‘ಕಿವಿ’ಯ ಕಿತಾಪತಿ.. ತೇಜಸ್ವಿ ಫಜೀತಿ!

7

‘ಕಿವಿ’ಯ ಕಿತಾಪತಿ.. ತೇಜಸ್ವಿ ಫಜೀತಿ!

Published:
Updated:

ಬೆಂಗಳೂರು: ‘ಮಾರ, ಓ ಮಾರ... ನನ್ನ ಇನ್ನೊಂದು ಚಪ್ಪಲಿ ಎಲ್ಲೋ?’

‘ಕಳ್ಳರನ್ನ ಮನೆಯಲ್ಲಿ ಇಟ್ಕೊಂಡು ಊಟ ಹಾಕಿ ಸಾಕಿದ್ರೆ ಇನ್ನೇನಾಗುತ್ತೆ, ಅಯ್ಯ?’

–ಚಿತ್ರಕಲಾ ಪರಿಷತ್‌ ಅಂಗಳದಲ್ಲಿ ಮಂಗಳವಾರ ನಡೆದ ತೇಜಸ್ವಿ ಪರಿಸರ ಕಥಾ ಪ್ರಸಂಗದ ಸಂಭಾಷಣೆ ಇದು. ಪೂರ್ಣಚಂದ್ರ ತೇಜಸ್ವಿ ಅವರ ಪರಿಸರದ ಕಥೆಗಳು ಕೃತಿ ಆಧರಿಸಿ ಅ.ನಾ.ರಾವ್‌ ಜಾಧವ್‌ ರಚಿಸಿದ ನಾಟಕ ತೇಜಸ್ವಿ ಅಭಿಮಾನಿಗಳಿಗೆ ರಂಜನೆ ಒದಗಿಸಿತು.ನಾಯಿ ‘ಕಿವಿ’ಯ ಕಿತಾಪತಿ, ಮಾರ, ಪ್ಯಾರರ ನವ ಸಂಶೋಧನೆ, ಅದರಿಂದ ತೇಜಸ್ವಿ ಅನುಭವಿಸುವ ಫಜೀತಿಯನ್ನು ಮನೋಜ್ಞವಾಗಿ ತೆರೆದಿಟ್ಟಿತು. ಎಂದಿ­ನಂತೆ ತೇಜಸ್ವಿ ಚಪ್ಪಲಿ ಮೆಟ್ಟಲು ಬಂದರೆ ಅವುಗಳನ್ನು ಅದಲು–ಬದಲಾಗಿ ಇಡ­ಲಾಗಿತ್ತು. ಪ್ಯಾರನನ್ನು ‘ಏಕೆ ಹೀಗೆ ಮಾಡಿದ್ದು’ ಎಂದು ಕೇಳಿದರೆ, ‘ಮಾರ ಹಾಗೇ ಮಾಡಲು ಹೇಳಿದ್ದ’ ಎಂದು ಉತ್ತರಿಸಿದ. ಮಾರನನ್ನು ವಿಚಾರಿಸಿದರೆ ನಾಯಿ ಚಪ್ಪಲಿಯನ್ನು ಕದಿಯಬಾರದು ಎಂಬ ಉದ್ದೇಶದಿಂದ ಹಾಗೇ ಮಾಡಿಸಿದ್ದೆ ಎಂದ. ಅವನ ಜಾಣತನ ಕಂಡ ತೇಜಸ್ವಿ ಕಕ್ಕಾಬಿಕ್ಕಿಯಾಗಿದ್ದರು. ‘ಒಂದೇ ಚಪ್ಪಲಿ ಬಿಟ್ಟಿದೆ. ಅದನ್ನೂ ತಿನ್ನಬಾರದಿತ್ತೇ, ಆ ಒಂದು ಚಪ್ಪಲಿಯಿಂದ ಏನು ಪ್ರಯೋಜನ?’ ಎನ್ನುವ ಮಾರನ ಮಾತು ಕಚಗುಳಿ ಇಡುತ್ತಿತ್ತು.‘ದೇವರು ನಿಜವಾಗಲೂ ಇದ್ದಾನೇನೋ’ ಎಂದು ತೇಜಸ್ವಿ ಕೇಳಿದರೆ, ‘ಅಪ್ಪ–ಅಮ್ಮ ಇಲ್ಲದೆ ಮಕ್ಕಳು ಹೇಗೆ ಹುಟ್ಟು­ತ್ತವೆ’ ಎಂದು ಮಾರ ಪ್ರಶ್ನಿಸಿದ. ನಾಟಕ ಬೆಳೆದಂತೆ ಪರಿಸರದ ಕಥೆಗಳು ಒಂದೊಂದಾಗಿ ಮನದಂಗಳ­ದಲ್ಲಿ ಮೆರ­ವಣಿಗೆ ಹೋಗುತ್ತಿದ್ದವು. ಅ.ನಾ. ರಾವ್‌ ತೇಜಸ್ವಿ ಪಾತ್ರದಲ್ಲಿ, ಸಂಪತ್‌ಕುಮಾರ್‌ ಮಾರನ ಪಾತ್ರದಲ್ಲಿ ಮಿಂಚಿದರು.ಚಿತ್ರಕಲಾ ಪರಿಷತ್‌ ಮುಂದಿನ ಹುಲ್ಲಿನಹಾಸು ನಾಟಕ ನಡೆದ ಒಂದು ಗಂಟೆ ಅವಧಿಗೆ ಮೂಡಿಗೆರೆ ಕಾಡಾಗಿ ಮಾರ್ಪಟ್ಟಿತ್ತು. ಕೋಗಿಲೆ–ಕಾಜಾಣಗಳ ಕೂಗು ಕೇಳಿಬರುತ್ತಿತ್ತು. ತೇಜಸ್ವಿ ತೆಗೆದ ಪಕ್ಷಿಗಳ ಚಿತ್ರಗಳು ಅಲ್ಲೇ ಹತ್ತಿರದ ಗ್ಯಾಲರಿಯಲ್ಲಿ ಕಂಗೊಳಿಸುತ್ತಿದ್ದವು.ನಾಟಕ ಪ್ರದರ್ಶನಕ್ಕೂ ಮುನ್ನ ಕೃತಿ ಬಿಡುಗಡೆ ಸಮಾರಂಭ ನಡೆಯಿತು. ನಾಟಕದ ರೂಪಾಂತರವನ್ನು ಬಿಡುಗಡೆ ಮಾಡಿದ ವಿದ್ವಾಂಸ ಎಂ.ಎಚ್‌. ಕೃಷ್ಣಯ್ಯ, ತೇಜಸ್ವಿ ಅವರ ಜೊತೆಗಿನ ಒಡನಾಟವನ್ನು ಸ್ಮರಿಸಿಕೊಂಡರು. ಅವರ ಕೃತಿಗಳು ನಾವೇ ಮಲೆನಾಡಿನಲ್ಲಿ ಸಾಗುತ್ತಿರುವ ಅನುಭವವನ್ನು ಉಂಟು ಮಾಡುತ್ತವೆ ಎಂದು ಹೇಳಿದರು.‘ತೇಜಸ್ವಿ ವಿಜ್ಞಾನಿಗಿಂತ ಭಿನ್ನವಾದ ಪರಿಸರ ಜ್ಞಾನಿ. ಅಧ್ಯಾತ್ಮದ ಸೋಂಕಿಲ್ಲದ ಪೂರ್ಣತ್ವದ ತತ್ವಜ್ಞಾನಿ’ ಎಂದು ಬಣ್ಣಿಸಿದರು. ‘ವಿಶ್ವ ವಿಸ್ಮಯವೇ ಅವರಿಗೆ ಪೂರ್ಣತ್ವದ ಅನುಭವವನ್ನು ತಂದು ಕೊಟ್ಟಿತ್ತು. ಅವರ ಗದ್ಯದಲ್ಲಿ ಆಡು ನುಡಿ ಕಾವ್ಯವಾಗಿತ್ತು. ಅವರ ಬದುಕಿನಲ್ಲಿ ನಾದಮೇಳ ಇತ್ತು’ ಎಂದು ತಿಳಿಸಿದರು. ನವಕರ್ನಾಟಕ ಪ್ರಕಾಶನದ ರಾಜಾರಾಂ, ತೇಜಸ್ವಿ ಅವರೊಂದಿಗಿನ ಒಡನಾಟವನ್ನು ಹಂಚಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry