ಶನಿವಾರ, ಫೆಬ್ರವರಿ 27, 2021
31 °C
ಹೆರೂರು ಗ್ರಾಮದಲ್ಲಿ ಕೃಷಿ ಮಹೋತ್ಸವ–2014

‘ಕೃಷಿ ಉದ್ಯಮ ಸದ್ಬಳಕೆ ವ್ಯವಸ್ಥೆ ಬೆಳೆಯಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕೃಷಿ ಉದ್ಯಮ ಸದ್ಬಳಕೆ ವ್ಯವಸ್ಥೆ ಬೆಳೆಯಲಿ’

ಹಾನಗಲ್‌: ‘ದೇಶದಲ್ಲಿ ತಂತ್ರಜ್ಞಾನ ಮುಂದುವರಿ ದಿರುವ ಈ ಸಮಯದಲ್ಲಿ ಭೂಮಿಯ ಫಲವತ್ತತೆ ಹಾಗೂ ನೀರಿನ ಸಮರ್ಪಕ ಬಳಕೆಯ ಅರಿವು ಮೂಡುವ ಮೂಲಕ ಕೃಷಿ ಉದ್ಯಮವನ್ನು ಪರಿಣಾಮಕಾರಿಯಾಗಿ ಸದ್ಬಳಕೆ ಮಾಡಿಕೊಳ್ಳುವ ವ್ಯವಸ್ಥೆ ಬೆಳೆಯಬೇಕಿದೆ’ ಎಂದು ಲೋಕಸಭಾ ಸದಸ್ಯ ಶಿವಕುಮಾರ ಉದಾಸಿ ಹೇಳಿದರು.ಬುಧವಾರ ತಾಲ್ಲೂಕಿನ ಹೆರೂರು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಕೃಷಿ, ಪಶುಸಂಗೋಪನೆ, ತೋಟಗಾರಿಕೆ ಇಲಾಖೆಯಿಂದ ನಡೆದ ಕೃಷಿ ಮಹೋತ್ಸವ–2014 ಕಾರ್ಯಕ್ರಮದ ವಿಚಾರಗೋಷ್ಠಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ರೈತರು ಸಾವಯವ ಕೃಷಿಯ ಮಹತ್ವ ಅರಿತು ರಾಸಾಯನಿಕ ಗೊಬ್ಬರ ಬಳಕೆ ಕಡಿಮೆ ಮಾಡಬೇಕು. ಜನ ಬಳಕೆಗಾಗಿ ಸರ್ಕಾರ ಸರಬರಾಜು ಮಾಡುವ ನೀರಿನ ಮಿತವ್ಯಯ ಉಪಯೋಗದ ಜಾಗೃತೆ ಮೂಡಬೇಕು’ ಎಂದ ಅವರು, ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಎಲ್ಲರೂ ಮುಂದಾಗಬೇಕು ಎಂದು ಕರೆ ನೀಡಿದರು.ಕೃಷಿ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಶಾಸಕ ಮನೋಹರ ತಹಸೀಲ್ದಾರ್‌, ‘ರೈತರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಹೈನುಗಾರಿಕೆಗೆ ಪ್ರೋತ್ಸಾಹ ನೀಡಲಾಗುತ್ತಿದ್ದು, ಸರ್ಕಾರ, ಸಂಘ–ಸಂಸ್ಥೆಗಳ ಪ್ರೋತ್ಸಾಹಕ ಯೋಜನೆಗಳನ್ನು ರೈತರು ಸದುಪಯೋ ಮಾಡಿಕೊಳ್ಳಬೇಕು.ಕೃಷಿ ಸಾಮಗ್ರಿಗಳಲ್ಲಿ ಇಲಾಖೆಯಿಂದ ನೀಡಲಾಗುವ ಶೇ. 50 ರಷ್ಟು ವಿನಾಯ್ತಿ ಸೌಲಭ್ಯಗಳನ್ನು ಬಳಸಿಕೊಂಡು ಸುಧಾರಿತ ಕೃಷಿ ಪದ್ಧತಿ ಅಳವಡಿಕೆಯ ಮೂಲಕ ಕೃಷಿ ಲಾಭದಾಯಕ ಮಾಡಿಕೊಳ್ಳಬೇಕು’ ಎಂದ ಅವರು, ಹನಿ ನೀರಾವರಿ ಅಳವಡಿಕೆಗೆ ಶೇ. 90 ವಿನಾಯ್ತಿ ಮತ್ತು ಸಹಕಾರಿ ಸಂಘಗಳಲ್ಲಿ ₨ 3 ಲಕ್ಷ ವರೆಗಿನ ಬಡ್ಡಿ ರಹಿತ ಸಾಲ ನೀಡುವ ಸರ್ಕಾರದ ಮಹತ್ವದ ಉದ್ದೇಶ ರೈತ ವರ್ಗಕ್ಕೆ ಅನುಕೂಲ ಒದಗಿಸಲಿದೆ ಎಂದರು.ಜಾನುವಾರು ಮೇಳದಲ್ಲಿ ಭಾಗವಹಿಸಿ ಬಹುಮಾನ ಗಿಟ್ಟಿಸಿದ ಜಾನುವಾರುಗಳಿಗೆ ಇದೇ ಸಂದರ್ಭದಲ್ಲಿ ಶಾಸಕರು  ಬಹುಮಾನ ವಿತರಿಸಿದರು. ಕೃಷಿ ಇಲಾಖೆಯಿಂದ ಮುದ್ರಣ ಗೊಂಡ ರೈತರಿಗೆ ಮಾಹಿತಿಯ ಪತ್ರಗಳನ್ನು ಸಂಸದ ಶಿವಕುಮಾರ ಉದಾಸಿ ಬಿಡುಗಡೆಗೊಳಿಸಿದರು. ಕೃಷಿ ಮಹೋತ್ಸವ ಯಶಸ್ಸಿಗೆ ಸಹಕರಿಸಿದ ಆಡೂರು ಜಿಲ್ಲಾ ಪಂಚಾಯತಿ ಕ್ಷೇತ್ರದ ಸದಸ್ಯ ಮಹದೇವಪ್ಪ ಬಾಗಸರ ಅವರನ್ನು ಸನ್ಮಾನಿಸಲಾಯಿತು.ಹೆರೂರು ಗುಬ್ಬಿ ನಂಜುಂಡ ಶಿವಾಚಾರ್ಯ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.  ಹೆರೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿನೋದಾ ಬಡಿಗೇರ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಸವರಾಜ ಹಾದಿಮನಿ, ಗೀತಾ ಅಂಕಸಖಾನಿ, ಕಸ್ತೂರೆವ್ವ ವಡ್ಡರ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರ, ಉಪಾಧ್ಯಕ್ಷೆ ಅನಿತಾ ಶಿವೂರ, ಸದಸ್ಯರಾದ ಮಧು ಪಾಣಿಗಟ್ಟಿ, ರಾಜೇಂದ್ರ ಬಾರ್ಕಿ, ಸುಭಾಸ ಓಲೇಕಾರ, ಕಲ್ಲವೀರಪ್ಪ ಪವಾಡಿ, ಜಂಟಿ ಕೃಷಿ ನಿರ್ದೇಶಕ ಗಣೇಶ ನಾಯ್ಕ, ಮುಖಂಡರಾದ ಸಿ.ಎಸ್‌. ಬಡಿಗೇರ, ಮಲ್ಲನಗೌಡ ಪಾಟೀಲ, ರವಿ ಬೆಲ್ಲದ, ಯಾಸೀರಖಾನ್‌ ಪಠಾಣ, ಸತೀಶ ದೇಶಪಾಂಡೆ, ಉಮೇಶ ಗೌಳಿ, ರಾಜಶೇಖರ ಬೆಟಗೇರಿ, ಚಂದ್ರಪ್ಪ ಕಳ್ಳಿ ಮತ್ತಿತರರು ಹಾಜರಿದ್ದರು.ಮಮತಾ ಪಾಟೀಲ ಪ್ರಾರ್ಥಿಸಿದರು. ಧರ್ಮಸ್ಥಳ ಯೋಜ ನಾಧಿಕಾರಿ ಕೆ.ಸದಾನಂದ ವರದಿ ವಾಚನ ಮಾಡಿ ಕಾರ್ಯಕ್ರಮ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.