ಮಂಗಳವಾರ, ಜನವರಿ 21, 2020
28 °C

‘ಕಾಳಿದಾಸನ ಕುಮಾರ ಸಂಭವ’ ಬೊಂಬೆಯಾಟ

–ಎಚ್‌.ಅನಿತಾ Updated:

ಅಕ್ಷರ ಗಾತ್ರ : | |

ಮರದಿಂದ ಕೆತ್ತಲಾದ, ಸಾಂಪ್ರದಾಯಿಕ ಮುದ್ರಿಕಾ ಶೈಲಿಯ ಸೂತ್ರ ಸಲಾಕಿ ಬೊಂಬೆಯಾಟದಲ್ಲಿ ಎತ್ತಿದ ಕೈ ಎನಿಸಿರುವ ದತ್ತಾತ್ರೇಯ ಅರಳೀಕಟ್ಟೆ ಅವರು ಶನಿವಾರ ಮತ್ತು ಭಾನುವಾರ (21 ಮತ್ತು 22) ‘ಕಾಳಿದಾಸನ ಕುಮಾರ ಸಂಭವ’ ಬೊಂಬೆಯಾಟನ್ನು ಮಹಾತ್ಮ ಗಾಂಧಿ ರಸ್ತೆಯ ‘ರಂಗೋಲಿ ಮೆಟ್ರೋ ಕಲಾ ಕೇಂದ್ರ’ದಲ್ಲಿ ಆಯೋಜಿಸಿದ್ದಾರೆ.‘ಕಾಳಿದಾಸನ ಕುಮಾರ ಸಂಭವ’ವು ಭಾರತೀಯ ಸಂಸ್ಕೃತಿ, ಆಚಾರ–ವಿಚಾರ, ನಡೆನುಡಿಗಳ ಕುರಿತಾಗಿ ಜ್ಞಾನವನ್ನು ನೀಡಲಿದೆ. ಅಲ್ಲದೇ ಬೊಂಬೆಯಾಟಕ್ಕೆ ಪೂರಕವಾಗಿ ಬಳಸಿರುವ ಕರ್ನಾಟಕ ಸಂಗೀತದ ಛಾಯೆ ಹೊಂದಿರುವ ಆಡುಭಾಷೆಯ ಸೊಗಡು ಎಲ್ಲರಿಗೂ ಇಷ್ಟವಾಗುತ್ತದೆ’ ಎಂದು ಹೇಳುತ್ತಾರೆ ದತ್ತಾತ್ರೇಯ ಅರಳೀಕಟ್ಟೆ.‘ರಂಗನಾಥ್‌ ಅರಳೀಕಟ್ಟೆ, ಎಚ್‌.ಎನ್‌.ರಾಮಕೃಷ್ಣ, ಎಚ್‌.ಎನ್‌. ಆನಂದಮೂರ್ತಿ, ಜ್ಯೋತ್ಸ್ನಾ, ವಿಜಯ್‌, ಬಾಲರತ್ನಂ ಹೀಗೆ ಅನೇಕ ಕಲಾವಿದರ ಬಳಗ ನಮ್ಮೊಂದಿಗೆ ಇದೆ. ಪೌರಾಣಿಕ ಕಥೆಗಳ ಆಟಕ್ಕೆ ಆಧುನಿಕ ತಂತ್ರಜ್ಞಾನ, ವಿಜ್ಞಾನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿರುವುದು ಸೂತ್ರ ಸಲಾಕಿ ಬೊಂಬೆಯಾಟದ ವಿಶೇಷ’ ಎನ್ನುತ್ತಾರೆ ಅವರು.ಶನಿವಾರ ಮತ್ತು ಭಾನುವಾರ ಸಂಜೆ 4.30ರಿಂದ 5.30 ಹಾಗೂ 6.30ರಿಂದ 7.30ರವರೆಗೆ ‘ಕಾಳಿದಾಸನ ಕುಮಾರ ಸಂಭವ’ ಸೂತ್ರ ಸಲಾಕಿ ಬೊಂಬೆಯಾಟ ಒಟ್ಟು ನಾಲ್ಕು ಪ್ರದರ್ಶನಗಳನ್ನು ಒಳಗೊಂಡಿದೆ.ಮೂರು ಭಾಷೆಗಳಲ್ಲಿ ಆಟ

ಮೂಲತಃ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲ್ಲೂಕಿನ ಅರಳೀಕಟ್ಟೆಯವರಾದ ದತ್ತಾತ್ರೇಯ ಕಳೆದ 32 ವರ್ಷಗಳಿಂದ ಸೂತ್ರ ಸಲಾಕಿ ಬೊಂಬೆಯಾಟ ಆಡಿಸುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಎಂ.ಆರ್‌.ರಂಗನಾಥರಾಯರ ಶಿಷ್ಯರೂ ಹೌದು.

ದೇಶ ವಿದೇಶಗಳಲ್ಲಿ ಹಲವು ಪ್ರದರ್ಶನಗಳನ್ನು ನೀಡಿರುವ ಇವರು ಎರಡು ಬಾರಿ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾದವರು. ಬೊಂಬೆಗಳ ಕೆತ್ತನೆ, ಅವುಗಳಿಗೆ ವಸ್ತ್ರ ವಿನ್ಯಾಸ ಹೀಗೆ ಬೊಂಬೆಯಾಟಕ್ಕೆ ಬೇಕಾದ ಸಕಲ ತಯಾರಿಗಳನ್ನು ಸ್ವತಃ ಇವರೇ ಮಾಡುತ್ತಾರೆ. ‘ಶ್ರೀಕೃಷ್ಣ ತುಲಾಭಾರ’, ‘ಗಿರಿಜಾ ಕಲ್ಯಾಣ’, ‘ಲಂಕಾದಹನ’... ಹೀಗೆ ಹತ್ತು ಹಲವು ಪೌರಾಣಿಕ ಆಟಗಳಲ್ಲದೆ, ಪ್ರಸ್ತುತ ಪರಿಸರ ಮಾಲಿನ್ಯ, ಜನಸಂಖ್ಯಾ ಸ್ಫೋಟ, ಹೆಣ್ಣು ಮಕ್ಕಳ ಶಿಕ್ಷಣ, ಆಹಾರ ಸಮಸ್ಯೆಯಂಥ ವಿಷಯಗಳ ಕುರಿತಾಗಿಯೂ ತಮ್ಮ ಬೊಂಬೆಯಾಟದಲ್ಲಿ ಚರ್ಚಿಸಿದ್ದಾರೆ.ಕನ್ನಡದಲ್ಲಿ ಮಾತ್ರವಲ್ಲದೆ ತಮಿಳು, ತೆಲುಗು ಭಾಷೆಗಳಲ್ಲಿಯೂ ಆಟಗಳನ್ನು ಆಡಿಸಿರುವುದು ಇವರ ವಿಶೇಷ. ಶೈಕ್ಷಣಿಕವಾಗಿಯೂ  ಹಲವು ಪ್ರಯೋಗಗಳನ್ನು ನಡೆಸಿರುವ ಇವರು ಶಿವರಾಮ ಕಾರಂತರ ‘ಕಿಸಾ ಗೌತಮಿ’ ನಾಟಕದ ಸೂತ್ರ ಸಲಾಕಿ ಬೊಂಬೆಯಾಟದ ಪ್ರದರ್ಶನ  ನೀಡುತ್ತಾರೆ. ಅದು ಇವರ ಪ್ರದರ್ಶನಗಳಲ್ಲಿ ಪ್ರಮುಖವಾದದ್ದು.

–ಎಚ್‌.ಅನಿತಾ

ಪ್ರತಿಕ್ರಿಯಿಸಿ (+)