‘ಕಿರುತೆರೆಗೆ ತೆಳ್ಳಗಿರುವವರು ಬೇಡ’

7

‘ಕಿರುತೆರೆಗೆ ತೆಳ್ಳಗಿರುವವರು ಬೇಡ’

Published:
Updated:

ತುಟಿಯರಳಿಸಿ ಕಿರುನಗು ಸೂಸುವ ನಟಿ ಅಶ್ವಿನಿ ಅವರ ಕಣ್ಣು ತುಂಬ ಕನಸಿದೆ. ಬಣ್ಣಬಣ್ಣದ ಕನಸು ಹೊತ್ತು ಚಿತ್ರರಂಗಕ್ಕೆ ಬಂದ ಅಶ್ವಿನಿಗೆ ಬೆಳ್ಳಿತೆರೆಗಿಂತ ಕಿರುತೆರೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿತು. ಜನ ಗುರ್ತಿಸುವಂತಹ ಪಾತ್ರಗಳಲ್ಲಿ ನಟಿಸಬೇಕು ಎಂಬುದು ಅವರ ಸದ್ಯದ ನಿಲುವು. ಮೊದಲು ತೆಳ್ಳಗೆ ಬೆಳ್ಳಗೆ ಲತೆಯಂತೆ ಇದ್ದ ಅಶ್ವಿನಿ ಈಗ ದುಂಡು ದುಂಡಾಗಿದ್ದಾರೆ. ನಕ್ಕಾಗ ಕೆನ್ನೆ ಮೇಲೆ ಗುಳಿ ಬೀಳುತ್ತವೆ. ‘ಮೊದಲಿಗಿಂತ ಸ್ವಲ್ಪ ದಪ್ಪಗಾಗಿದ್ದೀರಾ ಅಲ್ವಾ?’ ಎಂಬ ಪ್ರಶ್ನೆಗೆ ಅವರು ಉತ್ತರವೆಂಬಂತೆ ಮಾತನಾಡಿದ್ದಾರೆ. ಓದಿ...‘ಇತ್ತೀಚಿನ ದಿನಗಳಲ್ಲಿ ನಟಿಯರಿಗಿಂತ ನಟರು ಹೆಚ್ಚು ಪ್ರಯೋಗಶೀಲರು ಅನಿಸುತ್ತದೆ. ಒಂದು ಸಿನಿಮಾ ಒಪ್ಪಿಕೊಂಡರೆ ಆ ಪಾತ್ರ ನಿರ್ವಹಿಸಲು ಬೇಕಾಗುವ ದೇಹಾಕಾರ ಪಡೆಯಲು ಅವರು ಸಾಕಷ್ಟು ಪರಿಶ್ರಮ ಹಾಕುತ್ತಾರೆ. ಒಪ್ಪಿಕೊಂಡ ಪಾತ್ರ ಹುರಿಗಟ್ಟಿದ ಮೈ ಬೇಡುವಂತಿದ್ದರೆ ದೇಹ ದಂಡಿಸುತ್ತಾರೆ. ತೂಕ ಕಳೆದುಕೊಳ್ಳಬೇಕು ಅಂತಿದ್ದರೆ, ಡಯೆಟ್‌ ಮಾಡಿ ಸಪೂರರಾಗುತ್ತಾರೆ. ಹೀಗೆ ನಟಿಯರಿಗಿಂತ ಚಿತ್ರರಂಗದಲ್ಲಿ ನಟರು ಹೆಚ್ಚು ಪ್ರಯೋಗಶೀಲರು.ಸಿನಿಮಾದಲ್ಲಿ ನಟಿಸುವಾಗ ನನ್ನಲ್ಲೂ ಸಾಕಷ್ಟು ಫಿಟ್‌ನೆಸ್‌ ಕಾಳಜಿ ಇತ್ತು. ಸಿನಿಮಾದಿಂದ ಕಿರುತೆರೆಯತ್ತ ಹೊರಳಿದಾಗ ನನ್ನ ಫಿಟ್‌ನೆಸ್‌ ಕ್ರಮದಲ್ಲೂ ಬದಲಾವಣೆ ಆಯ್ತು. ಸಿನಿಮಾ ನಟಿಯಾಗಬೇಕಾದರೆ ತೆಳ್ಳಗೆ, ಬೆಳ್ಳಗೆ ಬಳುಕುವ ಲತೆಯಂತಿರಬೇಕು. ಮೊದಲು ನಾನೂ ಹಾಗೆಯೇ ಇದ್ದೆ. ಆದರೆ, ಕಿರುತೆರೆಯಲ್ಲಿ ಅವಕಾಶ ಗಿಟ್ಟಿಸಬೇಕಾದರೆ, ನಟಿಯಾಗಬೇಕಾದರೆ ಇರುವ ಮಾನದಂಡವೇ ಬೇರೆ. ಕಿರುತೆರೆ ನಟಿಯರು ತೆಳ್ಳಗಿದ್ದರೆ ಯಾರನ್ನೂ ಆಕರ್ಷಿಸುವುದು ಸಾಧ್ಯವಿಲ್ಲ.ಸಿನಿಮಾ ಮತ್ತು ಕಿರುತೆರೆ ನಟಿಯರ ಫಿಟ್‌ನೆಸ್‌ ನಡುವೆ ಇರುವ ದೊಡ್ಡ ಅಂತರವಿದು. ಬಹುತೇಕ ಗೃಹಿಣಿಯರು ಇಂದು ಧಾರಾವಾಹಿ ಸನ್ನಿಗೆ ಒಳಗಾದವರು. ಕಿರುತೆರೆ ನಟಿಯರು ವೀಕ್ಷಕರ ಮನಸ್ಸಿಗೆ ಹತ್ತಿರವಾಗುವಂಥ ಮೈಕಟ್ಟು ಹೊಂದಿರಬೇಕು. ಇದು ಕಿರುತೆರೆಯ ಅಲಿಖಿತ ಸಿದ್ಧಾಂತ. ಹಾಗಾಗಿ, ಕಿರುತೆರೆ ಪಾತ್ರಧಾರಿಗಳು ತೆಳ್ಳಗೆ ಇರುವುದಕ್ಕಿಂತ ಹೆಚ್ಚಾಗಿ ಮೈಕೈ ತುಂಬಿಕೊಂಡು ಚೆನ್ನಾಗಿರುತ್ತಾರೆ. ನಾನೀಗ ಕಿರುತೆರೆಯಲ್ಲಿ ಹೆಚ್ಚು ಸಕ್ರಿಯವಾಗಿರುವುದರಿಂದ ಡಯೆಟ್‌ಗಿಂತ ಹೆಚ್ಚಾಗಿ ಔಟ್‌ಲುಕ್‌ನ ಕಡೆಗೆ ಹೆಚ್ಚು ಗಮನ ಹರಿಸುತ್ತೇನೆ.ಕಿರುತೆರೆ ಕಲಾವಿದರಿಗೆ ಶರೀರಕ್ಕಿಂತ ಹೆಚ್ಚಾಗಿ ಮೆದುಳಿಗೆ ಶ್ರಮ ಆಗುತ್ತದೆ. ಹಾಗಾಗಿ ದೇಹ ಮತ್ತು ಮನಸ್ಸನ್ನು ಲವಲವಿಕೆಯಿಂದ ಇರಿಸಿಕೊಳ್ಳಲು ನಾನು ನಿತ್ಯ ಒಂದು ಗಂಟೆ ವಾಕಿಂಗ್‌ ಮಾಡುತ್ತೇನೆ. ಶೂಟಿಂಗ್‌ ವೇಳೆ ಕ್ಯಾಮೆರಾ ಎದುರಿಸುವುದರಿಂದ ಕಣ್ಣಿಗೆ ಸಿಕ್ಕಾಪಟ್ಟೆ ಆಯಾಸವಾಗುತ್ತದೆ.ಹಾಗಾಗಿ ಚಿತ್ರೀಕರಣ ಇಲ್ಲದ ದಿನದಂದು ಕಣ್ಣಿನ ಆಯಾಸ ನೀಗಿಸಿಕೊಳ್ಳಲು ಹತ್ತಿಯಲ್ಲಿ ಅದ್ದಿದ ರೋಸ್‌ ವಾಟರನ್ನು ಕಣ್ಣರೆಪ್ಪೆಯ ಮೇಲೆ ಇಟ್ಟುಕೊಳ್ಳುತ್ತೇನೆ. ತಪ್ಪದೇ ತಲೆಗೆ ಹರಳೆಣ್ಣೆ ಹಚ್ಚಿಕೊಳ್ಳುತ್ತೇನೆ. ಇವೆಲ್ಲವೂ ದೇಹದ ಉಷ್ಣತೆ ತಗ್ಗಿಸಿ ತಂಪು ಅನುಭವ ಹೊಂದಲು ಸಹಕರಿಸುತ್ತವೆ.ಇನ್ನು ಮುಖದ ಕಾಂತಿ ಕಳೆಗುಂದದಂತೆ ನೋಡಿಕೊಳ್ಳುವುದು ಒಂದು ಸವಾಲು. ಶೂಟಿಂಗ್‌ ಇದ್ದಾಗ ಮೇಕಪ್‌ ಮಾಡಿಕೊಳ್ಳಲೇಬೇಕು. ಮೇಕಪ್‌ ಹಚ್ಚಿಸಿಕೊಳ್ಳುವಾಗ ತೋರುವ ಕಾಳಜಿಯನ್ನು ತೆಗೆಯುವಾಗಲೂ ತೋರಬೇಕು. ಮೇಕಪ್‌ ತೆಗೆಯವುದೂ ಒಂದು ಕಲೆ. ನಾನು ಮೇಕಪ್‌ ತೆಗೆದ ನಂತರವಷ್ಟೇ ಮಲಗುವುದು.ಮೊದಲು ಮೇಕಪ್‌ ರಿಮೂವಲ್‌ ಕ್ರೀಮನ್ನು ನೀಟಾಗಿ ಮುಖಕ್ಕೆ ಹಚ್ಚಿಕೊಳ್ಳುತ್ತೇನೆ. ಆನಂತರ ಮುಖ ತೊಳೆದು ವಿಟಮಿನ್‌–ಇ ಹಾಗೂ ಬಾದಾಮಿ ಎಣ್ಣೆಯನ್ನು ಮಿಶ್ರಣ ಮಾಡಿ ಹಚ್ಚಿಕೊಳ್ಳುತ್ತೇನೆ. ಇದು ಮುಖದ ಕಾಂತಿಯನ್ನು ಹೆಚ್ಚಿಸಿ ಹೆಚ್ಚು ತಾಜಾ ಆಗಿ ಇರಿಸುತ್ತದೆ. ಮುಖ ಕಾಂತಿ ಹೆಚ್ಚಿಸಿಕೊಳ್ಳಲು ನಾನು ಡ್ರೈ ಫ್ರೂಟ್ಗಳನ್ನು ಹೆಚ್ಚು ಸೇವಿಸುತ್ತೇನೆ. ಚಳಿಗಾಲದ ಸಮಯದಲ್ಲಿ ತ್ವಜೆಯನ್ನು ಮೃದುವಾಗಿ ಇರಿಸಿಕೊಳ್ಳಲು ವಿಟಮಿನ್‌–ಇ ಎಣ್ಣೆ ಬಳಸುತ್ತೇನೆ.ಊಟ, ತಿಂಡಿ ಸೇವನೆಯಲ್ಲಿ ಯಾವುದೇ ಕಟ್ಟುಪಾಡು ವಿಧಿಸಿಕೊಂಡಿಲ್ಲ. ಚಿತ್ರೀಕರಣ ಇರುವ ವೇಳೆ ಬಿಟ್ಟರೆ ನಾನು ಹೊರಗಡೆ ಊಟ ತಿನ್ನುವುದು ಕಮ್ಮಿ. ಮನೆ ಊಟವನ್ನು  ಮಿಸ್‌ ಮಾಡಿಕೊಂಡಿದ್ದೇ ಇಲ್ಲ. ಊಟದಲ್ಲಿ ಹೆಚ್ಚಿನ ಎಣ್ಣೆ ಅಂಶ ಇರುವ ತಿನಿಸುಗಳು ಇರದಂತೆ ನೋಡಿಕೊಳ್ಳುತ್ತೇನೆ. ಸ್ವಲ್ಪ ತಿಂದರೂ ಅಚ್ಚುಕಟ್ಟಾಗಿ ತಿನ್ನಬೇಕು ಎಂಬುದು ನನ್ನ ನಿಯಮ. ಹಾಗಾಗಿ ಊಟದ ವಿಚಾರದಲ್ಲಿ ನಾನು ಯಾವತ್ತೂ ಕಾಂಪ್ರಮೈಸ್‌ ಆಗಿದ್ದಿಲ್ಲ.ಬಣ್ಣದ ಜಗತ್ತಿನಲ್ಲಿ ಬದುಕಬೇಕಾಗಿರುವುದರಿಂದ ಸೌಂದರ್ಯವನ್ನು ಕಾಯ್ದಿಟ್ಟುಕೊಳ್ಳುವುದು ಮುಖ್ಯ. ಹಾಗಾಗಿ ನಿಯಮಿತವಾಗಿ ಸ್ಪಾಗೆ ಹೋಗುವ ಅಭ್ಯಾಸವಿರಿಸಿಕೊಂಡಿದ್ದೇನೆ. ಹೆಡ್‌ ಮಸಾಜ್ ಹಾಗೂ ಫೇಶಿಯಲ್‌ ಮಸಾಜ್‌ ಮಾಡಿಸಿಕೊಳ್ಳುವುದು ತುಂಬ ಇಷ್ಟ. ಸ್ಪಾಗೆ ಹೋಗುವುದರಿಂದ ದೇಹಕ್ಕೂ ಹೊಸ ಚೈತನ್ಯ ಸಿಗುತ್ತದೆ. ಮನಸ್ಸು ಲವಲವಿಕೆಯಿಂದ ಇರುತ್ತದೆ.ಜನ ನಮ್ಮನ್ನು ಗುರ್ತಿಸುವಂತಹ ಪಾತ್ರಗಳಲ್ಲಿ ನಟಿಸಬೇಕು ಎಂಬ ಆಸೆ ಎಲ್ಲ ಕಲಾವಿದರಿಗೆ ಇರುತ್ತದೆ. ಜನ ನನ್ನನ್ನು ಬೆಳ್ಳಿತೆರೆಗಿಂತ ಹೆಚ್ಚಾಗಿ ಕಿರುತೆರೆಯಲ್ಲಿ ಇಷ್ಟಪಟ್ಟರು. ನಾನು ನಿರ್ವಹಿಸಿದ ಪಾತ್ರಗಳಿಂದಲೇ ಜನ ಗುರ್ತಿಸಿದಾಗ ಮನಸ್ಸು ಹಿಗ್ಗುತ್ತದೆ. ಅಭಿನಯಿಸಿದ ಧಾರಾವಾಹಿಯಲ್ಲಿನ ಪಾತ್ರ ಪ್ರೇಕ್ಷಕರಿಗೆ ಇಷ್ಟವಾದಂತೆ ನಾವು ಅವರಿಗೆ ತುಂಬ ಹತ್ತಿರವಾಗುತ್ತೇವೆ. ಜನರ ಪ್ರೀತಿಗೆ ಪಾತ್ರರಾದ ಮೇಲೆ ಹೋದಲ್ಲೆಲ್ಲಾ ನಮ್ಮನ್ನು ಪ್ರೀತಿಯಿಂದ ಮಾತನಾಡಿಸುತ್ತಾರೆ. ಹೆಣ್ಣು ಮಕ್ಕಳಿಗಿಂತ ಹೆಚ್ಚಾಗಿ ಗಂಡು ಮಕ್ಕಳು ನನ್ನ ಅಭಿಮಾನಿಗಳಾಗಿದ್ದಾರೆ. ಇವೆಲ್ಲವೂ ಒಬ್ಬ ಕಲಾವಿದೆಯಾಗಿ ತೃಪ್ತಿ ನೀಡುವ ಸಂಗತಿಗಳು.ಅಂದಹಾಗೆ, ಸದ್ಯಕ್ಕೆ ನಾನೀಗ ‘ಬಸವಣ್ಣ’ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದೇನೆ. ಕಿರುತೆರೆಯಲ್ಲಿ ‘ಮಹಾಪರ್ವ’, ‘ಕರ್ಪೂರದ ಗೊಂಬೆ’ ಮತ್ತು ‘ಭಕ್ತ ಕನಕದಾಸ’ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ’.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry