ಶನಿವಾರ, ಜೂನ್ 19, 2021
23 °C
ಡಂಕನ್‌ ಫ್ಲೆಚರ್‌ ವಿರುದ್ಧ ಹರಿಹಾಯ್ದ ಸುನಿಲ್‌ ಗಾವಸ್ಕರ್‌

‘ಕೋಚ್‌ ಹುದ್ದೆಗೆ ದ್ರಾವಿಡ್‌ ಸೂಕ್ತ ವ್ಯಕ್ತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಡಂಕನ್‌ ಫ್ಲೆಚರ್‌ ಅವರನ್ನು ಭಾರತ ಕ್ರಿಕೆಟ್‌ ತಂಡದ ಕೋಚ್‌ ಹುದ್ದೆಯಿಂದ ಕೂಡಲೇ ಕೆಳಗಿಳಿಸಬೇಕು ಎಂದು ಮಾಜಿ ಆಟಗಾರ ಸುನಿಲ್‌ ಗಾವಸ್ಕರ್‌ ಹೇಳಿದ್ದಾರೆ. ಮಾತ್ರವಲ್ಲ, ರಾಹುಲ್‌ ದ್ರಾವಿಡ್‌ ಅವರನ್ನು ಕೋಚ್‌ ಆಗಿ ನೇಮಿಸಬೇಕೆಂದು ಅಭಿಪ್ರಾಯ ಪಟ್ಟಿದ್ದಾರೆ.‘ಫ್ಲೆಚರ್‌ ತಂಡವನ್ನು ಯಶಸ್ಸಿನ ಹಾದಿಯಲ್ಲಿ ಕೊಂಡೊಯ್ಯುವಲ್ಲಿ ವಿಫಲರಾಗಿದ್ದಾರೆ. ಅವರಿಗೆ ನಾನು 10 ರಲ್ಲಿ 1.5 ಅಂಕಗಳನ್ನು ಮಾತ್ರ ನೀಡುವೆ. ಭಾರತ ತಂಡಕ್ಕೆ ಯುವ ಕೋಚ್‌ ಒಬ್ಬರನ್ನು ನೇಮಿಸುವುದು ಒಳ್ಳೆಯದು’ ಎಂದು ಗಾವಸ್ಕರ್‌ ಚಾನೆಲ್‌ವೊಂದಕ್ಕೆ ತಿಳಿಸಿದ್ದಾರೆ.‘ರಾಹುಲ್‌ ದ್ರಾವಿಡ್‌ ಅವರು ಭಾರತ ತಂಡದ ಮುಖ್ಯ ಕೋಚ್‌ ಹುದ್ದೆಗೆ ಸೂಕ್ತ ವ್ಯಕ್ತಿ ಎಂಬ ಅಭಿಪ್ರಾಯ ನನ್ನದು. ಏಕೆಂದರೆ ನಾಯಕನಾಗಿ ಅವರು ಯಶಸ್ಸು ಕಂಡಿದ್ದರು. ಅವರ ನೇತೃತ್ವದಲ್ಲಿ ಭಾರತ ತಂಡ ವೆಸ್ಟ್‌ ಇಂಡೀಸ್‌ ಮತ್ತು ಇಂಗ್ಲೆಂಡ್‌ನಲ್ಲಿ ಸರಣಿ ಗೆಲುವು ಸಾಧಿಸಿತ್ತು. ದ್ರಾವಿಡ್‌ ಅವರನ್ನು ಎಲ್ಲರೂ ಗೌರವಿಸುವರು. ಅವರು ನೀಡುವ ಸಲಹೆಗಳನ್ನು ಆಟಗಾರರು ಗಂಭೀರವಾಗಿ ಪರಿಗಣಿಸುವುದು ಖಚಿತ’ ಎಂದು ನುಡಿದಿದ್ದಾರೆ.‘ಫ್ಲೆಚರ್‌  ತಂಡದ ಯಶಸ್ಸಿಗಾಗಿ ಯಾವುದೇ ಕೆಲಸ ಮಾಡಿಲ್ಲ. ಆಟಗಾರ ನಾಗಿದ್ದ ಸಂದರ್ಭದಲ್ಲಿ ಅವರು ಅದ್ಭುತ ಸಾಧನೆಯನ್ನೇನೂ ಮಾಡಿರಲಿಲ್ಲ. ಫ್ಲೆಚರ್‌ ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿಗೆ ಬೇಡವಾಗಿದ್ದರು’ ಎಂದು ಹೇಳಿದ್ದಾರೆ.‘ಒಬ್ಬ ಕೋಚ್‌ ಬದಲಾವಣೆಗಳಿಗೆ ಹೊಂದಿಕೊಂಡು ತಂಡಕ್ಕೆ ಸೂಕ್ತ ರೀತಿ ಯಲ್ಲಿ ಮಾರ್ಗದರ್ಶನ ನೀಡಬೇಕು. ಕಳಪೆ ಪ್ರದರ್ಶನ ನೀಡಿದ್ದಾರೆ ಎಂಬ ಕಾರಣಕ್ಕೆ ವೀರೇಂದ್ರ ಸೆಹ್ವಾಗ್‌, ಗೌತಮ್‌ ಗಂಭೀರ್‌ ಮತ್ತು ಹರಭಜನ್‌ ಸಿಂಗ್‌ ಅವರನ್ನು ತಂಡದಿಂದ ಕೈಬಿಡಲಾಗಿದೆ. ಅದೇ ರೀತಿ ಉತ್ತಮ ಫಲಿತಾಂಶ ನೀಡದ ಕೋಚ್‌ ಹಾಗೂ ಸಹಾಯಕ ಸಿಬ್ಬಂದಿಯನ್ನೂ ತಂಡದಿಂದ ಕೈಬಿಡಬೇಕು’ ಎಂದಿದ್ದಾರೆ.‘ಭಾರತ ತಂಡದ ಕೋಚ್‌ ಆಗಿದ್ದ ಗ್ಯಾರಿ ಕರ್ಸ್ಟನ್‌ ಮತ್ತು ಜಾನ್‌ ರೈಟ್‌ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾಧನೆ ಮಾಡಿದ್ದರು. ಆದರೆ ಫ್ಲೆಚರ್‌ ಅಂತಹ ಯಾವುದೆ ಸಾಧನೆ ಮಾಡಿಲ್ಲ’ ಎಂಬುದು ಗಾವಸ್ಕರ್‌ ಹೇಳಿಕೆ.‘ಫ್ಲೆಚರ್‌ ಕೋಚ್‌ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಭಾರತ ತಂಡ ದಲ್ಲಿ ಯಾವುದೇ ಸುಧಾರಣೆ ಕಂಡು ಬಂದಿಲ್ಲ. ಆಟಗಾರರು ವೈಯಕ್ತಿಕವಾ ಗಿಯೂ ಪ್ರಯೋಜನ ಪಡೆದಿಲ್ಲ. 2011ರ ವಿಶ್ವಕಪ್‌ ಗೆದ್ದ ಬಳಿಕ ಭಾರತ ತಂಡ ಕುಸಿತದ ಹಾದಿ ಹಿಡಿದಿದೆ. ಮುಂದಿನ ವಿಶ್ವಕಪ್‌ಗೆ 11 ತಿಂಗಳು ಗಳು ಇವೆ. ಆದ್ದರಿಂದ ಈಗಲೇ ಒಂದು ಸ್ಪಷ್ಟ ನಿರ್ಧಾರ ಕೈಗೊಳ್ಳುವುದು ಅಗತ್ಯ’ ಎಂದು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.