ಶುಕ್ರವಾರ, ಜೂನ್ 18, 2021
28 °C
ರಾಜ್ಯ ಸರ್ಕಾರಿ ನೌಕರರ ಸಂಘ ಆಗ್ರಹ

‘ಕೇಂದ್ರ ಮಾದರಿಯಲ್ಲೇ ಶೇ 10 ತುಟ್ಟಿಭತ್ಯೆ ನೀಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೇಂದ್ರ ಸರ್ಕಾರ ತನ್ನ ನೌಕರರಿಗೆ ಏಪ್ರಿಲ್‌ನಿಂದ ಅನ್ವಯವಾಗುವಂತೆ ಶೇ 10 ತುಟ್ಟಿಭತ್ಯೆ ಮಂಜೂರು ಮಾಡಿದೆ. ರಾಜ್ಯ ಸರ್ಕಾರ ಇದೇ ಮಾದರಿಯನ್ನು ಅನುಸರಿಸಿ ಏಪ್ರಿಲ್‌­ನಿಂದಲೇ ತುಟ್ಟಿಭತ್ಯೆ ಮಂಜೂರು ಮಾಡಬೇಕು’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘ ಆಗ್ರಹಿಸಿದೆ.ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಲ್‌.ಬೈರಪ್ಪ ಹಾಗೂ ಪ್ರಧಾನ ಕಾರ್ಯದರ್ಶಿ ಬಿ.ಎಂ.ಪಟೇಲ್‌ ಪಾಂಡು, ‘ರಾಜ್ಯ ಸರ್ಕಾರಿ ನೌಕರರ ವೈದ್ಯಕೀಯ ಚಿಕಿತ್ಸೆ­ಗಾಗಿ ಜ್ಯೋತಿ ಸಂಜೀವಿನಿ ಯೋಜನೆಯನ್ನು ಅನುಷ್ಠಾನ ಮಾಡಲಾಗುವುದು ಎಂದು ಬಜೆಟ್‌­ನಲ್ಲಿ ಘೋಷಿಸಲಾಗಿದೆ. ಇದನ್ನು ಶೀಘ್ರದಲ್ಲಿ ಅನು­ಷ್ಠಾನ ಮಾಡಬೇಕು’ ಎಂದು ಒತ್ತಾಯಿಸಿದರು.‘ರಾಜ್ಯ ಸರ್ಕಾರವು ಹೈದರಾಬಾದ್‌–ಕರ್ನಾಟಕ ಪ್ರಾಂತ್ಯದ ಅಭಿವೃದ್ಧಿಗೆ ಅಧಿನಿಯಮ 371 (ಜೆ) ಅನುಷ್ಠಾನಗೊಳಿಸುತ್ತಿರುವುದು ಸ್ವಾಗ­ತಾರ್ಹ. ಇದರ ಅನುಷ್ಠಾನಕ್ಕೆ ರೂಪುರೇಷೆಗಳನ್ನು ಸಿದ್ಧಪಡಿಸಲು ಸಮಿತಿ ರಚಿಸಲಾಗಿದೆ. ಆದರೆ, ಮಸೂದೆ  ಅಂತಿಮಗೊಳ್ಳುವ ತನಕ ಎಲ್ಲ  ಇಲಾಖೆಗಳ ಬಡ್ತಿಯನ್ನು ತಡೆ ಹಿಡಿಯಲಾಗಿದೆ. ಇದರಿಂದ ನಿವೃತ್ತಿ ಅಂಚಿನಲ್ಲಿರುವ ನೌಕರರು ಬಡ್ತಿಯಿಂದ ವಂಚಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಡ್ತಿ ಪ್ರಕ್ರಿಯೆಯನ್ನು ಮುಂದುವರಿಸಬೇಕು’ ಎಂದು ಆಗ್ರಹಿಸಿದರು.ಸಂಘದ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಇದೇ 25ರಂದು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆಯಲಿದ್ದು, ರಾಜ್ಯಪಾಲ ಎಚ್‌.ಆರ್‌.ಭಾರದ್ವಾಜ್‌ ಕಾರ್ಯಕ್ರಮ ಉದ್ಘಾಟಿಸುವರು ಎಂದರು.ಚುನಾವಣಾ ಸಿಬ್ಬಂದಿಯ ಗೌರವಧನ ಹೆಚ್ಚಿಸಿ’

‘ಚುನಾವಣಾ ಕಾರ್ಯದಲ್ಲಿ ಪಾಲ್ಗೊಳ್ಳುವ ರಾಜ್ಯ ಸರ್ಕಾರಿ ನೌಕರರಿಗೆ ನಿಗದಿಪಡಿಸಿರುವ ಗೌರವ­ಧನ ವೈಜ್ಞಾನಿಕವಾಗಿಲ್ಲ. ಈಗಿನ ಕಾಲಕ್ಕೆ ತಕ್ಕಂತೆ ಗೌರವಧನ ಹೆಚ್ಚಳ ಮಾಡಬೇಕು. ಜೊತೆಗೆ ಗೌರವ­ಧನ ಪಾವತಿಯಲ್ಲಿ ಏಕರೂಪ ನೀತಿ ಅನುಸರಿಸಬೇಕು’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಲ್‌.ಬೈರಪ್ಪ ಒತ್ತಾಯಿಸಿದರು.‘ಮತಗಟ್ಟೆಗಳಲ್ಲಿ ಶೌಚಾಲಯ, ಕುಡಿಯುವ ನೀರು, ವಿದ್ಯುತ್‌ ಸಂಪರ್ಕ ಸೇರಿದಂತೆ ಅಗತ್ಯ ಮೂಲ­ಸೌಕರ್ಯ ಒದಗಿಸಬೇಕು. ಗರ್ಭಿಣಿಯರು, ಅನಾರೋಗ್ಯಪೀಡಿತರು, ಅಂಗವಿಕಲರು, ನಿವೃತ್ತಿ ಅಂಚಿ­­ನಲ್ಲಿರುವ ನೌಕರರಿಗೆ ಚುನಾವಣಾ ಕಾರ್ಯಗಳಿಂದ ವಿನಾಯಿತಿ ನೀಡಬೇಕು’ ಎಂದು ಅವರು ಆಗ್ರಹಿ­ಸಿದರು. ‘ಎರಡು ದಿನಗಳ ಕಾಲ ಚುನಾವಣಾ ಕಾರ್ಯದಲ್ಲಿ ಸಿಬ್ಬಂದಿ ತೊಡಗುತ್ತಾರೆ. ಮತ­ಪೆಟ್ಟಿಗೆಗಳನ್ನು ಭದ್ರತಾ ಕೊಠಡಿಗೆ ತಲುಪಿಸಿ ಸಿಬ್ಬಂದಿ ಮನೆಗೆ ಮರಳುವಾಗ ಮಧ್ಯರಾತ್ರಿ ಆಗಿರುತ್ತದೆ. ಹೀಗಾಗಿ ಮತದಾನದ ಮರುದಿನವನ್ನು ಅನ್ಯ ಕಾರ್ಯನಿಮಿತ್ತ ಎಂದು ಪರಿಗಣಿಸಬೇಕು’ ಎಂದರು.‘ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಸೂಕ್ತ ಭದ್ರತೆ ಒದ­ಗಿಸಬೇಕು. ಇಂತಹ ಮತಗಟ್ಟೆಗೆ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಬಾರದು. ಚುನಾವಣಾ ಕಾರ್ಯ­ದಲ್ಲಿ ನಿಯೋಜನೆಗೊಳ್ಳುವ ಸಿಬ್ಬಂದಿಗೆ ಮತದಾನ ಮಾಡಲು ಅವಕಾಶ ಕಲ್ಪಿಸಬೇಕು’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.