‘ಕೈ’ ಚಿನ್ಹೆಯಲ್ಲಿ ಗೆದ್ದವರಿಗೇ ‘ಕೈ’ಕೊಡುವರೇ?

7
ಮಂಡ್ಯ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ

‘ಕೈ’ ಚಿನ್ಹೆಯಲ್ಲಿ ಗೆದ್ದವರಿಗೇ ‘ಕೈ’ಕೊಡುವರೇ?

Published:
Updated:

ಮಂಡ್ಯ: ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸೆ.17 ರಂದು ಚುನಾವಣೆ ನಡೆಯಲಿದ್ದು, ಅಧ್ಯಕ್ಷ ಸ್ಥಾನಕ್ಕೆ ಏರಲು ಪೈಪೋಟಿ ತೀವ್ರಗೊಂಡಿದ್ದು, ಜಿಲ್ಲಾ ಕಾಂಗ್ರೆಸ್‌ ನಾಯಕರ ಎರಡು ಬಣಗಳ ನಡುವಿನ ತಿಕ್ಕಾಟಕ್ಕೆ ವೇದಿಕೆಯಾಗಿದೆ.

ಮೂಲ ಕಾಂಗ್ರೆಸ್ಸಿಗರ ಬಣವನ್ನು ಮಣಿಸಲು ಕೆಲ ಕಾಂಗ್ರೆಸ್‌ ನಾಯಕರು, ಧನ ಬಲವಿರುವ ಪಕ್ಷೇತರ ಸದಸ್ಯರೊಬ್ಬರಿಗೆ ಮಣೆ ಹಾಕಲು ಮುಂದಾಗಿರುವುದು ಪಕ್ಷದಲ್ಲಿ ಬೇಗುದಿಯ ವಾತಾವರಣ ಸೃಷ್ಟಿಸಿದೆ.ಜಿಲ್ಲಾ ಘಟಕದ ಅಧ್ಯಕ್ಷರು ಸದಸ್ಯರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್‌ ಅವರೂ ಪಕ್ಷದ ಹಾಗೂ ಪಕ್ಷೇತರ ಸದಸ್ಯರೊಂದಿಗೆ ಮಾತುಕತೆ ನಡೆಸಿದ್ದಾರೆ. ಇಬ್ಬರೂ ನಾಯಕರು ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ.ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಅಧ್ಯಕ್ಷ ಗದ್ದುಗೆಗೆ ಏರಲು ನಗರಸಭೆಗೆ ಮೂರನೇ ಬಾರಿಗೆ ಆಯ್ಕೆಯಾಗಿರುವ ಹೊಸಹಳ್ಳಿ ಬೋರೇಗೌಡ ಹಾಗೂ ಎರಡನೇ ಬಾರಿಗೆ ಆಯ್ಕೆಯಾಗಿರುವ ಲೋಕೇಶ್‌ ಪೈಪೋಟಿ ನಡೆಸಿದ್ದಾರೆ. ಈ ನಡುವೆ ರಾಮಲಿಂಗು ಎನ್ನುವ ಸದಸ್ಯರ ಹೆಸರೂ ಕೇಳಿ ಬರುತ್ತಿದೆ.ಬಲಾಬಲ: ಮಂಡ್ಯ ನಗರಸಭೆಯಲ್ಲಿ ಒಟ್ಟು 35 ಮಂದಿ ಸದಸ್ಯರಿದ್ದಾರೆ. ಅದರಲ್ಲಿ ಕಾಂಗ್ರೆಸ್‌ ಪಕ್ಷದಿಂದ 15 ಮಂದಿ ಆಯ್ಕೆಯಾಗಿದ್ದರೆ, ಜೆಡಿಎಸ್‌ನಿಂದ ಒಂಬತ್ತು ಮಂದಿ ಆಯ್ಕೆಯಾಗಿದ್ದಾರೆ. 10 ಮಂದಿ ಪಕ್ಷೇತರ ಸದಸ್ಯರಿದ್ದರೆ, ಒಬ್ಬರು ಬಿಜೆಪಿ ಪಕ್ಷದಿಂದ ಆಯ್ಕೆಯಾಗಿದ್ದಾರೆ.ಸಂಸದೆ ರಮ್ಯಾ ಹಾಗೂ ಸಚಿವ ಅಂಬರೀಷ್‌ ಮತದಾನದ ಹಕ್ಕನ್ನು ಹೊಂದಿದ್ದಾರೆ. ಇವರಿಬ್ಬರನ್ನೂ ಸೇರಿಸಿಕೊಂಡರೇ ಕಾಂಗ್ರೆಸ್‌ ಪಕ್ಷದವರೇ 17 ಮಂದಿ ಸದಸ್ಯರಾಗುತ್ತಾರೆ. ಸರಳ ಬಹುಮತಕ್ಕೆ 19 ಮಂದಿ ಸದಸ್ಯರ ಅಗತ್ಯವಿದೆ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಬಹುತೇಕ ಪಕ್ಷೇತರ ಸದಸ್ಯರು ಕಾಂಗ್ರೆಸ್‌ ಪರವಾಗಿ ಪ್ರಚಾರ ಮಾಡಿದ್ದಾರೆ. ಇದರಲ್ಲಿ ಕೆಲವರು ಅಧಿಕೃತವಾಗಿ ಕಾಂಗ್ರೆಸ್ಸಿಗೂ ಸೇರ್ಪಡೆಗೊಂಡಿದ್ದಾರೆ.ಹಣ ಹಂಚಿಕೆ: ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬೆಂಬಲ ಗಳಿಸಲು ಈಗಾಗಲೇ ಕಾಂಗ್ರೆಸ್‌ ಪಕ್ಷದ ಹಾಗೂ ಪಕ್ಷೇತರ ಕೆಲ ಸದಸ್ಯರಿಗೆ ಹಣ ನೀಡಲಾಗಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.ಕಾಂಗ್ರೆಸ್‌ ಮುಖಂಡರೊಬ್ಬರೇ ಹಣ ಹಂಚಿದ್ದು, ಪಕ್ಷ ಯಾರಿಗೆ ಮತ ಹಾಕುವಂತೆ ಸೂಚಿಸುತ್ತದೆಯೋ ಅವರಿಗೆ ಬೆಂಬಲಿಸಬೇಕು ಎಂದು ಹಣ ನೀಡುವ ಸಂದರ್ಭದಲ್ಲಿ ತಿಳಿಸಲಾಗಿದೆ. ಪಕ್ಷದವರು ಸೂಚಿಸಿದವರಿಗೆ ಮತ ಹಾಕಲು ಪಕ್ಷದ ಸದಸ್ಯರಿಗೇ ಹಣ ನೀಡಿದ್ದು ಏಕೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.ಒಂಬತ್ತು ಸದಸ್ಯರನ್ನು ಹೊಂದಿರುವ ಜೆಡಿಎಸ್‌ ಪಕ್ಷವು ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದೆ. ಬಹುತೇಕ ಪಕ್ಷೇತರ ಸದಸ್ಯರು ಕಾಂಗ್ರೆಸ್‌ನತ್ತ ವಾಲಿದ್ದಾರೆ. ಅದರಲ್ಲೂ ಕೆಲವರು ಬೇಲಿ ಮೇಲೆ ಕುಳಿತುಕೊಂಡಿದ್ದಾರೆ. ಅಧಿಕಾರ ಸಿಗುವತ್ತ ಜಿಗಿಯಲು ಸಜ್ಜಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry