ಬುಧವಾರ, ಜನವರಿ 22, 2020
17 °C
ಕೆಎಸ್‌ಸಿಎ: ಒಡೆಯರ್‌, ಬ್ರಿಜೇಶ್‌ ಅಧಿಕಾರ ಸ್ವೀಕಾರ

‘ಕೆಪಿಎಲ್‌ ಟೂರ್ನಿ ಆಯೋಜಿಸುತ್ತೇವೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಗ್ರಾಮೀಣ ಪ್ರದೇಶದ ಆಟಗಾರರಿಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ನಾವು ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ಕ್ರಿಕೆಟ್‌ ಟೂರ್ನಿ ಶುರು ಮಾಡಿದ್ದೆವು. ಆದರೆ ಹಿಂದಿನ ಆಡಳಿತ ಈ ಟೂರ್ನಿ ನಡೆಸಲಿಲ್ಲ. ನಾವು ಖಂಡಿತ ಕೆಪಿಎಲ್‌ ಆಯೋಜಿಸುತ್ತೇವೆ’ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ (ಕೆಎಸ್‌ಸಿಎ) ನೂತನ ಅಧ್ಯಕ್ಷ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಹಾಗೂ ಕಾರ್ಯದರ್ಶಿ ಬ್ರಿಜೇಶ್‌ ಪಟೇಲ್‌ ಭರವಸೆ ನೀಡಿದರು.



ಬುಧವಾರ ಅವರು ಸಂಸ್ಥೆಯ ಪದಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ಕ್ಲಬ್‌ ಕ್ರಿಕೆಟ್‌ಗೆ ಆದ್ಯತೆ ನೀಡುತ್ತೇವೆ. ಹಿಂದಿನ ಆಡಳಿತ ಹಲವು ಟೂರ್ನಿಗಳನ್ನು ಸ್ಥಗಿತಗೊಳಿಸಿತ್ತು. ಕೆಲ ಟೂರ್ನಿಗಳ ಮಾದರಿಯಲ್ಲಿ ಮಾರ್ಪಾಡು ಮಾಡಿತ್ತು. ಅವುಗಳನ್ನು ಅಚ್ಚುಕಟ್ಟಾಗಿ ಮೊದಲಿನಂತೆ ಆಯೋಜಿಸಲಿದ್ದೇವೆ. ಕೆಪಿಎಲ್‌, ಡೈಮಂಡ್‌ ಜುಬಿಲಿ ಟೂರ್ನಿ. ವೈಎಸ್‌ಆರ್‌ ಲೀಗ್‌, 14 ವರ್ಷದೊಳಗಿನವರ ಟೂರ್ನಿಗೆ ಮಹತ್ವ ನೀಡುತ್ತೇವೆ’ ಎಂದು ಒಡೆಯರ್‌ ಹೇಳಿದರು.



ಹಿಂದಿನ ಆಡಳಿತ ಕೈಗೆತ್ತಿಕೊಂಡಿರುವ ಕಾಮಗಾರಿ ಹಾಗೂ ಇನ್ನಿತರ ಕೆಲಸಗಳನ್ನು ಮುಂದುವರಿಸುವ ಭರವಸೆಯನ್ನು ಬ್ರಿಜೇಶ್‌ ನೀಡಿದರು. ‘ಕೆಲ ಕಾಮಗಾರಿಗಳು ನಡೆಯುತ್ತಿವೆ. ಅವುಗಳನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ಹಾಗೇ, ಗ್ರಾಮೀಣ ಪ್ರದೇಶಗಳತ್ತಲೂ ಹೆಚ್ಚಿನ ಗಮನ ಹರಿಸುತ್ತೇವೆ. ಸದ್ಯ ರಣಜಿ ತಂಡದ ಪ್ರದರ್ಶನ ತೃಪ್ತಿದಾಯಕವಾಗಿಲ್ಲ. ಅದರ ಬಗ್ಗೆ ಕೂಡ ಶೀಘ್ರ ಗಮನ ಹರಿಸಬೇಕು’ ಎಂದರು.



ಅಧಿಕಾರ ಸ್ವೀಕಾರ ಅಂಗವಾಗಿ ಅಧ್ಯಕ್ಷರ ಹಾಗೂ ಕಾರ್ಯದರ್ಶಿ ಕೊಠಡಿಯಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರು ಇದ್ದರು.



ಇಂದು ಸಭೆ: ನೂತನ ಆಡಳಿತ ಮಂಡಳಿಯ ಮೊದಲ ಸಭೆ ಗುರುವಾರ ನಡೆಯಲಿದೆ. ‘ನಾವು ಗುರುವಾರ ಆಡಳಿತ ಮಂಡಳಿ ಸಭೆ ನಡೆಸಲಿದ್ದೇವೆ. ಅದರಲ್ಲಿ ಮುಂದೇನು ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸುತ್ತೇವೆ’ ಎಂದೂ ಒಡೆಯರ್‌ ಹೇಳಿದರು.



ಉತ್ತಮ ಸೌಲಭ್ಯದ ಭರವಸೆ: ಅಧಿಕಾರ ವಹಿಸಿಕೊಂಡ ಬಳಿಕ ಒಡೆಯರ್‌–ಬ್ರಿಜೇಶ್‌ ಮೊದಲು ಮಾಡಿದ ಕೆಲಸ ಸಂಸ್ಥೆಯ ಸಿಬ್ಬಂದಿ ಜೊತೆ ಸಭೆ ಆಯೋಜಿಸಿದ್ದು. ಸದಸ್ಯರಿಗೆ ಉತ್ತಮ ಸೌಲಭ್ಯದ ಭರವಸೆಯನ್ನು ಅವರು ನೀಡಿದ್ದಾರೆ.



‘2007–2010ರ ನಡುವೆ ಇದ್ದ ಸೌಲಭ್ಯವನ್ನು ಮತ್ತೆ ಜಾರಿಗೆ ತರುವುದಾಗಿ ಒಡೆಯರ್‌–ಬ್ರಿಜೇಶ್‌ ಹೇಳಿದರು. ಅದರಲ್ಲಿ ಅಂತರರಾಷ್ಟ್ರೀಯ ಪಂದ್ಯ ನಡೆದಾಗ ನೀಡುತ್ತಿದ್ದ ಬೋನಸ್‌ ಸೌಲಭ್ಯ ಕೂಡ ಸೇರಿದೆ. ಕಚೇರಿ ಸಮಯದಲ್ಲೂ ಬದಲಾವಣೆ ಮಾಡುವುದಾಗಿ ಹೇಳಿದರು’ ಎಂದು ಸಂಸ್ಥೆಯ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)