ಸೋಮವಾರ, ಮಾರ್ಚ್ 8, 2021
29 °C
ಅಧಿಕಾರಿಗಳಿಗೆ ಜಿಲ್ಲಾ ನೋಡಲ್‌ ಕಾರ್ಯದರ್ಶಿ ಕಾಂಬಳೆ ಸೂಚನೆ

‘ಕುಡಿಯುವ ನೀರು: ಶಾಶ್ವತ ಪರಿಹಾರಕ್ಕೆ ಆದ್ಯತೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕುಡಿಯುವ ನೀರು: ಶಾಶ್ವತ ಪರಿಹಾರಕ್ಕೆ ಆದ್ಯತೆ’

ಕಾರವಾರ: ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿಗೆ ತೊಂದರೆ ಉಂಟಾಗುವ ಗ್ರಾಮಗಳಿಗೆ ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸಲು ಪ್ರಸ್ತಾವಗಳನ್ನು ಸಿದ್ಧಪಡಿಸುವಂತೆ ಜಿಲ್ಲಾ ನೋಡಲ್ ಕಾರ್ಯದರ್ಶಿ ಎಂ.ಆರ್.ಕಾಂಬಳೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಜಿಲ್ಲೆಯ ಕುಡಿಯುವ ನೀರಿನ ಪರಿಸ್ಥಿತಿ ಕುರಿತ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯ ಒಟ್ಟು 6 ತಾಲ್ಲೂಕುಗಳ 24 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 54 ಗ್ರಾಮ/ಮಜರೆಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಪ್ರತಿ ದಿನ ಒಟ್ಟು 42 ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.ಕಾರವಾರ ಹಾಗೂ ಯಲ್ಲಾಪುರ ನಗರ ವ್ಯಾಪ್ತಿಯಲ್ಲಿ ಸಹ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿದೆ. ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ನದಿ ಹರಿಯುತ್ತಿದ್ದು, ಅದರಿಂದ ಈ ಗ್ರಾಮಗಳಿಗೆ ನೀರು ಪೂರೈಕೆ ಮಾಡುವ ಯೋಜನೆಗಳನ್ನು ರೂಪಿಸಬಹುದಾಗಿದೆ. ಕದ್ರಾ ಬಳಿಯಿರುವ ಸಾತೋಳಿ ಮತ್ತು ಬೋರೆ ಗ್ರಾಮಗಳಿಗೆ ಕದ್ರಾದಿಂದ ನೀರು ಪೂರೈಕೆ ಮಾಡಲು ಪ್ರಸ್ತಾವ ಸಿದ್ಧಪಡಿಸಿ ಸಲ್ಲಿಸಿ’ ಎಂದು ಅವರು ತಿಳಿಸಿದರು.ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ: ‘ಪೈಪ್‌ಲೈನ್‌ ಅಳವಡಿಕೆ, ಫ್ಲಷಿಂಗ್ ಇತ್ಯಾದಿ ಕುಡಿಯುವ ನೀರಿನ ಕಾಮಗಾರಿಗಳನ್ನು ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಬೇಕು. ಶಿರಸಿ ಪಂಚಾಯತ್‌ರಾಜ್‌ ಎಂಜಿನಿಯರಿಂಗ್ ವಿಭಾಗದಲ್ಲಿ 341 ಕಾಮಗಾರಿಗಳ ಪೈಕಿ 282 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಇದೇ ರೀತಿ ಕಾರವಾರ ವಿಭಾಗದಲ್ಲಿ 186 ಕಾಮಗಾರಿಗಳ ಪೈಕಿ 55 ಕಾಮಗಾರಿ ಪೂರ್ಣಗೊಳಿಸಲಾಗಿದೆ.ಪೂರ್ಣಗೊಳಿಸಲಾಗಿ ರುವ ಕಾಮಗಾರಿಗಳನ್ನು ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿ ತಪಾಸಣೆ ನಡೆಸಿ ವರದಿಯನ್ನು ಆದಷ್ಟು ಬೇಗನೆ ಸಲ್ಲಿಸಬೇಕು. ಕುಡಿಯುವ ನೀರಿನ ಅಭಾವ ಕುರಿತು ಸಾರ್ವಜನಿಕರಿಂದ ಅಹವಾಲುಗಳು ಬಂದ ತಕ್ಷಣ ಅಧಿಕಾರಿಗಳು ಸ್ಪಂದಿಸಬೇಕು. ಕುಡಿಯುವ ನೀರಿಗೆ ತೊಂದರೆ ಉಂಟಾಗದಂತೆ ಕ್ರಮ ವಹಿಸಬೇಕು’ ಎಂದು ಅವರು ಹೇಳಿದರು.ಜಿಲ್ಲಾಧಿಕಾರಿ ಸೂಚನೆ: ‘ಜಿಲ್ಲೆಯ ವಿವಿಧ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ನಗರೋತ್ಥಾನ ಯೋಜನೆ ಕಾಮಗಾರಿಗಳನ್ನು ಆಯಾ ಸ್ಥಳೀಯ ಸಂಸ್ಥೆಗಳ ಎಂಜಿನಿಯರ್ ಪರಿಶೀಲಿಸಬೇಕು. ಕಾಮಗಾರಿ ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಲು ಮತ್ತು ಗುಣಮಟ್ಟವನ್ನು ಖಾತ್ರಿಪಡಿಸುವ ಜವಾಬ್ದಾರಿ ಸ್ಥಳೀಯ ಸಂಸ್ಥೆಗಳಿಗೆ ಇದೆ’ ಎಂದು ಜಿಲ್ಲಾಧಿಕಾರಿ ಎಂ.ಟಿ.ರೇಜು ಅವರು ಸ್ಪಷ್ಟಪಡಿಸಿದರು.‘ಕಳೆದ ವರ್ಷ ಪ್ರವಾಹ ಪರಿಸ್ಥಿತಿಯಿಂದ ಉಂಟಾದ ಹಾನಿಯ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿವೆ. ಶಿರಸಿ ವಿಭಾಗದಲ್ಲಿ 126 ಕಾಮಗಾರಿಗಳ ಪೈಕಿ 108 ಹಾಗೂ ಕಾರವಾರ ವಿಭಾಗದಲ್ಲಿ 186 ಕಾಮಗಾರಿ ಪೈಕಿ ಕೇವಲ 55 ಪೂರ್ಣಗೊಂಡಿವೆ. ಈ ಎಲ್ಲಾ ಕಾಮಗಾರಿಗಳು ಮೇ 25ರ ಒಳಗಾಗಿ ಪೂರ್ಣಗೊಳಿಸಬೇಕು. ಪೂರ್ಣಗೊಂಡಿರುವ ಕಾಮಗಾರಿಗಳ ಪರಿಶೀಲನೆ ಕಾರ್ಯವನ್ನು ಸಂಬಂಧಪಟ್ಟ ಉಪವಿಭಾಗಾಧಿಕಾರಿಗಳು 10 ದಿನಗಳ ಒಳಗಾಗಿ ಮುಗಿಸಬೇಕು’ ಎಂದರು.ಚರಂಡಿ ಸ್ವಚ್ಛತೆ: ‘ಮುಂಗಾರು ಮಳೆ ಆರಂಭವಾಗುವ ಮೊದಲೇ ಎಲ್ಲಾ ಚರಂಡಿಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮ ವಹಿಸಬೇಕು. ಕಾಮಗಾರಿ ಆರಂಭಿಸಲು ಟೆಂಡರ್ ಅಗತ್ಯ ಇರುವ ಕಡೆ ಟೆಂಡರ್ ಕರೆಯಬೇಕು. ಕಾಮಗಾರಿ ಆರಂಭಿಸುವ ಮೊದಲು ಹಾಗೂ ಪೂರ್ಣಗೊಂಡ ಬಳಿಕ ಛಾಯಾಚಿತ್ರಗಳನ್ನು ತೆಗೆಯಬೇಕು. ಎಲ್ಲಾ ಕಾಮಗಾರಿಗಳು ಪಾರದರ್ಶಕವಾಗಿರುವಂತೆ ನೋಡಿಕೊಳ್ಳಬೇಕು’ ಎಂದು ಅವರು ಹೇಳಿದರು.ಮಧ್ಯಾಹ್ನದ ಬಿಸಿಯೂಟ: ‘ಜಿಲ್ಲೆಯ ಮೂರು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಈ ತಾಲ್ಲೂಕುಗಳಲ್ಲಿ ಬೇಸಿಗೆ ರಜೆಯಿದ್ದರೂ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟವನ್ನು ಒದಗಿಸಲಾಗುತ್ತಿದೆ. ಎಲ್ಲಾ ಶಾಲಾ ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮಪ್ರಸಾದ್ ಮನೋಹರ್ ಅವರು ಮನವಿ ಮಾಡಿದರು.ಮಂಗನ ಕಾಯಿಲೆ ಪ್ರಕರಣ: ‘ಜಿಲ್ಲೆಯಲ್ಲಿ ಒಟ್ಟು 10 ಮಂಗನ ಕಾಯಿಲೆ ಪ್ರಕರಣಗಳು ದೃಢಪಟ್ಟಿವೆ. ಒಟ್ಟು 2,979 ಮಂದಿಗೆ ಮಂಗನ ಕಾಯಿಲೆ ಬಾರದಂತೆ ಲಸಿಕೆ ಹಾಕಲಾಗಿದೆ. ಕಳೆದ ವರ್ಷ 109 ಡೆಂಗ್ಯು ಪ್ರಕರಣಗಳು ವರದಿಯಾಗಿದ್ದು, ಒಂದು ಸಾವು ಸಂಭವಿಸಿತ್ತು. ಈ ಬಾರಿ ಡೆಂಗೆ ಜ್ವರದ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಕಾರ್ಯ ಮಾಡಲಾಗಿದೆ.ಈ ವರ್ಷದ ಜನವರಿ-–ಫೆಬ್ರವರಿ ಅವಧಿಯಲ್ಲಿ ಮಲೇರಿಯಾದ 29 ಪ್ರಕರಣಗಳು ಕಂಡು ಬಂದಿವೆ. ಮಳೆಗಾಲದಲ್ಲಿ ಉಂಟಾಗುವ ಅನಾರೋಗ್ಯ ಪರಿಸ್ಥಿತಿಯನ್ನು ನಿಭಾಯಿಸಲು ಸಾಕಷ್ಟು ಔಷಧಿಗಳು ಲಭ್ಯವಿದೆ’ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಅಶೋಕ್ ಕುಮಾರ್ ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.