ಹಚ್ಚುವಲ್ಲಿ ನೆರವಾಗುತ್ತದೆ ಎಂದರು.ಈ ಮೊದಲು ಪೊಲೀಸ್ ಇಲಾಖೆ ಅಪರಾಧ ನಿಗ್ರಹ ಮಾಡುವುದಕ್ಕೆ ಮಾತ್ರ ಅಣಿಯಾಗಿತ್ತು. ಆದರೆ ಪರಿಸ್ಥಿತಿ ಬದಲಾಗಿದ್ದರಿಂದ ಪೊಲೀಸರಿಗೆ ಶಸ್ತ್ರಗಳು ಅವಶ್ಯಕವಾಗಿ ಬೇಕಾಗಿವೆ. ತರಬೇತಿಯಲ್ಲಿ ಉಗ್ರವಾದ, ನಕ್ಸಲ್‌ ನಿಗ್ರಹ, ಆಂತರಿಕ ಭದ್ರತೆ, ಸಂಪರ್ಕ ಮತ್ತು ಕೌಶಲ, ಕಂಪ್ಯೂಟರ್ ತರಬೇತಿ, ಇಂಟರ್‌ನೆಟ್, ಜಿಪಿಎಸ್, ಮೊಬೈಲ್ ಬಳಕೆಗಳಿಂದಾಗುವ ಅಪರಾಧವನ್ನು ತಡೆಹಿಡಿಯಲು ಸಿಸಿ ಟಿವಿ, ಗೂಗಲ್ ಅರ್ಥ್‌ ಬಳಕೆಯ ಬಗ್ಗೆ ತಿಳಿಹೇಳಲು ವಿಷಯ ಸೇರ್ಪಡೆ ಮಾಡಲಾಗಿದೆ. ಇನ್ನುಮುಂದೆ ಸಮಗ್ರ ಕಲಿಕಾ ಕ್ರಮ ಪರಿಚಯಿಸಲಾಗುತ್ತದೆ.  ಪೊಲೀಸರು ಪ್ರತಿದಿನ ದಿನಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಲಾಠಿ ಡ್ರಿಲ್‌ಗಳಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ತಿಳಿಸಿದರು.ಒಳಾಂಗಣ ತರಬೇತಿಯಲ್ಲಿ ಪ್ರಕಾಶ ಭಜಂತ್ರಿ (ಪ್ರಥಮ), ಮಾಳಪ್ಪ (ದ್ವಿತೀಯ), ಹೋರಾಂಗಣದಲ್ಲಿ ರಾಘವೇಂದ್ರ ಎಂ.ಎಸ್. (ಪ್ರಥಮ) , ಸಿದ್ದಪ್ಪ ಮನ್ಯಾಳ (ದ್ವಿತೀಯ), ನಾಗರಾಜ ಎಂ.ಎ. (ಅತ್ಯುತ್ತಮ ಗುರಿಗಾರ) ಹಾಗೂ  ಶಿವಾನಂದ ಎಸ್.ಎಸ್. (ಸರ್ವೋತ್ತಮ ಶ್ರೇಷ್ಠ) ಬಹುಮಾನ ಪಡೆದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮೀತ್ ಸಿಂಗ್ ಸ್ವಾಗತಿಸಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಕಾಶಿನಾಥ ತಳಕೇರಿ ಪ್ರತಿಜ್ಞಾ ವಿಧಿ ಬೋಧಿಸಿದರು. ಚಿಂಚೋಳಿ ಡಿಎಸ್‌ಪಿ ರವಿ ಪಾಟೀಲ್ ವಂದಿಸಿದರು. ಕಾರ್ಯ ಕ್ರಮದಲ್ಲಿ ಈಶಾನ್ಯ ವಲಯ ಪೊಲೀಸ್ ಮಹಾನಿರೀಕ್ಷಕ ಡಾ.ಸುರೇಶ ಕುನ್ಹಿ ಮೊಹಮ್ಮದ್, ಪೊಲೀಸ್ ಅಧಿಕಾರಿ ಗಳು, ಕಾನ್‌ಸ್ಟೆಬಲ್‌ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.