ಶನಿವಾರ, ಜನವರಿ 18, 2020
20 °C

‘ಕೃಷಿ ಉದ್ಯೋಗ ಅಲ್ಲ,ಉದ್ದಿಮೆಯಾಗಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ರೈತರು ಕೃಷಿಯನ್ನು ಉದ್ಯೋಗ ಎಂದು ಭಾವಿಸಬಾರದು. ಉದ್ದಿಮೆ ಎಂದು ಭಾವಿಸಿ ಕೆಲಸ ಮಾಡಿದರೆ ಅಧಿಕ ಲಾಭ ಗಳಿಸಲು ಸಾಧ್ಯ’ ಎಂದು ಕೆನರಾ ಬ್ಯಾಂಕ್‌ ಮುಖ್ಯ ವ್ಯವಸ್ಥಾಪಕ ರವೀಂದ್ರ ಭಂಡಾರಿ ಕಿವಿಮಾತು ಹೇಳಿದರು.ಕರ್ನಾಟಕ ಪ್ರದೇಶ ಯುವಕ ರೈತ ಸಮಾಜದ ಆಶ್ರಯದಲ್ಲಿ ನಗರದ ಕೃಷಿ ಭವನದಲ್ಲಿ ಸೋಮವಾರ ನಡೆದ ಅಂತರರಾಷ್ಟ್ರೀಯ ರೈತರ ದಿನಾಚರಣೆ­ಯಲ್ಲಿ ಅವರು ಮಾತನಾಡಿದರು.‘ಕೃಷಿಗೆ ಉತ್ತೇಜನ ನೀಡುವ ಅನೇಕ ಯೋಜನೆ­ಗಳು ಬ್ಯಾಂಕ್‌ಗಳಲ್ಲಿ ಇವೆ. ವಿವಿಗಳಲ್ಲಿ ಸಂಶೋಧನಾ ಚಟುವಟಿಕೆ­ಗಳು ಹೆಚ್ಚುತ್ತಿವೆ. ಇವುಗಳ ಬಗ್ಗೆ ರೈತರಿಗೆ ಮಾಹಿತಿ ಕೊರತೆ ಇದೆ.  ಮಾಹಿತಿ ಪಡೆಯಲು ರೈತ ಕೂಟಗಳನ್ನು ಸ್ಥಾಪಿಸಬೇಕು’ ಎಂದರು.‘ರೈತರಿಗೆ ಬ್ಯಾಂಕ್‌ಗಳಲ್ಲಿ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಅಡಿಯಲ್ಲಿ ಶೇ 4 ಬಡ್ಡಿದರದಲ್ಲಿ ₨3 ಲಕ್ಷದ ವರೆಗೆ ಸಾಲ ನೀಡಲಾಗುತ್ತದೆ. ಆದರೆ, ಈ ಸಾಲದ ಬಗ್ಗೆ ರೈತರಿಗೆ ಮಾಹಿತಿಯೇ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.‘ಆದಾಯ ತೆರಿಗೆ ಪಾವತಿ ಮಾಡದ ಕಾರಣ ಬ್ಯಾಂಕ್‌ಗಳಲ್ಲಿ ರೈತರಿಗೆ ಮನೆ ಸಾಲ ಸಿಗುತ್ತಿಲ್ಲ. ರೈತರ ಆದಾಯದ ಆಧಾರದಲ್ಲಿ ಮನೆ ಸಾಲ ನೀಡುವ ನೂತನ ಯೋಜನೆಯನ್ನು ಕೆನರಾ ಬ್ಯಾಂಕ್‌ನಲ್ಲಿ ಆರಂಭಿಸ­ಲಾಗಿದೆ’ ಎಂದು ಅವರು ಹೇಳಿದರು.ಉಪಮೇಯರ್‌ ಇಂದಿರಾ ಮಾತನಾಡಿ, ‘ಯೋಜನೆ ರೂಪಿಸುವ ಕೃಷಿ ಕ್ಷೇತ್ರಕ್ಕೆ ಸರ್ಕಾರ ಮೊದಲ ಆದ್ಯತೆ ನೀಡಬೇಕು. ರೈತರ ಎಲ್ಲ ಉತ್ಪನ್ನಗಳಿಗೆ ಸರ್ಕಾರ ಸಬ್ಸಿಡಿ ನೀಡಬೇಕು’ ಎಂದರು.ನಟಿ ಲೀಲಾವತಿ ಅವರಿಗೆ ತೋಟಗಾರಿಕಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಟ ವಿನೋದ್‌ ರಾಜ್‌, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಕೆ.ಎನ್‌.­ಸುಬ್ಬಾ ರೆಡ್ಡಿ, ಪ್ರಾಧ್ಯಾಪಕ ಚಿದಾನಂದ, ರೈತ ಸಮಾಜದ ಅಧ್ಯಕ್ಷ ಆರ್‌.ರವಿ­ಕುಮಾರ್‌, ಗೌರವ ಕಾರ್ಯದರ್ಶಿ ಮಂಜುನಾಥ ಗೌಡ ಇದ್ದರು.

ಪ್ರತಿಕ್ರಿಯಿಸಿ (+)