‘ಕೃಷ್ಣಾ: ಅಧಿಸೂಚನೆ ಹೊರಡಿಸದಂತೆ ಒತ್ತಡ ತನ್ನಿ’

7

‘ಕೃಷ್ಣಾ: ಅಧಿಸೂಚನೆ ಹೊರಡಿಸದಂತೆ ಒತ್ತಡ ತನ್ನಿ’

Published:
Updated:

ವಿಜಾಪುರ: ‘ಕೃಷ್ಣಾ ಎರಡನೇ ನ್ಯಾಯ ಮಂಡಳಿಯ ಅಂತಿಮ ತೀರ್ಪು ಕರ್ನಾ­ಟಕದ ಹಿತಾಸಕ್ತಿಗೆ ಸಂಪೂರ್ಣ ವಿರುದ್ಧ­ವಾಗಿದೆ. ಬಿ ಸ್ಕೀಂನ ಯೋಜನೆ­ಗಳಿಗೆ ಮತ್ತು ಮುಂಗಾರು ಹಂಗಾಮಿನ ಬೆಳೆ­ಗಳಿಗೆ ನೀರು ದೊರೆಯು­ವುದಿಲ್ಲ. ನಮ್ಮ ಜಿಲ್ಲೆಯ ಏಳು ಲಕ್ಷ ಎಕರೆ ಜಮೀನಿಗೂ ನೀರಾವರಿ ಮರೀಚಿಕೆ­ಯಾಗಲಿದೆ’ ಎಂದು ಕೃಷ್ಣಾ–ಭೀಮಾ ನದಿ ಸಮ­ನ್ವಯ ಸಮಿತಿ ಅಧ್ಯಕ್ಷ ಪಂಚಪ್ಪ ಕಲಬುರ್ಗಿ, ಸಂಚಾಲಕ ಬಸವ­ರಾಜ ಕುಂಬಾರ ಆರೋಪಿಸಿದರು.ರಾಜ್ಯ ಸರ್ಕಾರ ತಕ್ಷಣವೇ ರಾಜ್ಯದ ನೀರಾವರಿ ತಜ್ಞರೊಂದಿಗೆ ಚರ್ಚೆ ನಡೆಸಬೇಕು. ಈ ತೀರ್ಪಿನ ಅಧಿಸೂಚನೆ ಪ್ರಕಟಿಸದಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಅವರು ಬುಧ­ವಾರ ಇಲ್ಲಿ ಪತ್ರಿಕಾ­ಗೋಷ್ಠಿ­ಯಲ್ಲಿ ಆಗ್ರಹಿಸಿದರು. ‘ಆಂಧ್ರ ಪ್ರದೇಶಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನ್ಯಾಯಮಂಡಳಿ ನಮ್ಮ ರಾಜ್ಯಕ್ಕೆ ಅನೇಕ ಕಟ್ಟಳೆಗಳನ್ನು ವಿಧಿಸಿದೆ. ಕರ್ನಾಟಕದ ಪರವಾಗಿ ವಾದ ಮಂಡಿಸಿ­ರುವ ಕಾನೂನು ಮತ್ತು ತಾಂತ್ರಿಕ ತಂಡಗಳು ರಾಜ್ಯದ ಹಿತ ಕಾಪಾ­ಡುವಲ್ಲಿ ವಿಫಲವಾಗಿದೆ. ಜಲ­ಸಂಪ­ನ್ಮೂಲ ಸಚಿವ ಎಂ.ಬಿ. ಪಾಟೀಲ ಮೌನ ವಹಿಸಿರುವುದು ಸರಿಯಲ್ಲ. ಅವರು  ತಮ್ಮ ನಿಲುವು ಬಹಿರಂಗ ಪಡಿಸಿ ಹೊಣೆ­­ಗಾರಿಕೆ ನಿಭಾಯಿಸಬೇಕು. ಕೃಷ್ಣಾ ಕಣಿವೆ ಪ್ರದೇಶದ ಶಾಸಕರೂ  ಅನ್ಯಾ­ಯದ ವಿರುದ್ಧ ದನಿ ಎತ್ತಬೇಕು’ ಎಂದರು.ಮುಂಗಾರು ಹಂಗಾಮಿಗೆ ನೀರಿಲ್ಲ: ‘ಅವಿಭಜಿತ ವಿಜಾಪುರ ಜಿಲ್ಲೆಯ ಏತ ನೀರಾವರಿ ಯೋಜನೆ­ಗಳು ಬಿ ಸ್ಕೀಂನಲ್ಲಿ ಆಲಮಟ್ಟಿ ಜಲಾಶಯದಲ್ಲಿ ಸಂಗ್ರಹಿ­ಸುವ 130 ಟಿಎಂಸಿ ಅಡಿ ನೀರಿನ ಮೇಲೆ ಅವಲಂಬಿತವಾಗಿವೆ. ಬಿ ಸ್ಕೀಂ ನಲ್ಲಿ ಆಲಮಟ್ಟಿ ಜಲಾ­ಶಯದಲ್ಲಿ ಸಂಗ್ರಹ­ವಾಗುವ 130 ಟಿಎಂಸಿ ಡಿ ನೀರನ್ನು ಹಿಂಗಾರು ಬೆಳೆಗೆ ಮಾತ್ರ ಬಳಸ­ಬೇಕು’ ಎಂಬ ಕಟ್ಟಳೆ ಆಘಾತಕಾರಿ ಎಂದರು.‘ಬಿ ಸ್ಕೀಂ ನಲ್ಲಿ ಹಂಚಿಕೆಯಾಗಿರುವ 130 ಟಿಎಂಸಿ ಅಡಿ ನೀರಿನ ಪೈಕಿ 25 ಟಿಎಂಸಿ ಅಡಿನೀರನ್ನು ಶೇ.65ರಷ್ಟು ನೀರು ಲಭ್ಯವಾದಾಗ ಮಾತ್ರ ಕೇವಲ ಹಿಂಗಾರಿ ಬೆಳೆಗೆ ಪೂರೈಸಬೇಕು ಎಂದು ಉಲ್ಲೇಖಿಸಲಾಗಿದೆ. ಶೇ.65ರಷ್ಟು ನೀರು 10 ವರ್ಷಗಳಲ್ಲಿ 6ರಿಂದ 7 ವರ್ಷ ಮಾತ್ರ ದೊರೆತ್ತದೆ. ಅಂದರೆ 25 ಟಿಎಂಸಿ ಅಡಿ ನೀರು ಬಳಸಲು ಪ್ರತ್ಯೇಕ ಕಾಲುವೆಗಳನ್ನು ನಿರ್ಮಿಸಿ 10 ವರ್ಷಗಳಲ್ಲಿ 6ರಿಂದ 7 ವರ್ಷ ಮಾತ್ರ ಬಳಸಬೇಕು. ಸರಾಸರಿ ಇಳುವರಿಯ ವರ್ಷಗಳಲ್ಲಿ 105 ಟಿಎಂಸಿ ಅಡಿ ನೀರು ಬಳಸಲು ಪ್ರತ್ಯೇಕ ಕಾಲುವೆಗಳನ್ನು ನಿರ್ಮಿಸಿ 10 ವರ್ಷಗಳಲ್ಲಿ 5ರಿಂದ 6 ವರ್ಷ ಮಾತ್ರ ಆ ಕಾಲುವೆಗಳಿಗೆ ನೀರು ಬಿಡಬೇಕಾಗುತ್ತದೆ’ ಎಂದರು.‘ಭೀಮಾ ನದಿಯಲ್ಲಿ ಕನಿಷ್ಠ ಹರಿವು ಕಾಪಾಡಿಕೊಳ್ಳುವ ವಿಷಯದಲ್ಲಿಯೂ ರಾಜ್ಯಕ್ಕೆ ಅನ್ಯಾಯವಾಗಿದೆ. ಮಹಾರಾಷ್ಟ್ರದಲ್ಲಿರುವ ಬೇಗಂಪೂರ ಬ್ಯಾರೇಜ್‌ನಿಂದ ಕೃಷ್ಣೆಯಲ್ಲಿ ವಿಲೀನವಾಗುವ ಸ್ಥಳದ ವರೆಗೂ ಭೀಮಾ ನದಿಯಲ್ಲಿ ನೈಸರ್ಗಿಕ ಹರಿವು ಕಾಪಾಡಕೊಳ್ಳಬೇಕಾದ ಹೊಣೆ ಕರ್ನಾಟಕದ್ದು ಎಂದು ನ್ಯಾಯ ಮಂಡಳಿ ಹೇಳಿದೆ.

ಇದು ಅವೈಜ್ಞಾನಿಕ. ಉಜನಿ ಜಲಾಶಯದ ನೀರಿನಿಂದ ಮಾತ್ರ ಭೀಮಾ ನದಿಯಲ್ಲಿ ನೈಸರ್ಗಿಕ ಹರಿವು ಕಾಪಾಡಿಕೊಳ್ಳಲು ಸಾಧ್ಯ. ನಮ್ಮ ಕಾನೂನು ಮತ್ತು ತಾಂತ್ರಿಕ ತಜ್ಞರಿಗೆ ಭೌಗೋಲಿಕ ಜ್ಞಾನವೇ ಇಲ್ಲ. ಹೀಗಾಗಿ ಅವರು ವಾದವನ್ನೇ ಮಂಡಿಸಿಲ್ಲ’ ಎಂದು ದೂರಿದು. ಸಾಮಾಜಿಕ ಕಾರ್ಯಕರ್ತರಾದ ಪೀಟರ್‌ ಅಲೆಕ್ಸಾಂಡರ್‌, ಸುರೇಶ ವಿಜಾಪುರ ಪತ್ರಿಕಾಗೋಷ್ಠಿಯಲ್ಲಿದ್ದರು.

‘ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಳ ಬೇಡ’

ವಿಜಾಪುರ: ‘ಆಲಮಟ್ಟಿ ಜಲಾಶಯದ ಎತ್ತರ­ವನ್ನು 524 ಮೀಟರ್‌ಗೆ ಹೆಚ್ಚಿಸು­ವುದು ಬೇಡ. ಒಂದೊಮ್ಮೆ ಎತ್ತರ ಹೆಚ್ಚಿಸಿದರೆ ಅದು ಭೂಕಂಪ ವಲಯ­ವಾಗಿ ಮಾರ್ಪಟ್ಟು ಆ ಭಾಗದಲ್ಲಿ ಪ್ರಳಯ ಆಗಲಿದೆ’ ಎಂದು ಸಾಮಾಜಿಕ ಕಾರ್ಯಕರ್ತ, ಹೋರಾಟಗಾರ ಪೀಟರ್‌ ಅಲೆಕ್ಸಾಂಡರ್‌ ಎಚ್ಚರಿಸಿದರು. ‘ಚಿಕ್ಕದು ಸುಂದರ. ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಿಸಿದರೆ ಸಮಸ್ಯೆಯೇ ಹೆಚ್ಚು. ಜಾಗತಿಕ ತಾಪಮಾನ ಹೆಚ್ಚಳಕ್ಕೂ ಇದು ಕಾರಣವಾಗಲಿದೆ. ಈ ಕುರಿತ ಅಧ್ಯಯನ ವರದಿಯನ್ನು ನಾನು ಈಗಾಗಲೇ ರಾಷ್ಟ್ರೀಯ ಸಮಾವೇಶದಲ್ಲಿ ಮಂಡಿಸಿದ್ದು, ಇದು ಅಂತರರಾಷ್ಟ್ರೀಯ ಚರ್ಚಾ ವಿಷಯವಾಗಲಿದೆ’ ಎಂದರು.‘ನೀರು ಬಳಕೆಯ ವಿಷಯದಲ್ಲಿ ನ್ಯಾಯಮಂಡಳಿ ನಮ್ಮ ರಾಜ್ಯಕ್ಕೆ ವಿಧಿಸಿರುವ ಕಟ್ಟಳೆ ತೆಗೆದುಹಾಕಿದರೆ ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಳ ಆಗಬೇಕು. ನಮ್ಮ ರೈತರಿಗೆ ನೀರು ದೊರೆಯದಿದ್ದರೆ ಮತ್ತು ಆಂಧ್ರ ಪ್ರದೇಶಕ್ಕೆ ನೀರು ಪೂರೈಸಲಿಕ್ಕಾಗಿ ಮಾತ್ರ ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸುವುದು ಬೇಡ’ ಎಂದು ಪಂಚಪ್ಪ ಕಲಬುರ್ಗಿ ಸಮಜಾಯಿಷಿ ನೀಡಿದರು. ‘ಆಲಮಟ್ಟಿ ಜಲಾಶಯದ ಎತ್ತರವನ್ನು ಹೆಚ್ಚಿಸದೇ ಬಿ ಸ್ಕೀಂನ ನೀರನ್ನು ಬಳಸಿ­ಕೊಳ್ಳಲು ಸಾಧ್ಯ ಎಂಬ ಕುರಿತು ತಜ್ಞರು ಅಧ್ಯಯನ ನಡೆಸುತ್ತಿದ್ದಾರೆ. ಸರ್ಕಾರ ಅವರಿಗೂ ಉತ್ತೇಜನ ನೀಡಿ, ಅವರಿಂದ ಸಲಹೆ ಪಡೆಯಬೇಕು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry