‘ಕೆಟ್ಟ ತೀರ್ಪಿನಿಂದ ಚಿನ್ನ ಕೈತಪ್ಪಿತು’

7
ವಿಶ್ವ ಕುಸ್ತಿ ಚಾಂಪಿಯನ್‌ಷಿಪ್: ಅಮಿತ್‌ಗೆ ಒಲಿದ ಬೆಳ್ಳಿ, ಭಜರಂಗ್‌ಗೆ ಕಂಚು

‘ಕೆಟ್ಟ ತೀರ್ಪಿನಿಂದ ಚಿನ್ನ ಕೈತಪ್ಪಿತು’

Published:
Updated:

ನವದೆಹಲಿ (ಪಿಟಿಐ): ಫೈನಲ್‌ ಸೆಣಸಾಟದ ವೇಳೆ ತೀರ್ಪುಗಾರರು ನೀಡಿದ ಕೆಟ್ಟ ನಿರ್ಣಯದಿಂದಾಗಿ ಚಿನ್ನದ ಪದಕ ಗೆಲ್ಲುವ ಅವಕಾಶ ಕಳೆದುಕೊಂಡೆ ಎಂದು ಭಾರತದ ಕುಸ್ತಿಪಟು ಅಮಿತ್‌ ಕುಮಾರ್‌ ಆರೋಪಿಸಿದ್ದಾರೆ.ಹಂಗರಿಯ ಬುಡಾಪೆಸ್ಟ್‌ನಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನ 55 ಕೆ.ಜಿ ವಿಭಾಗದಲ್ಲಿ ಅಮಿತ್‌ ಬೆಳ್ಳಿ ಪದಕ ಜಯಿಸಿದ್ದರು. ಸೋಮವಾರ ನಡೆದ ಫೈನಲ್‌ನಲ್ಲಿ ಅವರು ಇರಾನಿನ ಹಸನ್‌ ಫರ್ಮಾನ್‌ ರಹೀಮಿ ಕೈಯಲ್ಲಿ 1–2 ರಲ್ಲಿ ಸೋಲು ಅನುಭವಿಸಿದ್ದರು.‘ಫೈನಲ್‌ನಲ್ಲಿ ಪ್ರಬಲ ಪೈಪೋಟಿ ಎದುರಾಯಿತು. ಇಬ್ಬರೂ ಪಟ್ಟುಬಿಡದೆ ಕಾದಾಟ ನಡೆಸಿದೆವು. ಆದರೆ ನಾನು ರಕ್ಷಣೆಗೆ ಹೆಚ್ಚು ಒತ್ತು ನೀಡುತ್ತಿದ್ದೇನೆ ಎಂಬ ಎಚ್ಚರಿಕೆಯನ್ನು ರೆಫರಿ ನೀಡಿದರು. ವಾಸ್ತವ ಏನೆಂದರೆ, ಎದುರಾಳಿ ನನಗಿಂತಲೂ ಹೆಚ್ಚು ರಕ್ಷಣೆಗೆ ಒತ್ತು ನೀಡುತ್ತಿದ್ದ. ಆದ್ದರಿಂದ ನನ್ನ ಪರವಾಗಿ ಪಾಯಿಂಟ್‌ ನೀಡಬೇಕಿತ್ತು’ ಎಂದು ಅಮಿತ್‌ ಹೇಳಿದ್ದಾರೆ.‘ಮೊದಲ ಸುತ್ತಿನಲ್ಲಿ ಮೊದಲ ಪಾಯಿಂಟ್‌ ನಾನು ಗಿಟ್ಟಿಸಿದೆ. ಮಾತ್ರವಲ್ಲ, ಎದುರಾಳಿಯನ್ನು ಎರಡು ಸಲ ನೆಲಕ್ಕುರುಳಿಸುವ ಹಂತಕ್ಕೆ ಬಂದಿದ್ದೆ. ಮೊದಲ ಸುತ್ತಿನ ಬಳಿಕ ಇಬ್ಬರೂ 1–1 ರಲ್ಲಿ ಸಮಬಲ ಸಾಧಿಸಿದ್ದೆವು. ಆದರೆ ಎರಡನೇ ಸುತ್ತಿನಲ್ಲಿ ರೆಫರಿ ಎದುರಾಳಿಗೆ ನಿರ್ಣಾಯಕ ಪಾಯಿಂಟ್‌ ನೀಡಿದರು’ ಎಂದರು.ಸುಶೀಲ್‌ ಕುಮಾರ್‌ ಅವರ ದಾಖಲೆ ಸರಿಗಟ್ಟಲು ವಿಫಲವಾದದ್ದು ನಿರಾಸೆ ಉಂಟಮಾಡಿದೆ ಎಂದು 19ರ ಹರೆಯದ ಅಮಿತ್‌ ಇದೇ ವೇಳೆ ತಿಳಿಸಿದರು.ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದಿತ್ತಿರುವುದು ಸುಶೀಲ್‌ ಮಾತ್ರ. 2010ರಲ್ಲಿ ಮಾಸ್ಕೊದಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಅವರು ಈ ಸಾಧನೆ ಮಾಡಿದ್ದರು.ಚಾಂಪಿಯನ್‌ಷಿಪ್‌ನ ಎರಡನೇ ದಿನ ಭಾರತದ ಭಜರಂಗ್‌ (60 ಕೆ.ಜಿ. ವಿಭಾಗ) ಕಂಚಿನ ಪದಕ ಗೆದ್ದರು. ಆದರೆ ಪವನ್‌ ಕುಮಾರ್‌ (84 ಕೆ.ಜಿ) ಮತ್ತು ಹಿತೇಂದರ್‌ (120) ಎರಡನೇ ಸುತ್ತಿನ ತಡೆ ದಾಟುವಲ್ಲಿ ವಿಫಲರಾದರು.ಭಜರಂಗ್‌ ಮತ್ತು ಹಿತೇಂದರ್‌ಗೆ ಮೊದಲ ಸುತ್­ತಿನಲ್ಲಿ ‘ಬೈ’ ಲಭಿಸಿತ್ತು. ಎರಡನೇ ಸುತ್ತಿನಲ್ಲಿ ಭಜರಂಗ್‌ 0–7 ರಲ್ಲಿ ಬಲ್ಗೇರಿಯದ ವ್ಲಾದಿಮಿರ್‌ ವ್ಲಾದಿಮಿರೋವ್‌ ಕೈಯಲ್ಲಿ ನಿರಾಸೆ ಅನುಭವಿಸಿದರು. ಆದರೆ ರಿಪಿಚೇಸ್‌ ವಿಭಾಗದಲ್ಲಿ ಅದೃಷ್ಟ ಒಲಿಯಿತು.ಭಜರಂಗ್‌ ಅವರು ಲಂಡನ್‌ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತ ಯೋಗೇಶ್ವರ್‌ ದತ್‌ ಬದಲು ಕಣಕ್ಕಿ­ಳಿದಿದ್ದರು. ಮಂಡಿನೋವಿನಿಂದ ಪೂರ್ಣವಾಗಿ ಚೇತರಿ­ಸಿ­ಕೊಳ್ಳದ ಕಾರಣ ಯೋಗೇಶ್ವರ್‌ ಸ್ಪರ್ಧೆಗೆ ಇಳಿಯಲಿಲ್ಲ.ಹಿತೇಂದರ್‌ 0–8 ರಲ್ಲಿ ಜಾರ್ಜಿಯದ ಜೆನೊ ಪೆಟ್ರಿಶ್ವಿಲಿ ಎದುರು ಪರಾಭವಗೊಂಡರು. ಪವನ್‌ ಮೊದಲ ಸುತ್ತಿನಲ್ಲೇ ಎಡವಿದರು. ಆದರೆ ಚೀನಾದ ಫೆಂಗ್‌ ಜಾಂಗ್‌ ಎದುರು ಸೋಲುವ ಮುನ್ನ (8–9) ತಕ್ಕ ಪೈಪೋಟಿ ನೀಡಲು ಯಶಸ್ವಿಯಾದರು.ಭಾರತದ ಕುಸ್ತಿಪಟು ಆರಂಭದಲ್ಲಿ 0–4 ರಲ್ಲಿ ಹಿನ್ನಡೆಯಲ್ಲಿದ್ದರು. ಆದರೆ ಮರುಹೋರಾಟ ನಡೆಸುವಲ್ಲಿ ಯಶಸ್ವಿಯಾದರು. ಆ ಬಳಿಕ 5–9 ರಲ್ಲಿ ಹಿನ್ನಡೆ ಅನುಭವಿಸಿದ್ದ  ಪವನ್‌ ಕೊನೆಯ ಕೆಲವು ಸೆಕೆಂಡ್‌ಗಳಲ್ಲಿ ಸತತ ಮೂರು ಪಾಯಿಂಟ್‌ ಗಿಟ್ಟಿಸಿಕೊಂಡರು. ಆದರೆ ಅಲ್ಪ ಅಂತರದಲ್ಲಿ ಗೆಲುವಿನ ಅವಕಾಶ ಕಳೆದುಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry