‘ಕೃಷಿ ಕ್ಷೇತ್ರಕ್ಕೆ ಕಡಿಮೆಯಾಗುತ್ತಿರುವ ಆದ್ಯತೆ’

7

‘ಕೃಷಿ ಕ್ಷೇತ್ರಕ್ಕೆ ಕಡಿಮೆಯಾಗುತ್ತಿರುವ ಆದ್ಯತೆ’

Published:
Updated:

ಧಾರವಾಡ: ‘ಕೇಂದ್ರ ಸರ್ಕಾರವು ವರ್ಷದಿಂದ ವರ್ಷಕ್ಕೆ ಕೃಷಿ ಕ್ಷೇತ್ರಕ್ಕೆ ನೀಡುತ್ತಾ ಬಂದಿರುವ ಆದ್ಯತೆಯನ್ನು ಕಡಿಮೆಗೊಳಿಸುತ್ತಲೇ ಬಂದಿದೆ. ಪ್ರಸ್ತುತ ಒಟ್ಟು ಕೇಂದ್ರ ಬಜೆಟ್‌ನ ಶೇ 10ರಷ್ಟು ಮಾತ್ರ ಕೃಷಿಗೆ ನೀಡುತ್ತಿದೆ’ ಎಂದು ಚಾಮರಾಜನಗರದ ದೀನಬಂಧು ಸೇವಾ ಸಂಸ್ಥೆಯ ಮುಖ್ಯಸ್ಥ ಜಿ.ಎಸ್.ಜಯದೇವ ವಿಷಾದಿಸಿದರು.ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ, ಪ್ರಕಾಶ ಭಟ್ ಅವರು ಬರೆದ 'ನೇಗಿಲು ಸುಖವಾಗಿ ಉಳಲಿ' ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, 'ಕೇಂದ್ರ ಸರ್ಕಾರವು 4ನೇ ಪಂಚವಾರ್ಷಿಕ ಯೋಜನೆಯ ಸಂದರ್ಭದಲ್ಲಿ ಕೃಷಿಗೆ ಶೇ 30ರಷ್ಟು ಹಣವನ್ನು ಮೀಸಲಿರಿಸಿತ್ತು. ಆದರೆ 10ನೇ ಪಂಚವಾರ್ಷಿಕ ಯೋಜನೆಯ ವೇಳೆಗೆ ಆ ಪ್ರಮಾಣ ಶೇ 10ಕ್ಕೆ ಇಳಿದಿದೆ. ಇದು ಸರ್ಕಾರ ಕೃಷಿಯತ್ತ ತೋರುತ್ತಿರುವ ಕಾಳಜಿ’ ಎಂದು ವ್ಯಂಗ್ಯವಾಡಿದರು.'ಒಟ್ಟು ನಿವ್ವಳ ಉತ್ಪನ್ನ (ಜಿಡಿಪಿ)ವೆಂಬುದು ಒಂದು ಮಾಯೆ. ಮರಗಳನ್ನು ಕಡಿದು ಮಾರಿದರೆ ಜಿಡಿಪಿ ದರ ಹೆಚ್ಚಳವಾಗಿ ಹಣ ಕೈಯಿಂದ ಕೈಗೆ ಓಡಾಡುತ್ತದೆ ಎನ್ನಲಾಗುತ್ತದೆ. ಮರಗಳನ್ನು ಬೆಳೆಸಿದರೆ ಅದರಿಂದ ಜಿಡಿಪಿ ಸಿಗುವುದಿಲ್ಲವಂತೆ. ಆದರೆ ಕೈಯಿಂದ ಕೈಗೆ ಹಣ ಹೋಗಲು ಜಿಡಿಪಿಯನ್ನೇಕೆ ಹೆಚ್ಚಳ ಮಾಡಬೇಕು' ಎಂದು ಪ್ರಶ್ನಿಸಿದರು.‘ಕೃಷಿಯನ್ನು ಉದ್ಯಮವಾಗಿ ಪರಿಗಣಿಸಬಾರದು. ಅದು ಜೀವನ ಕ್ರಮವಾಗಬೇಕು. ಕೃಷಿಯಲ್ಲಿ ತೊಡಗಿದ್ದರೆ ಖಾಸಗಿ ಜೀವನದ ಕಲ್ಪನೆಯೇ ಇರುವುದಿಲ್ಲ. ನಮ್ಮ ಜೀವನ ಕೃಷಿಯೊಂದಿಗೇ ಕೂಡಿಕೊಳ್ಳುತ್ತದೆ. ಆಗ ಸೃಜನಶೀಲತೆಗೆ ಹೆಚ್ಚು ಅವಕಾಶ ದೊರೆಯುತ್ತದೆ. ಉದ್ಯಮದಲ್ಲಿ ಕೆಲಸ ಮಾಡುವಾಗ ಖಾಸಗಿ ಜೀವನ ಬೇಕು ಎನಿಸುತ್ತದೆ' ಎಂದರು.‘ನೇಗಿಲು ಸುಖವಾಗಿ ಉಳಲಿ ಎಂಬ ಕೃತಿ ಹೊಸ ಒಳನೋಟಗಳನ್ನು ಹೊಂದಿದೆ. ಇದನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಹೇಳಿದರು. ಕೃಷಿ ಬರಹಗಾರ ಶಿವಾನಂದ ಕಳವೆ ಮಾತನಾಡಿ, 'ಹಳ್ಳಿಗಳಲ್ಲಿನ ಯುವಕರು ಪಟ್ಟಣಗಳತ್ತ ಮುಖ ಮಾಡಿದ ಪರಿಣಾಮ ಕೃಷಿ ಬೆಳವಣಿಗೆ ಕುಂಠಿತವಾಗುತ್ತಿದ್ದು, ಜಮೀನುಗಳ ಮಾರಾಟ ನಡೆಯುತ್ತಿದೆ. ಕರಾವಳಿ ಭಾಗವೂ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಬರೀ ವೃದ್ಧರೇ ತುಂಬಿಕೊಂಡಿದ್ದಾರೆ. ಕೃಷಿಯೆಡೆಗಿನ ಪ್ರೀತಿ ಕಡಿಮೆಯಾಗಿದ್ದರ ಫಲವಿದು’ ಎಂದು ಎಚ್ಚರಿಸಿದರು.ಪುಸ್ತಕ ಪ್ರಕಟಣೆಗೆ ಆರ್ಥಿಕ ನೆರವು ನೀಡಿದ ಅರಣ್ಯ ಇಲಾಖೆಯ ಅರಣ್ಯ ಸಂಶೋಧನಾ ವಿಭಾಗದ ಮುಖ್ಯ ಅರಣ್ಯಾಧಿಕಾರಿ ಮನೋಜಕುಮಾರ್, 'ಎಷ್ಟೋ ಬಾರಿ ಇದ್ದ ಹುದ್ದೆಯನ್ನು ಬಿಟ್ಟು ಕೃಷಿಯತ್ತ ಮರಳಲೇ ಎಂಬ ಬಯಕೆಯಾಗುತ್ತದೆ. ಆದರೆ ಕೃಷಿಯ ಸಮಸ್ಯೆಗಳನ್ನು ಕಂಡಾಗ ಧೈರ್ಯ ಸಾಲುವುದಿಲ್ಲ' ಎಂದರು.'ಅರಣ್ಯ ಸಂಶೋಧನಾ ವಿಭಾಗವು ರೈತರಿಗೆ ಉಪಕಾರಿಯಾದ ಇನ್ನು ಹಲವು ಕೃತಿಗಳನ್ನು ಪ್ರಕಟಿಸಲು ಸಿದ್ಧವಿದೆ' ಎಂದು ಭರವಸೆ ನೀಡಿದರು. ಲೇಖಕ ಡಾ.ಪ್ರಕಾಶ ಭಟ್. ’ಗ್ರಾಮೀಣಾಭಿವೃದ್ಧಿಯ ಕೆಲಸದಲ್ಲಿ ಪಡೆದ 30 ವರ್ಷಗಳ ಅನುಭವವೇ ಪುಸ್ತಕ ರೂಪದಲ್ಲಿ ಹೊರಹೊಮ್ಮಿದೆ’ ಎಂದು ಹೇಳಿದರು. ಶಿಕ್ಷಣ ಮಂಟಪದ ಸಂಚಾಲಕ ಡಾ.ಸಂಜೀವ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ಬಾಲಬಳಗ ಶಾಲೆಯ ಮಕ್ಕಳು, ಸೂರಶೆಟ್ಟಿ ಗ್ರಾಮದ ರೈತರು ಹಾಗೂ ಹಿಮಾಂಶು ಭಟ್ ಅವರು ಸ್ವಾಗತ ಗೀತೆಗಳನ್ನು ಹಾಡಿದರು. ದಿವಾಕರ ಹೆಗಡೆ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry